ಮಧುಗಿರಿ:

      ಪುರಸಭೆ ವ್ಯಾಪ್ತಿಯಲ್ಲಿರುವ ‘ಹ್ಯೆಮಾಸ್ ದೀಪಗಳು’ತೋರ್ಪಡಿಕೆಗೆ ಅಥವಾ ನೆಪ ಮಾತ್ರಕ್ಕೆ ಅಳವಡಿಸಿದಂತೆ ಕಾಣುತ್ತಿದೆ. ದೀಪಗಳು ಉರಿಯದೇ ಕತ್ತಲೆ ಕೊಂಪೆಯಾಗಿ ವರ್ಷಗಳು ಕಳೆದರೂ ರಿಪೇರಿ ಮಾಡಿಸುವ ಗೋಜಿಗೆ ಹೋಗದೆ ಇರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

      18ನೇ ವಾರ್ಡಿನ ಗುರು ವಡೇರಹಳ್ಳಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಸ್ವಗೃಹದ ಸಮೀಪವಿರುವ ಹೈಮಾಸ್ ದೀಪ ಉರಿದು ವರ್ಷಗಳೇ ಕಳೆದಿದೆ. ಸಮೀಪದಲ್ಲೇ ವೀರಾಂಜನೇಯ ದೇವಸ್ಥಾನವಿದ್ದು ಸಾವಿರಾರು ಭಕ್ತಾದಿಗಳು ಪೂಜೆಗೆ ಬರುತ್ತಾರೆ. ಕತ್ತಲೆಯಲ್ಲೇ ಓಡಬೇಕಾದ ಸ್ಥಿತಿಯಲ್ಲಿದೆ ಎಲ್ಲದಕ್ಕೂ ಕೊರೊನಾ ಕಾರಣದಿಂದ ರಿಪೇರಿ ಸಾಧ್ಯವಿಲ್ಲವೆನ್ನುವ ಪುರಸಭೆಯವರು ಒಂದು ವರ್ಷದಿಂದ ಉರಿಯದೇ ಇರುವುದಕ್ಕೆ ಕಾರಣವಾದರೂ ಏನು ಎಂದು ವಾರ್ಡಿನ ನಾಗರಿಕರು ಪ್ರಶ್ನಿಸುತ್ತಿದ್ದಾರೆ.ಈ ದೀಪ ಉರಿದರೆ ಎಪಿಎಂಸಿ ಹಿಂಭಾಗದ ರಸ್ತೆ, ಹಿಂದೂಪುರದ ರಸ್ತೆ, ಗುರು ವಡೆರಹಳ್ಳಿ ಸಂಪೂರ್ಣ ಬೆಳಕಿನಿಂದ ವಿಜೃಂಭಿಸುತ್ತದೆ. ಆದರೆ ಕತ್ತಲಲ್ಲೇ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಇದೆ.

      ಇನ್ನು ಗೌರಿಬಿದನೂರು ವೃತ್ತದಲ್ಲಿ ಇರುವ ಹ್ಯೆಮಾಸ್ ನಲ್ಲಿ ಎರಡು ದೀಪಗಳು ಮಾತ್ರ ಉರಿಯುತ್ತಿಲ್ಲ ,ನೃಪತುಂಗ ವೃತ್ತದಲ್ಲಿರುವ ಹ್ಯೆಮಾಸ್ ದೀಪವನ್ನು ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು ರವರ ಸತತ ಒತ್ತಾಯದಿಂದ ಎಲ್ಲ ದೀಪಗಳು ಉರಿಯುತ್ತಿದೆ. ತುಮಕೂರು ಗೇಟ್ ಬಳಿ ಇರುವ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಯಾಣಿಕರ ತಂಗುದಾಣದಲ್ಲಿ ಇರುವ ಹ್ಯೆಮಾಸ್ ದೀಪದಲ್ಲಿ ಎರಡು ದೀಪಗಳು ಮಾತ್ರ ಉರಿಯುತ್ತಿದೆ. ಉಳಿದಂತೆ ದೀಪಗಳು ಉರಿಯುತ್ತಿಲ್ಲ. ಶ್ರೀ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ನಾಗರಿಕರು ವಾಯುವಿಹಾರ ಮಾಡಲೆಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಹ್ಯೆಮಾಸ್ ದೀಪಗಳನ್ನು ಹಾಕಿಸಿದ್ದರು. ಅದರಲ್ಲಿ ಕೆಲವೇ ದೀಪಗಳು ಉರಿಯುತ್ತಿವೆ. ಇದು ಪಟ್ಟಣದ ಪ್ರಮುಖ ಬೀದಿಗಳ ಕಥೆಯಾದರೆ.

      ಇನ್ನೂ ವಾರ್ಡಗಳಲ್ಲಿರುವ ಬೀದಿ ದೀಪಗಳ ಕಥೆ ಪುರಸಭೆಯೇ ಊಹಿಸಿಕೊಳ್ಳಬೇಕು. ಉದಾಹರಣೆಗೆ ಎಸ್ ಬಿಐ ಬ್ಯಾಂಕ್ ಮುಂಭಾಗ ವಿರುವ ಸೋಡಿಯಂ ಲೈಟ್ ಹಾಳಾಗಿ ತಿಂಗಳುಗಳೇ ಕಳೆದರೂ ರಿಪೇರಿ ಯಾಗಿಲ್ಲ. ಮಿನಿ ವಿಧಾನಸೌಧ ಮತ್ತು ಡಿಡಿಪಿಐ ಕಚೇರಿಯ ಮುಂಭಾಗದ ರಸ್ತೆ ರಾತ್ರಿಯಾದರೆ ಸಾಕು ಪ್ರಯಾಣಿಕರು, ನಾಗರಿಕರು ಜೀವ ಭಯದಲ್ಲೇ ಓಡಾಡಬೇಕಿದೆ. ಇಲ್ಲಿ ಯಾವುದೇ ಬೀದಿ ದೀಪಗಳನ್ನು ಅಳವಡಿಸಿಲ್ಲ. ತಾಲ್ಲೂಕು ಆಡಳಿತ ಕೇಂದ್ರದ ಮುಂಭಾಗವೇ ಕತ್ತಲಲ್ಲಿ ಮುಳುಗಿದ್ದರೆ ಇನ್ನು ಮಧುಗಿರಿ ಊರ ಒಳಗಡೆ ಪರಿಸ್ಥಿತಿಯೇನು ಎಂಬುದು ಪರಸ್ಥಳದವರು ಮಾತಾಗಿದೆ.

ರಸ್ತೆಗಳೋ ಗುಂಡಿಗಳೋ:

       ಮಧುಗಿರಿ ಪಟ್ಟಣದಲ್ಲಿ ಯಾವುದೇ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡಿಕೊಂಡೇ ಸಂಚರಿಸಬೇಕಾಗಿದೆ. ಹೆಚ್.ಹೆಸ್.ರಸ್ತೆ, ಕೆ.ಎಚ್. ರಸ್ತೆಯಲ್ಲಿನ ಪುರಸಭಾ ಮಾಜಿ ಅಧ್ಯಕ್ಷ ಎನ್ ಗಂಗಣ್ಣ ರವರ ಮನೆ ಮುಂಭಾಗ, ಪುರಭವನ ರಸ್ತೆ, ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ, ವೆಂಕಟರಮಣ ಸ್ವಾಮಿ ದೇವಸ್ಥಾನದ ರಸ್ತೆ, ಬಸ್ಸ್ಟ್ಯಾಂಡ್ ರಸ್ತೆ ,ಡಿವೈಎಸ್ಪಿ ಕಚೇರಿಯ ರಸ್ತೆಯಲ್ಲಿ ವ್ಯಾಪಾರಸ್ಥರು ಫುಟ್ ಪಾತ್ ಗಳನ್ನು ಆವರಿಸಿಕೊಂಡಿರುವುದರಿಂದ ಸಂಚಾರ ಕಷ್ಟ ,ಇನ್ನೂ ಬೀದಿ ನಾಯಿಗಳ ಕಾಟ ಬೇರೆ, ದೊಡ್ಡಪೇಟೆ ಹಾಗೂ ದಂಡೂರ ಬಾಗಿಲ ರಸ್ತೆ ,ಸಾರ್ವಜನಿಕ ಆಸ್ಪತ್ರೆ ರಸ್ತೆ, ದರ್ಗಾ ರಸ್ತೆಯ ಎಸಿ ಕಚೇರಿಯ ಭವ್ಯ ಮೇಡಂ ಮನೆ ಮುಂದೆ ಎಚ್ಚರ ತಪ್ಪಿದರೆ ಪ್ರಾಣ ಅಪಾಯವೇ ಸರಿ. ತುಮಕೂರು ಗೇಟ್ ವೃತ್ತದ ಬಳಿ ರಸ್ತೆಗಳೂ ಗುಂಡಿಗಳೊ ಗೊತ್ತಾಗುತ್ತಿಲ್ಲ.

ತರಕಾರಿ ಮಾರಾಟ :

      ಗೌರಿ ಬಿದ್ದನೂರು ವೃತ್ತದಲ್ಲಿ ತರಕಾರಿ ಮಾರುಕಟ್ಟೆ ನಡೆಯುತ್ತಿದೆ. ಆದರೆ ಇದು ಸುರಕ್ಷಿತ ಜಾಗವಲ್ಲ, ಅದನ್ನು ಸಮೀಪದಲ್ಲಿರುವ ಪಾರ್ಕ್ ಜಾಗಕ್ಕೆ ಸ್ಥಳಾಂತರಿಸುವಂತೆ ಪ್ರಜ್ಞಾವಂತ ನಾಗರಿಕರ ಕೂಗಾಗಿದ್ದು, ಇದು ಹಿಂದೂಪುರ ಜಂಕ್ಷನ್ ಮತ್ತು ರಾಷ್ಟ್ರೀಯ ಹೆದ್ದಾರಿ-234 ಹಾದು ಹೋಗಿರುವುದರಿಂದ ಮಾರಾಟಗಾರರು ಮತ್ತು ಗ್ರಾಹಕರಿಗೆ ಪ್ರಾಣ ಭಯದಿಂದಲೇ ವ್ಯಾಪಾರ ಮಾಡಬೇಕಾದ ಸ್ಥಿತಿ ಇದೆ.

      ಈ ಎಲ್ಲ ಸಮಸ್ಯೆಗಳನ್ನು ಪುರಸಭೆಯ ಆಡಳಿತದ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿಯವರು ಮತ್ತು ಕ್ಷೇತ್ರದ ಶಾಸಕರು ಬಗೆಹರಿಸುವಂತೆ ನಾಗರಿಕರ ಆಗ್ರಹವಾಗಿದೆ.

(Visited 13 times, 1 visits today)