ಹುಳಿಯಾರು:

     ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ನಿರ್ಮಿಸಲಾದ ರಸ್ತೆ ಬದಿಯ ಮಣ್ಣು ಸುರಿದ ಭಾರಿ ಮಳೆಗೆ ತೋಟಕ್ಕೆ ನುಗ್ಗುತ್ತಿದ್ದು ಗುಣಮಟ್ಟದ ಕಾಮಕಾರಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

      ತಿಮ್ಲಾಪುರ ಗೇಟ್‍ನಿಂದ ಹೊಸಹಳ್ಳಿ, ಹೊಸಹಳ್ಳಿಪಾಳ್ಯದ ಮೂಲಕ ಬಾಣಾವರ-ಹುಳಿಯಾರಿನ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಸ್ತೆ ಬಹಳ ವರ್ಷಗಳಿಂದ ಗುಂಡಿಗಳು ಬಿದ್ದು ಓಡಾಡಲು ತೀರ್ವ ತೊಂದರೆಯಾಗಿತ್ತು. ಈ ರಸ್ತೆಯ ಅವ್ಯವಸ್ಥೆ ಅರಿತು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೇರಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು.

      ಐದಾರು ತಿಂಗಳಿಂದ ನಡೆಯುತ್ತಿದ್ದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಹಿಂದೆ ರಸ್ತೆ ಬದಿಯಲ್ಲಿ ಮಣ್ಣು ಹಾಕುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಮಸ್ಯೆ ಸೃಷ್ಠಿಗೆ ಕಾರಣ ಎನ್ನಲಾಗಿದೆ. ಹೊಸಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ 1 ಕಿ.ಮೀ.ಭಾಗದ ರಸ್ತೆಯ ಪಕ್ಕದಲ್ಲಿ ಮಣ್ಣು ಹಾಕಿದ್ದು ಈ ಮಣ್ಣು ಬಿದ್ದ ಒಂದೇ ಒಂದು ಮಳೆಗೆ ಏಳೆಂಟು ಕಡೆ ಕುಸಿದು ಪಕ್ಕದ ತೋಟಕ್ಕೆ ನುಗ್ಗಿದೆ.

      ಹೀಗೆ ಮಳೆ ಬಂದರೆ ರಸ್ತೆಯುದ್ದಕ್ಕೂ ಕೊರಕಲು ಬಿದ್ದು ಮುಂದೆ ಮಾಡುವ ಡಾಂಬಾರು ರಸ್ತೆಗೆ ಹಾನಿಯಾಗುತ್ತದೆ. ತೋಟಕ್ಕೆ ಮಣ್ಣು ಹರಿದು ಬೆಳೆದ ಬೆಳೆಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಅರಿತು ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.

(Visited 1 times, 1 visits today)