ಮಧುಗಿರಿ:

      ಕರೋನಾ ಸಂಕಷ್ಟದಲ್ಲೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ದಾಖಲೆ ಬರೆದಿದ್ದು, ಕಳೆದ ಬಾರಿ ಗಳಿಸಿದ್ದ 11 ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಗೆಲುವಿನ ನಗೆ ಬೀರಿದೆ.

      ಫಲ ನೀಡಿದ ವಿಷನ್ 5 ತಂತ್ರ :

       ಕಳೆದ ಬಾರಿ 11 ನೇ ಸ್ಥಾನ ಗಳಿಸಿ ನಿರಾಸೆ ಅನುಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ 5 ಸ್ಥಾನದೊಳಗೆ ಫಲಿತಾಂಶ ದಾಖಲಾಗಲೇಬೇಕು ಎಂಬ ಉದ್ದೇಶದಿಂದ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಬೆಳಕು ಎಂಬ ಕ್ರಿಯಾ ಯೋಜನೆ ತಯಾರಿಸಿ ಅದರಲ್ಲಿ ವಿಷನ್ 5 ಧ್ಯೇಯ ಅನುಸರಿಸಲಾಯಿತು. ಬೆಳಕು ಎಂಬ ಪುಸ್ತಕ ರೂಪದ ಸಂಚಿಕೆಯಲ್ಲಿ ಉತ್ತರ ಸಹಿತ ಪ್ರಶ್ನೆ ಕೋಠಿ ತಯಾರಿಸಿ ವಿತರಿಸಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ಗುರಿ ತಲುಪುವಂತೆ ಮಾರ್ಗದರ್ಶನ ನೀಡಲಾಯಿತು. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ನಿರಂತರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

       ಜಿ.ಪಂ ಸಿಇಓ ರವರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳ ಕಲಿಕಾ ಸಾಮಥ್ಯವನ್ನು ಎಬಿಸಿಡಿ ಎಂಬುದಾಗಿ ವಿಂಗಡಿಸಿ ಇದರಲ್ಲಿ ಸಿ ಮತ್ತು ಡಿ ವಿಭಾಗದ ವಿದ್ಯಾರ್ಥಿಗಳ ಕಲಿಕೆಗೆ ಆರಂಭದಿಂದಲೂ ಹೆಚ್ಚಿನ ಒತ್ತು ನೀಡಲಾಯಿತು. ಗುಣಾತ್ಮಕ ಶಿಕ್ಷಣಕ್ಕಾಗಿ ಎಲ್ಲಾ ಹಂತದಲ್ಲೂ ಸ್ಪಷ್ಟ ಓದು ಶುದ್ದ ಬರಹ, ಮಗ್ಗಿ ಮಾಸ, ಇಂಗ್ಲೀಷ್ ಫೆಸ್ಟ್, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಸರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಸಂವಾದ ಆಯೋಜಿಸಲಾಗಿತ್ತು. ಪೂರ್ವ ಸಿದ್ಧತಾ ಪರೀಕ್ಷೆಯ ನಂತರ ಅಧಿಕಾರಿಗಳ ತ್ರಿ ಸದಸ್ಯ ಸಮಿತಿ ರಚಿಸಿ ಶಾಲೆಗಳಿಗೆ ಕಳುಹಿಸಿ ಮಾರ್ಗದರ್ಶನ ಮಾಡಿಸಲಾಯಿತು.

      ಪ್ರೇರಣೆ ನೀಡಿದ ಪ್ರೇರಣಾ:

      ಶಾಲೆಗಳಲ್ಲಿ ವಿದ್ಯಾರ್ಥಿಗಳ ಗೈರು ಹಾಜರಿಯನ್ನು ಕಡಿಮೆಗೊಳಿಸಿ ಕಲಿಕಾ ನಿರಂತರತೆಯನ್ನು ಕಾಯ್ದುಕೊಳ್ಳಲಾಯಿತು. ಮೊದಲ ಹಂತದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಹೋಬಳಿವಾರು ಕೇಂದ್ರಗಳಲ್ಲಿ ಅವರನ್ನೆಲ್ಲಾ   ಒಂದೆಡೆ ಸೇರಿಸಿ ಪ್ರೇರಣಾ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ ಪರಿಣತ ಶಿಕ್ಷಕರಿಂದ ಮಾರ್ಗದರ್ಶನ ಕೊಡಿಸಲಾಯಿತು. ನಂತರದ ಹಂತದಲ್ಲಿ ಅವರಿಗೆ ಅಭ್ಯಾಸ ಪರೀಕ್ಷೆಗಳನ್ನು ನಡೆಸಲಾಯಿತು.

     ವರವಾದ ಕೊರೊನ, ಗೆಲ್ಲಿಸಿದ ಶಿಕ್ಷಣ ಕಿರಣ: ಇಷ್ಟೆಲ್ಲಾ ಸಿದ್ದತೆ ಮಾಡಿಕೊಂಡು ಇನ್ನೇನು ಪರೀಕ್ಷೆ ಎದುರಿಸಬೇಕು ಎನ್ನುವ ಸಂದರ್ಭದಲ್ಲಿ ಕರೋನಾ ಸಂಕಷ್ಟ ಎದುರಾಯಿತಾದರೂ ದೃಡಿಗೆಡದ ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ ಅವಕಾಶವನ್ನೇ ಉತ್ತಮ ವೇದಿಕೆಯನ್ನಾಗಿ ಬಳಸಿಕೊಂಡು ಕರೋನಾ ಹಾವಳಿಯಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಂದ ದೂರವಾಗಬಾರದು ಎಂಬುದನ್ನು ಮನಗಂಡು ಸಿಕ್ಕ ರಜೆಯನ್ನೇ ಸವಾಲಾಗಿ ಸ್ವೀಕರಿಸಿ ಭರ್ಜರಿ ಸಿದ್ದತೆ ಮಾಡಿಕೊಂಡಿತು. ಜಿಲ್ಲಾಧಿಕಾರಿಗಳ ಅದೇಶದಂತೆ ವಿಷಯವಾರು ವೀಡಿಯೋ ತಯಾರಿಸಿ ಶಿಕ್ಷಣ ಕಿರಣ ಎಂಬ ವಾಟ್ಸಪ್ ಗ್ರೂಪ್ ಆರಂಭಿಸಿ ಪಠ್ಯ ವಿಷಯಗಳನ್ನು ಆಯಾ ಶಾಲೆಗಳ ಶಿಕ್ಷಕರ ಮೂಲಕ ವಿದ್ಯಾರ್ಥಿಗಳ ಪೋಷಕರ ವಾಟ್ಸಪ್‍ಗಳಿಗೆ ಕಳುಹಿಸಿಕೊಟ್ಟು ಎಲ್ಲಾ ಶೈಕ್ಷಣಿಕ ವಿಚಾರಗಳನ್ನು ಗ್ರೂಪ್‍ನಲ್ಲಿ ಹಂಚಿಕೊಳ್ಳಲಾಯಿತು. ಇದರಲ್ಲಿ ಎಲ್ಲಾ ಶಿಕ್ಷಕರೂ ಬಹಳಷ್ಟು ಶ್ರಮ ವಹಿಸಿ ಕೆಲಸ ನಿರ್ವಹಿಸಿದ್ದು, ಯಶಸ್ಸಿಗೆ ಕಾರಣವಾಯಿತು.

ಆತ್ಮವಿಶ್ವಾಸ ಮೂಡಿಸಿದ ಶಿಕ್ಷಣ ಇಲಾಖೆ: 

      ಇಷ್ಟೆಲ್ಲಾ ಸಿದ್ದತೆ ಮಾಡಿಕೊಂಡಿದ್ದರೂ ಕರೋನಾ ಸಂಕಷ್ಟದಲ್ಲಿ ವಿದ್ಯಾರ್ಥಿಗಳು ಭಯದಿಂದಲೇ ಪರೀಕ್ಷೆಗೆ ಹಾಜರಾದರಾದರೂ ಮೊದಲ ದಿನವೇ ವಿದ್ಯಾರ್ಥಿಗಳ ಮನದಲ್ಲಿದ್ದ ಭಯವನ್ನು ಓಡಿಸುವಲ್ಲಿ ಶಿಕ್ಷಣ ಇಲಾಖೆ ಯಶಸ್ವಿಯಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಗಳು ಡಿಡಿಪಿಐ ರೇವಣ ಸಿದ್ದಪ್ಪನವರ ನೇತೃತ್ವದಲ್ಲಿ ಪ್ರತೀ ಪರೀಕ್ಷಾ ಕೇಂದ್ರಕ್ಕೂ ಭೇಟಿ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದ ಪರೀಕ್ಷೆ ಎದುರಿಸಿ ಎಂದು ಆತ್ಮ ವಿಶ್ವಾಸ ತುಂಬಿದ್ದು ಫಲ ನೀಡಿತು. ಇದಲ್ಲದೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರೂ ಖುದ್ದಾಗಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದು ವಿದ್ಯಾರ್ಥಿಗಳಲ್ಲಿ ಸಂಚಲನ ಮೂಡಿಸಿತ್ತು. 

(Visited 39 times, 1 visits today)