ಹುಳಿಯಾರು : 

      ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ 6 ತಿಂಗಳ ಒಳಗೆ ಚುನಾವಣೆ ಮಾಡಬೇಕೆನ್ನುವ ನಿಯಮವಿದೆ. ಆದರೆ ಹುಳಿಯಾರು ಗ್ರಾಮ ಪಂಚಾಯ್ತಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿ 3 ವರ್ಷಗಳಾಗಿದ್ದರೂ ಚುನಾವಣೆ ಮಾಡಿರಲಿಲ್ಲ. ಆಡಳಿತಾಧಿಕಾರಿಯಾಗಿ ನೇಮಕಗೊಂಡ 6 ತಿಂಗಳೊಳಗೆ ಚುನಾವಣೆ ನಡೆಸಬೇಕೆಂಬ ಕಾನೂನು ಇದೆ. ಆದರೆ ಹುಳಿಯಾರು ಪಂಚಾಯ್ತಿಗೆ ಆಡಳಿತಾಧಿಕಾರಿ ನೇಮಕಗೊಂಡು ವರ್ಷ ಕಳೆದರೂ ಚುನಾವಣೆ ಮಾಡಿರಲಿಲ್ಲ.

      ಚುನಾಯಿತ ಪ್ರತಿನಿಧಿಗಳಿಲ್ಲದೆ ಇಡೀ ಆಡಳಿತ ವ್ಯವಸ್ಥೆ ಅಧಿಕಾರಿಯ ಕಪಿಮುಷ್ಠಿಗೆ ಸಿಲುಕಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿತ್ತು.
ಹೌದು, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ 357 (ಖ) ರನ್ವಯ ರಚನೆಯಾದ ಮದ್ಯಕಾಲೀನ ಮುನ್ಸಿಫಲ್ ಕೌನ್ಸಿಲ್‍ನ್ನು ಇದೇ ಅಧಿನಿಯಮ 1964 ಪ್ರಕರಣ 358 ರನ್ವಯ ರಚನೆಯಾದ ದಿನಾಂಕದಿಂದ 6 ತಿಂಗಳುಗಳ ಮೀರದ ಅವಧಿಯೊಳಗೆ ಹೊಸ ಮುನ್ಸಿಪಲ್ ಕೌನ್ಸಿಲರ್‍ಗಳ ರಚನೆಗಾಗಿ ಚುನಾವಣೆ ನಡೆಸಬೇಕಾಗಿರುತ್ತದೆ. ಹಾಗಾಗಿ 2018 ರ ಆಗಸ್ಟ್ ಮಾಹೆಯ ಒಳಗಾಗಿ ಹುಳಿಯಾರು ಪಂಚಾಯ್ತಿಗೆ ಚುನಾವಣೆ ನಡೆಸಬೇಕಿತ್ತು. ಚುನಾವಣಾ ಆಯೋಗವು ಕ್ಷೇತ್ರ ವಿಂಗಡಣೆಗೆ 2018 ರ ಏಪ್ರಿಲ್ ಮಾಹೆಯಲ್ಲಿ ಚುನಾವಣಾ ತುರ್ತು ನೋಟಿಸ್ ಸಹ ನೀಡಿತ್ತು. ಕ್ಷೇತ್ರ ವಿಂಗಡನೆ ಆಗಿದ್ದರೂ ಸಹ ಅದ್ಯಾಕೋ ಚುನಾವಣೆ ಮಾತ್ರ ಮಾಡಿರಲಿಲ್ಲ.

      ಅಚ್ಚರಿ ಎನ್ನುವಂತೆ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳನ್ನೇ ಪಟ್ಟಣ ಪಂಚಾಯ್ತಿಗೆ ಹಂಗಾಮಿ ಸದಸ್ಯರನ್ನಾಗಿ ಮುಂದುವರಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದರು. ಅಲ್ಲದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲೊಂದು ಹಾಗೂ ಜಿಲ್ಲಾ ಸಚಿವರ ಅಧ್ಯಕ್ಷತೆಯಲ್ಲೊಂದು ಸಭೆ ಸಹ ನಡೆಸಿ ಕೊಟ್ಯಾಂತರ ರೂ.ಗಳ ಕ್ರಿಯಾಯೋಜನೆಗೆ ಒಪ್ಪಿಗೆ ಸಹ ಪಡೆಯಲಾಗಿತ್ತು. ಗ್ರಾಪಂನ 14 ನೇ ಹಣಕಾಸಿನಲ್ಲಿ ನಿಯಮ ಬಾಹಿರವಾಗಿ ಸಾಮಗ್ರಿ ಖರೀದಿ ಸೇರಿದಂತೆ ಇತರೆ ಆರೋಪದ ಮೇರೆಗೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ 5 ಮಂದಿ ಸದಸ್ಯರುಗಳ ಸದಸ್ಯತ್ವವನ್ನು 2019 ರ ಏಪ್ರಿಲ್ ಮಾಹೆಯಲ್ಲಿ ಸರ್ಕಾರ ರದ್ದು ಮಾಡಿತು.

       ಪರಿಣಾಮ ಹಂಗಾಮಿ ಸದಸ್ಯರೆಲ್ಲರನ್ನೂ ವಜಾ ಮಾಡಿ 2019 ಸೆಪ್ಟೆಂಬರ್ ಮಾಹೆಯಲ್ಲಿ ಆಡಳಿತಾಧಿಕಾರಿಯಾಗಿ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಅವರನ್ನು ನೇಮಿಸಲಾಗಿತ್ತು. ಆಡಳಿತಾಧಿಕಾರಿ ನೇಮಕಗೊಂಡ 6 ತಿಂಗಳ ಒಳಗಾಗಿ ಚುನಾವಣೆ ಮಾಡಬೇಕೆನ್ನುವ ಕಾನೂನಿದ್ದು ಚುನಾವಣೆ ನಡೆಸಲು ಮೀಸಲಾತಿ ಸಹ ನಿಗಧಿ ಮಾಡಲಾಗಿತ್ತು. ಅದ್ಯಾಕೋ ಕಾಣೆ ಆಡಳಿತಾಧಿಕಾರಿ ನೇಮಕಗೊಂಡು ಒಂದೂವರೆ ವರ್ಷ ಕಳೆದರೂ ಚುನಾವಣೆ ಮಾಡದೆ ಅಧಿಕಾರಿಗಳಿಂದ ಆಡಳಿತ ನಡೆಸಲಾಗುತ್ತಿತ್ತು. ಮುಖ್ಯಾಧಿಕಾರಿಗಳ ವರ್ತನೆ, ಕುಡಿಯುವ ನೀರು, ಬೀದಿ ದೀಪ, ನಮೂನೆ 3 ವಿತರಣೆಗಳ ಬಗ್ಗೆ ಆರೋಪಗಳು ಕೇಳಿಬಂದಿದ್ದರೂ ಸಹ ಸ್ಪಂದಿಸುವವರಾರು ಇಲ್ಲದಾಗಿತ್ತು.

      ಗ್ರಾಪಂಗಳಿಗೆ ಚುನಾವಣೆ ನಡೆದರೂ ಸಹ ಹುಳಿಯಾರು ಪಟ್ಟಣ ಪಂಚಾಯ್ತಿಗೆ ಚುನಾವಣೆ ಮಾಡದಿರುವ ಬಗ್ಗೆ ಸಾರ್ವಜನಿಕ ವಯಲದಲ್ಲಿ ಟೀಕೆಗಳು ಕೇಳಿಬರಲಾರಂಭಿಸಿದವು. ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿ 3 ವರ್ಷಗಳು ಕಳೆದರೂ ಚುನಾವಣೆ ಮಾಡದೆ ನಿರ್ಲಕ್ಷ್ಯಿಸಿರುವ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಲಾರಂಭಿಸಿದರು. ಮಾಧ್ಯಗಳ ಮೂಲಕ ಚುನಾವಣೆ ನಡೆಸಲು ಒತ್ತಡ ಶುರುವಾಯಿತು. ಪರಿಣಾಮ ಮಾ.29 ಕ್ಕೆ ಚುನಾವಣೆ ನಿಗಧಿ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ. ಸ್ಥಳಿಯವಾಗಿ ಈಗ ಚುನಾವಣೆ ಗರಿಗೆದರಿದ್ದು ಚುನಾವಣೆಗೆ ಸ್ಪರ್ಧಿಸಲಿರುವ ಆಕಾಂಕ್ಷಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಚುನಾವಣಾ ವೇಳಾಪಟ್ಟಿ: ಮಾ.17 ನಾಮಪತ್ರ ಸಲ್ಲಿಕೆಗೆ ಕೊನೆ ದಿನ, ಮಾ.18 ನಾಮಪತ್ರ ಪರಿಶೀಲನೆ, ಮಾ.20 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ, ಮಾ.29 ಸೋಮವಾರ ಚುನಾವಣೆ, ಮಾ.30 ಮರುಮತದಾನ ಏರ್ಪಾಡಾದರೆ ಮತದಾನ, ಮಾ.31 ತಾಲ್ಲೂಕು ಕೇಂದ್ರದಲ್ಲಿ ಮತ ಏಣಿಕೆ, ಮಾ.10 ರಿಂದ 31 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

      ವಾರ್ಡ್‍ವಾರು ಮೀಸಲಾತಿ ವಿವರ: 1 ನೇ ವಾರ್ಡ್ ಬಿಸಿಎಂ ಎ ಮಹಿಳೆ, 2 ನೇ ವಾರ್ಡ್ ಸಾಮಾನ್ಯ, 3 ನೇ ವಾರ್ಡ್ ಸಾಮಾನ್ಯ, 4 ನೇ ವಾರ್ಡ್ ಬಿಸಿಎಂ ಎ, 5 ನೇ ವಾರ್ಡ್ ಸಾಮಾನ್ಯ ಮಹಿಳೆ, 6 ನೇ ವಾರ್ಡ್ ಎಸ್‍ಟಿ, 7 ನೇ ವಾರ್ಡ್ ಬಿಸಿಎಂ ಬಿ, 8 ನೇ ವಾರ್ಡ್ ಸಾಮಾನ್ಯ, 9 ನೇ ವಾರ್ಡ್ ಸಾಮಾನ್ಯ, 10 ನೇ ವಾರ್ಡ್ ಬಿಸಿಎಂ ಎ ಮಹಿಳೆ, 11 ನೇ ವಾರ್ಡ್ ಬಿಸಿಎಂ ಎ, 12 ನೇ ವಾರ್ಡ್ ಎಸ್‍ಸಿ, 13 ನೇ ವಾರ್ಡ್ ಸಾಮಾನ್ಯ ಮಹಿಳೆ, 14 ನೇ ವಾರ್ಡ್ ಬಿಸಿಎಂ ಎ, 15 ನೇ ವಾರ್ಡ್ ಸಾಮಾನ್ಯ ಮಹಿಳೆ, 16 ನೇ ವಾರ್ಡ್ ಸಾಮಾನ್ಯ ಮಹಿಳೆ

(Visited 6 times, 1 visits today)