ತುಮಕೂರು:

      ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರು ನಗರದಲ್ಲೂ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದಾರೆ.

      ನಗರದಲ್ಲಿ ದಿಢೀರನೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರಕ್ಕೆ ಮುಂದಾದ್ದರಿಂದ ಬೇರೆ ಬೇರೆ ಊರುಗಳಿಗೆ ತೆರಳಲು ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‍ಗಳ ಸಂಚಾರ ಇಲ್ಲದೆ ಪರದಾಡುವಂತಾಯಿತು.

      ಕೆಎಸ್ಸಾರ್ಟಿಸಿ ಬಸ್‍ಗಳ ಚಾಲಕರು, ನಿರ್ವಾಹಕರು ದಿಢೀರನೆ ಮುಷ್ಕರ ಬೆಂಬಲಿಸಿ ಬಸ್ ಸಂಚಾರ ಬಂದ್ ಮಾಡಿ ನಿಲ್ದಾಣದಲ್ಲೇ ಧರಣಿಗೆ ಮುಂದಾದರು. ಈ ದಿಢೀರ್ ಬೆಳವಣಿಗೆಯಿಂದ ಬೆಳಿಗ್ಗೆಯೇ ಬೆಂಗಳೂರು, ಮದ್ದೂರು, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ತೆರಳಲು ಬಸ್‍ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರ ಪಾಡಂತೂ ಹೇಳತೀರದಾಗಿತ್ತು.

      ಮುಂಜಾನೆ 5 ಗಂಟೆ ಸಮಯದಲ್ಲಿ ತುಮಕೂರು ನಿಲ್ದಾಣದಿಂದ ತೆರಳಿದ ಬಸ್‍ಗಳನ್ನು ಹೊರತುಪಡಿಸಿದರೆ ಇನ್ಯಾವುದೇ ಬಸ್‍ಗಳು ಸಂಚಾರ ಆರಂಭಿಸಿಲ್ಲ. ಬೇರೆ ಬೇರೆ ಸ್ಥಳಗಳಿಂದ ನಿಲ್ದಾಣಕ್ಕೆ ಬಂದ ಬಸ್‍ಗಳು ಸಂಚಾರವನ್ನು ಸ್ಥಗಿತಗೊಳಿಸಿವೆ.

      ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮುಷ್ಕರ ನಡೆಸುತ್ತಿರುವ ಈ ನೌಕರರು ನಿಲ್ದಾಣದ ಪಕ್ಕದಲ್ಲೇ ಅಡುಗೆ ಮಾಡಿ ಊಟ-ಉಪಹಾರ ಸೇವನೆ ಮಾಡಿದರು.

      ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಸಾರಿಗೆ ಬಸ್‍ಗಳು ಸಂಚಾರ ಆರಂಭಿಸದೇ ಇರುವುದನ್ನು ಗಮನಿಸಿದ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಖಾಸಗಿ ಬಸ್‍ಗಳತ್ತ ಮೊರೆ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.

ಆಟೋಗಳಿಂದ ದುಪ್ಪಟು ಹಣ ವಸೂಲಿ

      ಕೆಎಸ್ಸಾರ್ಟಿಸಿ ನೌಕರರ ದಿಢೀರ್ ಮುಷ್ಕರವನ್ನು ಬಂಡವಾಳ ವಾಗಿಸಿಕೊಂಡಿರುವ ಆಟೋ ರಿಕ್ಷಾ ಚಾಲಕರು ಏಕಾಏಕಿ ಇಂದು ತಮ್ಮ ದರವನ್ನು ದುಪ್ಪಟ್ಟು ಮಾಡಿದ್ದಾರೆ.

      ನಗರ ಸೇರಿದಂತೆ ಅಕ್ಕಪಕ್ಕದ ಊರುಗಳಿಗೆ ತೆರಳು ನಗರ ಸಾರಿಗೆಯನ್ನು ಆಶ್ರಯಿಸುತ್ತಿದ್ದ ಜನಸಾಮಾನ್ಯರಿಗೆ ಇಂದು ಆಟೋರಿಕ್ಷಾಗಳ ದುಪ್ಪಟ್ಟು ಪ್ರಯಾಣ ದರವನ್ನು ಭರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ 20 ರೂ. ಪಡೆಯುತ್ತಿದ್ದ ಸ್ಥಳಗಳಿಗೆ 100, 150 ಹೀಗೆ ಮನಬಂದಂತೆ ಪ್ರಯಾಣ ದರವನ್ನು ಆಟೋ ಚಾಲಕರು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಪ್ರಯಾಣಿಕರಿಂದ ಕೇಳಿ ಬಂದವು.

(Visited 10 times, 1 visits today)