ಮಧುಗಿರಿ :

       ಪರಸ್ಪರ ಅಂತರ ಮಾಯ, ಮಾಸ್ಕ್ ಧರಿಸದೇ ಏಕಕಾಲಕ್ಕೆ ಗುಂಪಾಗಿ ಪರೀಕ್ಷಾ ಕೇಂದ್ರಗಳಿಂದ ಹೊರಬಂದ ವಿದ್ಯಾರ್ಥಿಗಳು, ಬಸ್ ಸೌಕರ್ಯವಿದ್ದರೂ ಕೆಲವೆಡೆ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸಿದ ಆಟೋ ಚಾಲಕರು ಇವು ಮಧುಗಿರಿಯಲ್ಲಿ ಗುರುವಾರ ನಡೆದ ಮೊದಲ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಂಡು ಬಂದ ದೃಶ್ಯಗಳು.

        ಅಧಿಕಾರಿಗಳೇ ಮಾಯ: ಬೆಳಗ್ಗೆ ಪರೀಕ್ಷೆ ಆರಂಭಕ್ಕೂ ಮುನ್ನ ಕೇಂದ್ರಗಳಲ್ಲಿ ಕೆಲವೆಡೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಕೊಠಡಿಗಳ ಸಂಖ್ಯೆಯನ್ನು ನೋಡಲು ಗುಂಪುಗೂಡಿದ್ದರಾದರೂ ಪೋಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಚದುರಿಸಿದರು. ಪರೀಕ್ಷೆಗೂ ಮುನ್ನ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ದ್ವಾರಗಳಲ್ಲಿ ಪ್ರತೀ ವಿದ್ಯಾರ್ಥಿಗೂ ಥರ್ಮಲ್ ಸ್ಯಾನಿಂಗ್ ಮತ್ತು ಸ್ಯಾನಿಟೈಸಿಂಗ್ ಮಾಡಿ ಕೊಠಡಿಯೊಳಗೆ ಕಳುಹಿಸಿಕೊಡಲಾಗಿತ್ತು. ಆದರೆ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಬೇಕಾದರೆ ಇದ್ದ ಕಾಳಜಿ ಪರೀಕ್ಷೆ ಮುಗಿದ ನಂತರ ಇರಲಿಲ್ಲ. ವಿದ್ಯಾರ್ಥಿಗಳ ಜವಾಬ್ದಾರಿ ಹೊತ್ತಿದ್ದ ಮೇಲ್ವಿಚಾರಕರು ಪರೀಕ್ಷೆ ಮುಗಿಯುವ ಮನ್ನವೇ ಮಾಯವಾಗಿದ್ದರು. ಪರೀಕ್ಷೆ ಮುಗಿದ ನಂತರ ಒಂದೊಂದೇ ಕೊಠಡಿಯಿಂದ ವಿದ್ಯಾರ್ಥಿಗಳನ್ನು ಕಳುಹಿಸಬೇಕು ಎಂಬ ಆದೇಶವಿದ್ದರೂ ಅದನ್ನು ಗಾಳಿಗೆ ತೂರಲಾಗಿತ್ತು. ಕೆಲವೆಡೆ ಏಕಕಾಲಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರ ಬಿಟ್ಟಿದ್ದು, ಬಹುತೇಕ ಕಡೆ ವಿದ್ಯಾರ್ಥಿಗಳು ಮಾಸ್ಕ್ ಧರಿಸದೇ ಗುಂಪುಗುಂಪಾಗಿ ಕೇಂದ್ರಗಳಿಂದ ಹೊರಬರುತ್ತಿದ್ದ ದೃಶ್ಯ ಕಂಡು ಬಂದಿತ್ತು.

        ಇನ್ನು ಪರೀಕ್ಷೆಗಾಗಿಯೇ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಲಾಗಿತ್ತಾದರೂ ಸಮಯಕ್ಕೆ ಸರಿಯಾಗಿ ತಲುಪಬೇಕು ಎಂಬ ಉದ್ದೇಶದಿಂದಲೋ ಏನೋ ಬಹುತೇಕ ವಿದ್ಯಾರ್ಥಿಗಳು ದ್ವಿಚಕ್ರವಾಹನದಲ್ಲಿ ತಮ್ಮ ಪೋಷಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಪರೀಕ್ಷೆ ಮುಗಿದ ನಂತರ ಕೆಲವೆಡೆ ವಿದ್ಯಾರ್ಥಿಗಳನ್ನು ಕುರಿಗಳಂತೆ ಆಟೋಗಳಲ್ಲಿ ತುಂಬಿಕೊಂಡು ಹೋಗ ಲಾಯಿತು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಬಹುತೇಕ ಗ್ರಾಮ ಗಳು ಆಂದ್ರದ ಗಡಿಗೆ ಹೊಂದಿಕೊಂಡಿದ್ದು, ಆಂದ್ರದ ಭಾಗಗಳಲ್ಲಿ ಇಂದಿಗೂ ಕರೋನಾ ಅಟ್ಟಹಾಸ ಕೊನೆಗೊಂಡಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಮುಂದಿನ ಪರೀಕ್ಷೆಗಳಲ್ಲಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

       ಇನ್ನು ಗುರುವಾರ ನಡೆದ ಇಂಗ್ಲೀಷ್ ಭಾಷೆಯ ಪರೀಕ್ಷೆಯಲ್ಲಿ ಶೈಕ್ಷಣಿಕೆ ಜಿಲ್ಲೆಯಲ್ಲಿ ಒಟ್ಟು 13073 ವಿದ್ಯಾರ್ಥಿಗಳಲ್ಲಿ 12486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 587 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

      9 ವಿದ್ಯಾರ್ಥಿಗಳು ಕಟೈನ್ಸೆಂಟ್ ಪ್ರದೇಶದಿಂದ, 8 ವಿದ್ಯಾರ್ಥಿಗಳು ನೆರೆ ರಾಜ್ಯಗಳಿಂದ, 307 ವಲಸೆ ವಿದ್ಯಾರ್ಥಿಗಳು, ವಸತಿ ನಿಲಯದಿಂದ ಬರುವ 96 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅನಾರೋಗ್ಯದಿಂದ ಇಬ್ಬರು ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.

(Visited 7 times, 1 visits today)