ಹುಳಿಯಾರು : 

      ಮುಕ್ತಿಧಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಪರಿಣಾಮ ಮೃತ ಸಂಬಂಧಿಕರ ಕಾರ್ ಹೆಡ್ ಲೈಟ್‍ನಲ್ಲಿ ಅಂತ್ಯಕ್ರಿಯೆ ನಡೆಸಿದ ಘಟನೆ ಹುಳಿಯಾರಿನ ಮುಕ್ತಿಧಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

        ಹುಳಿಯಾರಿನ ರಂಗಲಕ್ಷ್ಮಮ್ಮ ಅವರು ಶುಕ್ರವಾರ ಮಧ್ಯಾಹ್ನ ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ ನಿಧನರಾದರು. ಆಸ್ಪತ್ರೆಯ ಪ್ರೊಸಿಜರ್‍ಗಳನ್ನು ಮುಗಿಸಿ ಮೃತ ದೇಹ ತರುವಷ್ಟರಲ್ಲಿ ಶುಕ್ರವಾರ ರಾತ್ರಿಯಾಗಿತ್ತು. ಚಿಕ್ಕನಾಯಕನಹಳ್ಳಿಯ ಪೌರಕಾರ್ಮಿಕರು ಮೃತದೇಹವನ್ನು ಹುಳಿಯಾರಿಗೆ ತಂದಾಗ ಮುಕ್ತಿಧಾಮದಲ್ಲಿ ಮಾತ್ರ ವಿದ್ಯುತ್ ಇಲ್ಲದೆ ಕಾರ್ಗತ್ತಲಾಗಿತ್ತು.

      ಮುಕ್ತಿಧಾಮದ ಪರಿಚಯ ಇಲ್ಲದ ಚಿಕ್ಕನಾಯಕನಹಳ್ಳಿ ಪೌರಕಾರ್ಮಿಕರು ಕತ್ತಲಲ್ಲಿ ಅಂತ್ಯಕ್ರಿಯೆ ಮಾಡಲು ಅಕ್ಷರಶಃ ಪರದಾಡಿದರು. ಆಂಬ್ಯೂಲೆನ್ಸ್ ಬೆಳಕಲ್ಲಿ ಚಿತಾಗಾರ ಹುಡುಕಿದರು. ಅಲ್ಲಿಗೆ ಮೃತದೇಹ ಸಾಗಿಸುವಷ್ಟರಲ್ಲಿ ಮೃತರ ಸಂಬಂಧಿಕರು ತಮ್ಮ ಕಾರು ತಂದು ಹೆಡ್‍ಲೈಟ್ ಹಾಕಿ ಮತ್ತೊಷ್ಟು ಬೆಳಕಿನ ವ್ಯವಸ್ಥೆ ಮಾಡಿದರು.

      ಚಿತಾಗಾರದ ಮೇಲೆ ಮೃತದೇಹವಿಟ್ಟು ಅದರ ಮೇಲೆ ಸೌದೆ ಜೋಡಿಸಿ ಎಣ್ಣೆ ಸುರಿಯುವ ಅಷ್ಟೂ ಕೆಲಸವನ್ನೂ ಪೌರಕಾರ್ಮಿಕರು ಕತ್ತಲೆಯಲ್ಲಿ ತಡವರಿಸುತ್ತ ವಿಷಜಂತುಗಳ ಭಯ ಲೆಕ್ಕಿಸದೆ ಮಾಡಿಕೊಟ್ಟರು. ನಂತರ ಮೃತರ ಸಂಬಂಧಿಕರು ಅಂತ್ರಕ್ರಿಯೆ ವಿಧಿವಿಧಾನವನ್ನೂ ಸಹ ಕಾರಿನ ಹೆಡ್‍ಲೈಟ್ ಬೆಳಕಲ್ಲಿ ಮಾಡಿ ಹಿಂದಿರುಗಿದರು.

       ಹುಳಿಯಾರಿನ ಮುಕ್ತಿಧಾಮದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲಿ ಅಂತ್ಯಸಂಸ್ಕಾರ ನಡೆಸುವ ಅನಿವಾರ್ಯ ಕರ್ಮ ದಶಕಗಳಿಂದಲೂ ಇದೆ. ಟಿ.ಬಿ.ಜಯಚಂದ್ರ ಅವರೊಮ್ಮೆ, ಜೆ.ಸಿ.ಮಾಧುಸ್ವಾಮಿ ಅವರೊಮ್ಮೆ ಮುಕ್ತಿಧಾಮದ ಅಭಿವೃದ್ಧಿಗೆ ಹಣ ಕೊಟ್ಟರಾದರೂ ವಿದ್ಯುತ್ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಪರಿಣಾಮ ಕತ್ತಲೆಯಲ್ಲೇ ಅಂತ್ಯಕ್ರಿಯೆ ಇಲ್ಲಿ ದಶಕಗಳಿಂದಲೂ ನಡೆಸುತ್ತಿದ್ದಾರೆ. ರಾತ್ರಿ ಅಂತ್ಯಕ್ರಿಯೆಗೆ ಬರುವವರು ಟಾರ್ಚ್, ಚಾರ್ಜ್‍ರ್ ಲೈಟ್ ತರುವುದು ಅನಿವಾರ್ಯವಾಗಿದೆ. ಅಲ್ಲದೆ ಮೊಬೈಲ್ ಬೆಳಕಲ್ಲಿ ಅಂತ್ಯಕ್ರಿಯೆ ನಡೆಸಿದ ನಿದರ್ಶನಗಳೂ ಸಾಕಷ್ಟಿವೆ.

     ಹುಳಿಯಾರಿನ ಮುಕ್ತಿಧಾಮದ ಸುತ್ತ ಕಾಂಪೌಂಡ್ ವ್ಯವಸ್ಥೆಯಿಲ್ಲ. ತಂತಿಬೇಲಿ ಮಾತ್ರ ಹಾಕಿದ್ದು ಬೇಲಿಯ ಸುತ್ತಲೂ ಜಾಲಿಗಿಡಗಳು ಸೇರಿದಂತೆ ಅನಗತ್ಯ ಗಿಡಗಂಡೆಗಳು ಬೆಳದಿವೆ. ಹಾಗಾಗಿ ಮುಕ್ತಿಧಾಮದಲ್ಲಿ ವಿಷಜಂತುಗಳ ಕಾಟ ಇದ್ದೇ ಇರುತ್ತದೆ. ರಾತ್ರಿ ವಿದ್ಯುತ್ ಸಂಪರ್ಕವಿಲ್ಲವಾದ್ದರಿಂದ ಅಂತ್ಯಕ್ರಿಯೆ ನೆರವೇರಿಸಲು ಬರುವ ಮೃತರ ಕಡೆಯವರು ವಿಷಜಂತುಗಳ ಭಯದಲ್ಲಿ ಗಂಟೆಗಟ್ಟಲೆ ನಿಂತು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಕೆಲ ಸಮುದಾಯದವರು ರಾತ್ರಿ ಕತ್ತಲೆಯಲ್ಲೇ ಸ್ನಾನ, ಸೇರಿದಂತೆ ಕೆಲ ಕಾರ್ಯವನ್ನೂ ಮಾಡಬೇಕಾದ ದುಸ್ಥಿತಿ ಇದೆ.

 ವೈಯರ್ ಇದೆ ಸಂಪರ್ಕ ಕೊಟ್ಟಿಲ್ಲ :

      ಮುಕ್ತಿಧಾಮದ ಕಂಬ ಹಾಗೂ ಚಿತಾಗಾರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ವೈರ್ ಎಳೆದು ಬಲ್ಫ್‍ಗಳನ್ನು ಸಹ ಅಳವಡಿಸಲಾಗಿದೆ. ಆದರೆ ಸಂಪರ್ಕ ಮಾತ್ರ ಕೊಟ್ಟಿಲ್ಲ. ಬೆಸ್ಕಾಂನವರಿಗೆ ಹೇಳಿದರೆ ಹಳ್ಳಿ ಲೈನ್ ಹಾದುಹೋಗಿದ್ದು ನಿರಂತರ ಲೈನ್ ಟಿಸಿ ಅಳವಡಿಸಿ ಸಂಪರ್ಕ ಕೊಡುವುದಾಗಿ ಹೇಳಿ ಅನೇಕ ವರ್ಷಗಳೇ ಕಳೆದಿದ್ದರೂ ಇನ್ನೂ ಸಂಪರ್ಕ ಕೊಟ್ಟಿಲ್ಲ. ರಾತ್ರಿವೇಳೆ ಅಂತ್ಯಕ್ರಿಯೆ ಬಂದಾಗ ಅಧಿಕಾರಿಗಳಿಗೆ ಹಿಡಿಶಾಪಹಾಕಿ ತಮ್ಮ ಕಾರ್ಯ ಮುಗಿಸಿ ತೆರಳಿದವರು ಮರುದಿನ ವಿದ್ಯುತ್ ಸಮಸ್ಯೆ ಬಗ್ಗೆ ಚಾಕಾರ ಎತ್ತದಿದ್ದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. 
 

(Visited 14 times, 1 visits today)