ಹುಳಿಯಾರು:

      ಪರಿಹಾರ ಮೊತ್ತ ಘೋಷಿಸದೆ ಸರ್ವೆಗೆ ಮುಂದಾಗಿರುವ ಕ್ರಮ ವಿರೋಧಿಸಿ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಹಾಗೂ ದಸೂಡಿ ಗ್ರಾಮ ಪಂಚಾಯ್ತಿಯ ರೈತರ ನಿಯೋಗ ಜಿಲ್ಲಾಧಿಕಾರಿಗಳನ್ನು ಸೋಮವಾರ ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿತು.

      ಚಿಕ್ಕನಾಯಕನಹಳ್ಳಿ ತಾಲೂಕಿನ ಮಾರ್ಗವಾಗಿ ಹಾಸನದಿಂದ ಚರ್ಲಪಲ್ಲಿಗೆ ಪೈಪ್ ಲೈನ್ ಮೂಲಕ ಅನಿಲ ಸಾಗಿಸುವ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಸರ್ವೆ ಮಾಡುತ್ತಿದ್ದಾರೆ. ಆದರೆ ಸರ್ವೆವೆ ಮೊದಲೇ ಈ ಯೋಜನೆಗೆ ಆಕ್ಷೇಪಣೆ ಸಲ್ಲಿಸಿ ಬಂದಿದ್ದರೂ ಸಹ ನಮ್ಮ ಅರ್ಜಿ ಇತ್ಯಾರ್ಥ ಮಾಡದೆ ಸರ್ವೆಗೆ ಮುಂದಾಗಿದ್ದಾರೆ ಎಂದು ರೈತರು ಈ ಸಂದರ್ಭದಲ್ಲಿ ದೂರಿದ್ದಾರೆ.

     ಗ್ಯಾಸ್ ಪೈಲ್‍ಲೈನ್ ಹೋಗುವ ಮಾರ್ಗದಲ್ಲಿ ಅತೀ ಸಣ್ಣ ರೈತರಿದ್ದು ಈ ಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆಗೆ ಭೂಸ್ವಾದೀನ ಮಾಡಿಕೊಂಡರೆ ಅನೇಕ ರೈತರ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಹಾಗಾಗಿ ನಮ್ಮ ಭಾಗ ಬಿಟ್ಟು ಬೇರೆಡೆ ಪೈಪ್‍ಲೈನ್ ಹಾದು ಹೋಗವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

     ಸರ್ಕಾರ ರಸ್ತೆ, ಗ್ಯಾಸ್ ಪೈಪ್ ಲೈನ್, ಪವರ್ ಗ್ರಿಡ್ ಕಾಮಗಾರಿಗೆ ಭೂ ಸ್ವಾಧೀನ ಮಾಡಿಕೊಂಡಿದ್ದರೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಅಲ್ಲದೆ ಕೊಟ್ಟಿರುವ ಕೆಲವೆಡೆ ತೀರ ಕಡಿಮೆ ಪರಿಹಾರ ಕೊಟ್ಟಿದ್ದಾರೆ. ಹಾಗಾಗಿ ಪರಿಹಾರ ಮೊತ್ತ ಘೋಷಿಸಿದರೆ ಕಡಿಮೆ ಎನ್ನಿಸಿದರೆ ಹೆಚ್ಚು ಮಾಡಲು ಹೋರಾಟ ಮಾಡಲು ಅನುಕೂಲ ಆಗುತ್ತದೆ. ಸರ್ವೆ ಮಾಡುವ ಮೊದಲು ಮೊತ್ತ ಘೋಷಿಸಲಿ, ಪೈನ್ ಪೈನ್ ಹಾಕುವ ಮೊದಲು ಪರಿಹಾರ ಹಣ ನೀಡಲಿ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

      ಇದಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿದ್ದು ತಕ್ಷಣ ಆಕ್ಷೇಪ ವ್ಯಕ್ತಪಡಿಸಿರುವ ರೈತರ ಸಭೆ ಕರೆದು ಸಮಸ್ಯೆ ಇತ್ಯಾರ್ತ ಪಡಿಸುವಂತೆ ವಿಶೇಷ ಭೂ ಸ್ವಾದೀನಾಧಿಕಾರಿ ಮಂಜುನಾಥ್ ಅವರಿಗೆ ತಿಳಿಸುವುದಾಗಿ ಹೇಳಿದರಲ್ಲದೆ ಆಕ್ಷೇಪಣೆಗೆ ಕಾಲವಕಾಶ ಮೀರಿದ್ದರೂ ಸಹ ಮತ್ತೊಮ್ಮೆ ಪ್ರತ್ಯೇಕವಾಗಿ ತಮ್ಮ ಆಕ್ಷೇಪಣಾ ಅರ್ಜಿಯನ್ನು ತಮಗೆ ಸಲ್ಲಿಸುವಂತೆ ರೈತರಿಗೆ ತಿಳಿಸಿದ್ದಾರೆ.

      ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್, ರೈತ ಮುಖಂಡ ಕೆಂಕೆರೆ ಸತೀಶ್, ತಾಪಂ ಸದಸ್ಯ ಪ್ರಸನ್ನಕುಮಾರ್, ಲಕ್ಕೇನಹಳ್ಳಿ ರಘು, ಈರಣ್ಣ, ನಾಗಪ್ಪ, ಎಲ್.ಬಿ.ಮಂಜುನಾಥ್, ಲಾ.ಪು.ಕರಿಯಪ್ಪ, ರೈತ ಸಂಘದ ನಾಗರಾಜು, ಮಲ್ಲಿಕಾರ್ಜುನ್ ಸೇರಿದಂತೆ ಮರೆನಡುಪಾಳ್ಯ, ದಬ್ಬಗುಂಟೆ, ಕಲ್ಲೇನಹಳ್ಳಿ, ಹೊಯ್ಸಲಕಟ್ಟೆ, ಲಕ್ಕೇನಹಳ್ಳಿ ಬಡಕೆಗುಡ್ಲು ಗ್ರಾಮಗಳ ಅನೇಕ ರೈತರು ನಿಯೋಗದಲ್ಲಿದ್ದರು.

(Visited 12 times, 1 visits today)