ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ : ಗೋಡೆ ಕುಸಿತ

ಹುಳಿಯಾರು:

      ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿಯದೆ ವಾಸದ ಮನೆ ಹಾಗೂ ಗೋಡನ್‍ಗೆ ನುಗ್ಗಿದ ಪರಿಣಾಮ ಗೋಡನ್ ಗೋಡೆ ಕುಸಿದು ಸಾವಿರಾರು ರೂ. ಮೌಲ್ಯದ ಈರುಳ್ಳಿ, ಬೆಳ್ಳುಳ್ಳಿ, ಮಾವಿನ ಕಾಯಿ ನೆನೆದು ಹಾನಿಯಾದ ಘಟನೆ ಹುಳಿಯಾರು ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

      ಮಂಗಳೂರು ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ವಿಸ್ತರಣೆಯ ಕಾಮಗಾರಿ 3 ವರ್ಷಗಳಿಂದ ನಡೆಯುತ್ತಿದೆ. ಒಣಕಾಲುವೆ, ರಾಮಗೋಪಾಲ್ ಸರ್ಕಲ್, ಎಸ್‍ಎಲ್‍ಆರ್ ಬಂಕ್ ಬಳಿ ಕಾಮಗಾರಿ ಸ್ಥಗಿತವಾಗಿ ಏಳೆಂಟು ತಿಂಗಳುಗಳೇ ಕಳೆದಿದೆ. ಅಲ್ಲದೆ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಕಾಲಕಾಲಕ್ಕೆ ಕಾಮಗಾರಿ ವೀಕ್ಷಣೆ ಮಾಡದೆ ನಿರ್ಲಕ್ಷ್ಯಿಸಿದರ ಪರಿಣಾಮ ಚರಂಡಿ ಮತ್ತು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪರಿಣಾಮ ಪಟ್ಟಣದ ಚರಂಡಿ ನೀರು ಸರಾಗವಾಗಿ ಹರಿಯದೆ ಪಟ್ಟಣದ ಮನೆಗಳಿಗೆ ನುಗ್ಗುತ್ತದೆ. ರಸ್ತೆಯಲ್ಲಿ ಮೊಳಕಾಲುದ್ದ ನಿಲ್ಲುತ್ತದೆ.

     ಕಳೆದ ತಿಂಗಳು ಹುಳಿಯಾರಿನಲ್ಲಿ ಬಿದ್ದ ಅಲ್ಪಮಳೆಗೆ ರಾಮಗೋಪಾಲ್ ಸರ್ಕಲ್ ಬಳಿಯ ಅರ್ಧಕ್ಕೆ ಸ್ಥಗಿತಗೊಂಡಿರುವ ರಸ್ತೆಯಲ್ಲಿ ಮೊಳಕಾಲುದ್ದ ನೀರು ನಿಂತು ವಾಹನಸವಾರರಿಗೆ ಸಿಕ್ಕಾಪಟ್ಟೆ ಕಿರಿಕಿರಿ ತಂದೊಡ್ಡಿತ್ತು. ಮಳೆ ನೀರಿನ ಜೊತೆಗೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ರಸ್ತೆಯ ನೀರು ಚರಂಡಿಗೆ ಹರಿಯದೆ ಚರಂಡಿ ನೀರೇ ರಸ್ತೆಗೆ ಹರಿದ ಪರಿಣಾಮ ಬೆಳಗ್ಗೆಯವರೆವಿಗೂ ನೀರು ರಸ್ತೆಯಲ್ಲಿ ನಿಂತು ವಾಹನ ಸವಾರರು ಬಿದ್ದುಎದ್ದು ಓಡಾಡುವಂತ್ತಾಗಿತ್ತು.

      ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳದೆ ಮೌನವಹಿಸಿದರ ಪರಿಣಾಮ ಜೂ.2 ರ ಬುಧವಾರ ರಾತ್ರಿ ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಚರಂಡಿ ತುಂಬಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಭಾರಿ ಅನಾಹುತ ಮಾಡಿದೆ. ರಾಮಗೋಪಾಲ್ ಸರ್ಕಲ್‍ನ ಚನ್ನಬಸವಯ್ಯ ಹಾಗೂ ಮಲ್ಲಿಕಾರ್ಜುನ್ ಅವರ ಮನೆಗಳಿಗೆ ನೀರು ನುಗ್ಗಿ ದವಸಧಾನ್ಯ ಹಾಳುಮಾಡಿದೆ. ಅಲ್ಲದೆ ಇಡೀ ರಾತ್ರಿ ಮನೆಯವರು ಜಾಗರಣೆ ಮಾಡುವಂತೆ ಮಾಡಿದೆ.
ಅಲ್ಲದೆ ಹಾರೂನ್ ಅವರಿಗೆ ಸೇರೊದ ಈರುಳ್ಳಿ ಗೋಡನ್‍ನೆ ಮಳೆಯ ನೀರು ನುಗ್ಗಿ ಸಾವಿರಾರು ರೂ. ಮೌಲ್ಯದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮಾವಿನ ಕಾಯಿಗಳಿಗೆ ಹಾನಿ ಮಾಡಿದೆ. ಜೊತೆಗೆ ಗಂಟೆಗೂ ಹೆಚ್ಚು ಕಾಲ ಚರಂಡಿ ನೀರು ಗೋಡನ್ ಒಳಗೆ ಹರಿದ ಪರಿಣಾಮ ಎಡ ಭಾಗದ ಗೋಡೆ ಕುಸಿದಿದೆ. ಕಟ್ಟಡಕ್ಕೆ ಭಾಗಶಃ ಹಾನಿ ಮಾಡಿದೆ. ಅಲ್ಲದೆ ಈರುಳ್ಳಿ ಗೋಡನ್ ಹಿಂಭಾಗದ ಶಾಮಿಲ್‍ಗೂ ನೀರು ನುಗ್ಗಿ ಹಾನಿ ಮಾಡಿದೆ.

      ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನ ಮುರಿದು ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸುವ ಜೊತೆಗೆ ಚರಂಡಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಸ್ಥಳೀಯರು ಮನವಿ ಮಾಡಿದ್ದಾರೆ.

(Visited 3 times, 1 visits today)

Related posts

Leave a Comment