ಕೊರಟಗೆರೆ:

     ಹುಣಸೆ ಮರದ ಪ್ರತಿ ಸಸಿಗೆ 300ರೂಗೆ ಖರೀದಿಸಿ ಬರಗಾಲದಲ್ಲಿಯೂ 3 ವರ್ಷ ಕಷ್ಟಪಟ್ಟು ಬೆಳೆಸಿದ ಹುಣಸೆ ಗಿಡಗಳನ್ನ ಶುಕ್ರವಾರ ರಾತ್ತೋರಾತ್ರಿ ಕತ್ತರಿಸಿರುವ ಪರಿಣಾಮ ರೈತನಿಗೆ ದಾರಿ ಕಾಣದೇ ಪರಿಹಾರ ಮತ್ತು ಭದ್ರತೆಗಾಗಿ ಅರಣ್ಯ ಇಲಾಖೆಯಿಂದ ಪೊಲೀಸ್ ಠಾಣೆಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

      ತಾಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಪಂ ವ್ಯಾಪ್ತಿಯ ಸೊಣ್ಣೇನಹಳ್ಳಿ ಗ್ರಾಮದ ಸರ್ವೇ ನಂ.8/2ರ ಜಮೀನಿನಲ್ಲಿ ರೈತ ವೀರಭದ್ರಯ್ಯ ಕಳೆದ 3ವರ್ಷದ ಹಿಂದೆ ಆಂಧ್ರ್ರಪ್ರದೇಶದಿಂದ ಪ್ರತಿ ಹುಣಸೆ ಸಸಿಗೆ 300ರೂ ಪಾವತಿಸಿ ತಂದು 3 ವರ್ಷ ನೀರಿನ ಕೊರತೆಯ ನಡುವೆ ಬೆಳೆಸಿರುವ ಗಿಡಗಳನ್ನು ದುಷ್ಕರ್ಮಿಗಳ ತಂಡ ದ್ವೇಷದಿಂದ ಕತ್ತರಿಸಿದ್ದಾರೆ.

      ಸೊಣ್ಣೇನಹಳ್ಳಿ ಗ್ರಾಮದ ರೈತ ವೀರಭದ್ರಯ್ಯನ ಕುಟುಂಬ ತನ್ನ ಜಮೀನಿನಲ್ಲಿ ಬೆಳೆದಿರುವ ಹುಣಸೆ ಗಿಡಗಳನ್ನು ಈ ಮೊದಲು ಜು.7ರಂದು 15 ಹುಣಸೆ ಗಿಡಗಳನ್ನು ಕಡಿದು ಹಾಕಿದ್ದರು. ಆಗ ರೈತ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈಗ ಜು.21ರ ಶುಕ್ರವಾರ ಮಧ್ಯರಾತ್ರಿ ಮತ್ತೆ 10 ಗಿಡಗಳನ್ನು ಯಾರೋ ದುಷ್ಕರ್ಮಿಗಳ ತಂಡ ಕತ್ತರಿ ಹಾಕಿ ನಾಶ ಪಡಿಸಿದ್ದಾರೆ.

      ರೈತ ವೀರಭದ್ರಯ್ಯ ಬರಗಾಲದ ನಡುವೆಯು ಕಷ್ಟಪಟ್ಟು 1 ಎಕರೆ ಜಮೀನಿನಲ್ಲಿ ಬೆಳೆದಿರುವ 25 ಗಿಡಗಳು ಈಗಾಗಲೇ ದುಷ್ಕರ್ಮಿಗಳ ದ್ವೇಷದ ಜ್ವಾಲೆಗೆ ನಾಶವಾಗಿವೆ. ಇನ್ನುಳಿದ 2 ಎಕರೇ ಜಮೀನಿನಲ್ಲಿ ಕಳೆದ 5 ವರ್ಷದಿಂದ ಬೆಳೆದಿರುವ 150ಕ್ಕೂ ಹೆಚ್ಚು ಹುಣಸೆ ಗಿಡಗಳಿಗೆ ರಕ್ಷಣೆ ನೀಡುವಂತೆ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ರೈತ ಮನವಿ ಮಾಡಿರುವ ಘಟನೆ ನಡೆದಿದೆ.

(Visited 6 times, 1 visits today)