ತುಮಕೂರು:
ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡವನ್ನು ಎಲ್ಲೆಡೆ ಕಾಣಿಸುವ ಮತ್ತು ಕೇಳಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು. ನಮ್ಮ ರಾಜ್ಯದ ಆಡಳಿತ ಭಾಷೆಯಾದ ಕನ್ನಡ ಭಾಷೆಯಲ್ಲಿ ನಮ್ಮ ಬದುಕಿದೆ, ಜೀವನಕ್ರಮವಿದೆ ಮತ್ತು ನಮ್ಮಗಳ ಭವಿಷ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ “ಕನ್ನಡ ಘಟಕ” ಕಾರ್ಯ ನಿರ್ವಹಿಸಬೇಕು. ಕನ್ನಡ ಬಳಕೆ ಸುಗಮವಾಗಿ ಸಾಗುವ ರೀತಿ ನೋಡಿಕೊಳ್ಳುವ ಜವಾಬ್ದಾರಿ ಈ ಕನ್ನಡ ಘಟಕದ್ದಾಗಿರುತ್ತದೆ. ಇನ್ನೊಂದು ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಕೈಗಾರಿಕಾ ವಲಯಗಳಲ್ಲಿ ಕನ್ನಡ ಘಟಕ ಸ್ಥಾಪನೆ ಮತ್ತು ಕಡ್ಡಾಯ ಕನ್ನಡ ಬಳಸುವಿಕೆ ಕುರಿತಂತೆ ಕಟ್ಟುನಿಟ್ಟಾದ ನಿರ್ದೇಶನವನ್ನು ನೀಡುವಂತೆ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ನಾಗೇಶ್ ಅವರಿಗೆ ಸೂಚಿಸಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ, ತುಮಕೂರು ಜಿಲ್ಲೆಯ ಕಚೇರಿಗಳಲ್ಲಿನ ಕನ್ನಡ ಬಳಕೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇನ್ನೊಂದು ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಕೈಗಾರಿಕೆಗಳಲ್ಲಿ ಈ ಬದಲಾವಣೆಯನ್ನು ತರಬೇಕು ಎಂದು ಸೂಚಿಸಿದ ಅವರು, ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ಎಲ್ಲಾ ಸರ್ಕಾರಿ ಇಲಾಖೆ/ಖಾಸಗಿ ಸಂಸ್ಥೆಗಳಲ್ಲಿ ಕನ್ನಡದಲ್ಲಿಯೇ ಪತ್ರವ್ಯವಹಾರವನ್ನು ಮಾಡಬೇಕು ಎಂದು ನಿರ್ದೇಶನ ನೀಡಿದರು.
ಇನ್ನು ಎರಡು ತಿಂಗಳೊಳಗಾಗಿ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಅಂಗಡಿ-ಮುಂಗಟ್ಟುಗಳು ಮತ್ತು ಎಲ್ಲಾ ಸಂಸ್ಥೆಗಳ ನಾಮ ಫಲಕಗಳಲ್ಲಿ ಕನ್ನಡ ಬಳಸಿರಬೇಕು. ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲಾ ಕಾಮಗಾರಿ, ಆದೇಶ, ಸುತ್ತೋಲೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಅವರಿಗೆ ಅಧ್ಯಕ್ಷರು ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 348 ಬ್ಯಾಂಕುಗಳಿದ್ದು, 300 ಬ್ಯಾಂಕ್‍ಗಳಲ್ಲಿರುವ ವ್ಯವಸ್ಥಾಪಕರುಗಳು ಕನ್ನಡ ಬಳಸುತ್ತಿದ್ದು, ಅಂದಾಜು ಉಳಿದ 48 ಬ್ಯಾಂಕ್‍ಗಳ ವ್ಯವಸ್ಥಾಪಕರುಗಳಿಗೆ ಕನ್ನಡ ತರಬೇತಿ ನೀಡಲಾಗಿದೆ. ಅವರುಗಳು ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸುತ್ತಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ಒದಗಿಸಲು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಈ ರೀತಿಯಾದಲ್ಲಿ ಬಹಳಷ್ಟು ಮಂದಿ ಕನ್ನಡಿಗರಿಗೆ ಬೆರಳಚ್ಚುಗಾರರ ಕೆಲಸ ದೊರೆಯುತ್ತದೆ ಎಂದ ಅವರು, ನೆಹರು ಯುವಕ ಕೇಂದ್ರದ ಮೂಲಕ ಆಯೋಜಿಸುವ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಇದು ಸಲ್ಲದು. ಇನ್ನುಮುಂದೆ ನೆಹರು ಯುವಕ ಕೇಂದ್ರದ ವತಿಯಿಂದ ಕೈಗೊಳ್ಳಲಾಗುವ ಎಲ್ಲಾ ಕಾರ್ಯಕ್ರಮಗಳು ಕನ್ನಡದಲ್ಲಿಯೇ ಇರಬೇಕು ಎಂದು ನಿರ್ದೇಶನ ನೀಡಿದರು.
ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನವಾಗಬೇಕು. ಜಾಲತಾಣದ ತಂತ್ರಾಂಶಗಳು ಪೂರ್ವ ನಿಯೋಜಿತವಾಗಿ ಕನ್ನಡದಲ್ಲಿಯೇ ಇರಬೇಕು ಎಂದ ಅವರು, ಇ-ಆಡಳಿತ ತಂತ್ರಾಂಶದಲ್ಲಿ ಆರು ಲಕ್ಷ ಪದ ಸಂಗ್ರಹಣೆಯ ಮಾಹಿತಿಯುಳ್ಳ ಪದ ಕಣಜ ಆಪ್ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಒಟ್ಟು 68 ನಿಘಂಟುಗಳನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಕಲಿಕಾ ಅಧಿನಿಯಮ 2015ರನ್ವಯ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು. ಇದರನ್ವಯ ಜಿಲ್ಲೆಯ ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ಶಾಲೆಗಳಲ್ಲಿ ಕನ್ನಡ ಭೋದಿಸಲಾಗುತ್ತಿದೆಯೇ ಮತ್ತು ಅಂಕಗಣನೆ ಆಗುತ್ತಿದೆಯೇ ಎಂಬುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳು ಪರಿಶೀಲಿಸಬೇಕು. ಸ್ಥಳೀಯ ಮಕ್ಕಳು ಯಾವುದೇ ಕಾರಣಕ್ಕೂ ಕನ್ನಡ ಭಾಷೆಯಿಂದ ವಂಚಿತರಾಗಬಾರದು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ಜಿಲ್ಲೆಯ ಎಲ್ಲಾ ಅಧೀನ ಕಚೇರಿಗಳಲ್ಲಿ ಶೇ.100ರಷ್ಟು ಕನ್ನಡ ಬಳಕೆಯಾಗುತ್ತಿದೆ. ಎಲ್ಲಾ ಸುತ್ತೋಲೆಗಳು, ನಡಾವಳಿಗಳು, ಕಡತಗಳನ್ನು ಕನ್ನಡದಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ಅಧಿಕಾರಿಗಳು ಕನ್ನಡದಲ್ಲಿಯೇ ವ್ಯವಹರಿಸುತ್ತಿದ್ದು, ಕನ್ನಡ ಅನುಷ್ಠಾನವಾಗದಿರುವ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದ ಅವರು, ಬಹು ರಾಷ್ಟ್ರ ಕಂಪನಿಗಳಲ್ಲಿ ಇತರೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಅನುಷ್ಠಾನವಾಗದಿರುವ ಬಗ್ಗೆ ದೂರು ಬಂದಲ್ಲಿ ನಿರ್ಲಕ್ಷ್ಯವಹಿಸುವುದಿಲ್ಲ. ಸಂಬಂಧಿಸಿದ ಮುಖ್ಯಸ್ಥರಿಗೆ ನೋಟೀಸ್ ನೀಡುವ ಮೂಲಕ ಮತ್ತು ಟ್ರೇಡ್ ಲೈಸೆನ್ಸ್ ರದ್ದುಪಡಿಸುವ ಎಚ್ಚರಿಕೆ ನೀಡುವ ಮೂಲಕ ಕನ್ನಡ ಅನುಷ್ಠಾನಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್‍ಯಡಿಯಲ್ಲಿ 10 ತಾಲ್ಲೂಕು ಪಂಚಾಯತಿ, 330 ಗ್ರಾಮಪಂಚಾಯತಿಗಳಿದ್ದು, ಇವುಗಳ ವ್ಯಾಪ್ತಿಯಲ್ಲಿ ಸಭೆ, ಪತ್ರ ವ್ಯವಹಾರವು ಕನ್ನಡದಲ್ಲಿಯೇ ನಡೆಯುತ್ತಿದೆ. ಪಾವಗಡ ತಾಲ್ಲೂಕು ಗಡಿಯಂಚಿನಲ್ಲಿದ್ದರೂ ಸಹ ಅಲ್ಲಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕನ್ನಡವನ್ನೇ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮನೆಯಲ್ಲಿ ಮಕ್ಕಳೊಂದಿಗೆ ನಾವು ನಮ್ಮ ಮಾತೃ ಭಾಷೆಯಲ್ಲಿಯೇ ಮಾತನಾಡಬೇಕು. ಹೀಗಾದಾಗ ಮಾತ್ರ ಕನ್ನಡ ಭಾಷಾ ವಾತಾವರಣ ಮತ್ತು ಪರಿಸರ ಮೂಡುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಆಪ್ತ ಕಾರ್ಯದರ್ಶಿ ಮಹೇಶ್ ಎನ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಡಿಡಿಪಿಐ ಸಿ. ನಂಜಯ್ಯ, ಕಸಾಪ ಅಧ್ಯಕ್ಷ ಸಿದ್ಧಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 4 times, 1 visits today)