ಮಧುಗಿರಿ:

      ಜೀವನ ನಿರ್ವಹಣೆಗೆ ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗಿದ್ದ ಯುವ ಜನತೆ ಕೊರೊನಾ ಎಫೆಕ್ಟ್‍ನಿಂದಾಗಿ ಮತ್ತೆ ತಮ್ಮ ಸ್ವಗ್ರಾಮಗಳಿಗೆ ವಾಪಾಸ್ಸಾಗಿದ್ದು, ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳತೊಡಗಿದ್ದಾರೆ.

      ವಾಪಾಸ್ಸಾಗಲು ಹಿಂದೇಟು: ಮಾರ್ಚ್‍ನಲ್ಲಿ ಲಾಕ್‍ಡೌನ್ ಘೋಷಣೆಯಾದ ನಂತರ ಪಟ್ಟಣದಲ್ಲಿ ಉದ್ಯೋಗ ಮಾಡುತ್ತಿದ್ದ ಬಹುತೇಕ ಯುವಕರೆಲ್ಲರೂ ಮತ್ತೆ ತಮ್ಮ ಸ್ವಗ್ರಾಮಗಳಿಗೆ ವಾಪಾಸ್ಸಾಗಿದ್ದು, ಪಟ್ಟಣಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಮತ್ತೆ ಪಟ್ಟಣಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಗ್ರಾಮಗಳಲ್ಲೇ ಸ್ವಯಂ ಉದ್ಯೋಗ ಆಶ್ರಯಿಸಿದ್ದಾರೆ.

       ಹಾಲಿನ ಹೊಳೆ:

       ಕೊರೊನಾ ಎಫೆಕ್ಟ್‍ನಿಂದಾಗಿ ಉದ್ಯೋಗ ಕಳೆದುಕೊಂಡ ಯುವಜನತೆ ಕುಟುಂಬ ನಿರ್ವಹಣೆಗಾಗಿ ಕೃಷಿ ಮತ್ತು ಹೈನುಗಾರಿಕೆಯತ್ತ ಹೊರಳಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕ್ಷೀರಧಾರೆಯೇ ಹರಿಯುತ್ತಿದೆ. ಫೆಬ್ರವರಿ ಮಾಹೆಯಲ್ಲಿ ಲಾಕ್‍ಡೌನ್‍ಗೂ ಮುಂಚೆ ತಾಲೂಕಿನ 153 ಸಂಘಗಳಲ್ಲಿ ಒಟ್ಟು 8409 ಹಾಲು ಉತ್ಪಾದಕ ಸದಸ್ಯರಿದ್ದು, ಪ್ರತೀ ದಿನ 55450 ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಲಾಕ್‍ಡೌನ್ ನಂತರದ ದಿನಗಳಲ್ಲಿ ಜೂನ್ 2020 ರ ಅಂತ್ಯಕ್ಕೆ ಹಾಲು ಉತ್ಪಾದಕ ಸದಸ್ಯರ ಸಂಖ್ಯೆ 9129 ಕ್ಕೆ ಏರಿಕೆಯಾಗಿದ್ದು, ಕೊಡಿಗೇನಹಳ್ಳಿ ಮತ್ತು ಪುರವರ ಹೋಬಳಿಯ ವ್ಯಾಪ್ತಿಯ ಡೈರಿಗಳಲ್ಲಿ 26500 ಲೀ, ದೊಡ್ಡೇರಿ ಹೋಬಳಿಯಲ್ಲಿ 16500 ಲೀ, ಕಸಬಾ ಹೋಬಳಿಯಲ್ಲಿ 13900 ಲೀ, ಮಿಡಿಗೇಶಿ ಮತ್ತು ಐ.ಡಿ.ಹಳ್ಳಿ ಹೋಬಳಿಯ ಡೈರಿಗಳಲ್ಲಿ 23100 ಲೀ, ಹಾಲು ಸರಬರಾಜಾಗುತ್ತಿದ್ದು, ತಾಲೂಕಿನಾದ್ಯಂತ ಒಟ್ಟು ಪ್ರತಿ ನಿತ್ಯ 85500 ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಕಳೆದ 4 ತಿಂಗಳಲ್ಲಿ ಸುಮಾರು 25050 ಲೀಟರ್ ಹಾಲು ಏರಿಕೆಯಾಗಿದೆ ಸುಮಾರು 5 ಸಾವಿರ ಲೀಟರ್ ಸ್ಥಳೀಯ ಡೈರಿಗಳಲ್ಲೇ ಮಾರಾಟವಾಗುತ್ತಿದ್ದು, 80500 ಲೀಟರ್ ಹಾಲು ತುಮುಲ್ ಒಕ್ಕೂಟಕ್ಕೆ ಸರಬರಾಜಾಗುತ್ತಿದೆ. ಸಂಘಗಳಲ್ಲಿ ಪ್ರತೀ 15 ದಿನಗಳಿಗೊಮ್ಮೆ ಸಮರ್ಪಕವಾಗಿ ಬಟವಾಡಿಯಾಗುತ್ತಿರುವುದೂ ಯುವಜನತೆ ಹೈನುಗಾರಿಕೆಯತ್ತ ಮುಖ ಮಾಡಲು ಪ್ರಮುಖ ಕಾರಣವಾಗಿದ್ದು, ಕೊರೊನಾ ಸಂಕಷ್ಟದಲ್ಲೂ ಹೈನುಗಾರಿಕೆ ರೈತರ ಕೈಹಿಡಿದಿದೆ.

      ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗಿದ್ದು, ಕೊರೊನಾ ಎಫೆಕ್ಟ್‍ನಿಂದಾಗಿ ಉದ್ಯೋಗ ಕಳೆದುಕೊಂಡು ಹಳ್ಳಿ ಸೇರಬೇಕಾಯಿತು. ನಂತರ ಮುಂದೇನು ಎಂಬ ಚಿಂತೆಯಲ್ಲಿದ್ದ ನನಗೆ ಒಕ್ಕೂಟ ಕೈ ಹಿಡಿದಿದ್ದು, ಪ್ರತಿ ನಿತ್ಯ ತಾಲೂಕಿನ ಸಂಘಗಳ ಡೈರಿಗಳಲ್ಲಿ ಶೇಖರಣೆಯಾದ ಹಾಲನ್ನು ಸ್ವಂತ ವಾಹನದಲ್ಲಿ ಶೀಥಲೀಕರಣ ಘಟಕಕ್ಕೆ ಸರಬರಾಜು ಮಾಡುತ್ತಿದ್ದು, ಖರ್ಚು ಕಳೆದು ತಿಂಗಳಿಗೆ ಸುಮಾರು 15 ಸಾವಿರ ಉಳಿಯುತ್ತಿದೆ. ಇದರಿಂದ ನನ್ನ ಜೀವನ ಸಾಗುತ್ತಿದೆ.


ಉತ್ತಮ ಮುಂಗಾರು:

      ತಾಲೂಕು ನಿರಂತರ ಬರಪೀಡಿತ ಪ್ರದೇಶವಾಗಿದ್ದು, ಈ ಬಾರಿ ಮುಂಗಾರು ಕೈ ಹಿಡಿದಿರುವುದರಿಂದ ಹೊಲಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ಮೇವು ದೊರೆಯುತ್ತಿರುವುದೂ ರೈತರಿಗೆ ಹೈನುಗಾರಿಕೆ ವರದಾನವಾಗಿದೆ. ಅಲ್ಲದೇ ತುಮುಲ್ ವತಿಯಿಂದ ಮೇವು ಬೆಳೆಯಲು 300 ಕ್ವಿಂಟಲ್ ಜೋಳ ಮತ್ತು 50 ಕ್ವಿಂಟಾಲ್ ಅಲಸಂದೆಯನ್ನು ನೀಡಲಾಗಿದೆ.

(Visited 9 times, 1 visits today)