ಹುಳಿಯಾರು:

      ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಕೋವಿಡ್ 19 ರ ನಿಯಮಾವಳಿಗಳಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ 6 ಅಡಿ ಅಂತರವನ್ನು ಕಾಯ್ದಿರಿಸಿಕೊಂಡು ವ್ಯಾಪಾರ ವಹಿವಾಟು ನಡೆಸಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

      ವ್ಯಾಪಾರಿಗಳು ಆದಷ್ಟು ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ತರಕಾರಿ ಮತ್ತು ದಿನಸಿ ಪದಾರ್ಥಗಳನ್ನು ಹೋಂ ಡಿಲುವರಿ ಮಾಡಿದರೆ ಉತ್ತಮವಾಗಿರುತ್ತದೆ. ಗ್ರಾಹಕರೂ ಕೂಡ ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಿ ಒಮ್ಮೆ ಹಬ್ಬಕ್ಕೆ ಬೇಕಾದ ಅಷ್ಟೂ ಸಾಮಗ್ರಿಗಳನ್ನು ಖರೀಧಿಸಿ ಮನೆಯಿಂದ ಹೊರಬಾರದಂತೆ ಮನೆಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದರೆ ಒಳಿತು. ಇದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಯಲು ತಾವೆಲ್ಲರೂ ಅತ್ಯಮೂಲ್ಯ ಕೊಡುಗೆ ಕೊಟ್ಟಂತ್ತಾಗುತ್ತದೆ ಎಂದಿದ್ದಾರೆ.

      ಹಬ್ಬದ ವ್ಯಾಪಾರದ ಸಂದರ್ಭದಲ್ಲಿ ಪಪಂ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡ ಪಟ್ಟಣದಲ್ಲಿ ಸಂಚಾರ ಮಾಡುತ್ತಿದ್ದು ಮಾಸ್ಕ್ ಧರಿಸದೆ ಓಡಾಡುವುದು, ಸಾರ್ವಜನಿಕ ಅಂತರವನ್ನು ಕಾಪಾಡದೆ ಜನಸಂದಣಿ ಇರುವ ಸ್ಥಳಗಳಲ್ಲಿ ನಿಲ್ಲುವುದು ಕಂಡುಬಂದಲ್ಲಿ ದಂಡ ವಿಧಿಸುವುದಲ್ಲದೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗುವುದು. ಇದು ಸರ್ಕಾರದ ಸ್ಪಷ್ಟ ಸೂಚನೆಯಾಗಿದ್ದು ನಾವು ಪಾಲನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

      ಕೋವಿಡ್ ನಿಯಮ ಉಲ್ಲಂಘಿಸುವವರ ಮೇಲೆ ಪಪಂ ಕ್ರಮಕ್ಕೆ ಮುಂದಾದಾಗ ಟೀಕೆ-ಟಿಪ್ಪಣಿ ಮಾಡುವ ಬದಲು ಕೋವಿಡ್ ನಿಯಮಾವಳಿಯನ್ನು ತಿಳಿದು ಪಪಂ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಕೋವಿಡ್ ತಡೆಗಟ್ಟಲು ಸಹಕರಿಸುವಂತೆ ಪ್ರಕಟಣೆಯಲ್ಲಿ ಮಂಜುನಾಥ್ ಮನವಿ ಮಾಡಿದ್ದಾರೆ.

(Visited 6 times, 1 visits today)