ಮಧುಗಿರಿ :

      ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸುತ್ತಿದ್ದರೆ, ತಾಲ್ಲೂಕಿನ ಗ್ರಾಮವೊಂದರಲ್ಲಿ ಯುಗಾದಿ ಟು ಗಣೇಶ ಚತುರ್ಥಿಯವರೆಗೂ ಗ್ರಾಮಸ್ಥರು ನೀರಿಗಾಗಿ ಜಾತಕ ಪಕ್ಷಿಗಳಂತೆ ಕಾಯುವಂತಾಗಿದೆ.

      ತಾಲ್ಲೂಕಿನ ಹಂದ್ರಾಳು ಗ್ರಾಮ ಒಂದು ಕಾಲದಲ್ಲಿ ನೀರಿನಿಂದ ಸಮೃದ್ಧಿಯಾಗಿತ್ತು. ಈ ಗ್ರಾಮವು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರಕ್ಕೆ ಸೇರಿದೆ.

      ಲಾಕ್ ಡೌನ್ ಆದ ದಿನದಿಂದ ಗ್ರಾಮದಲ್ಲಿ ಇಲ್ಲಿಯವರೆಗೂ ಶುದ್ಧ ಕುಡಿಯುವ ನೀರಾಗಲಿ, ಕುಡಿಯುವ ನೀರಾಗಲಿ, ಬಳಸುವ ನೀರಿಗಾಗಿ ಅಲೆಯುವಂತಾಗಿದೆ.

      ಈ ಗ್ರಾಮದಲ್ಲಿ ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿದ್ದು, ಎರಡು ಸಾವಿರ ಜನಸಂಖ್ಯೆ ಇದೆ. ಇತ್ತೀಚೆಗೆ ಕೊರೊನಾ ಲಾಕ್‍ಡಾನ್ ನಿಂದಾಗಿ ಬೆಂಗಳೂರಿನಿಂದಲೂ ಸಹಾ ನೂರಾರು ಜನರು ಬಂದು ಗ್ರಾಮ ಸೇರಿದ್ದಾರೆ.

       ಕಳೆದ ಆರು ತಿಂಗಳಿಂದ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಅದು ಎರಡು ದಿನಕ್ಕೊಮ್ಮೆ ಬ್ಯಾಲ್ಯ ಗ್ರಾಮ ಪಂಚಾಯಿತಿ ವತಿಯಿಂದ ನೀಡುತ್ತಿದ್ದಾರೆ. ವೃದ್ಧರು, ಮಹಿಳೆಯರು,ಯುವಕ,ಯುವತಿಯರು, ಮಕ್ಕಳು ಅನ್ನದೇ ಬೇರೆ ಯಾವ ಕೆಲಸವನ್ನು ಮಾಡದೆ ನೀರಿಗಾಗಿ ಕಾಯುತ್ತಾ ಕುಳಿತಿರುವ ದೃಶ್ಯ ಕಾಣಬಹುದಾಗಿದೆ.

        ಈ ಗ್ರಾಮದಲ್ಲಿ ಹಳೆಯ ಎಂಟು ಕೊಳವೆ ಬಾವಿಗಳು ಮತ್ತು ನೂತನವಾಗಿ ಐದು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ ಹನ್ನೆರಡು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ, ಊರಿನ ಕೆರೆಯಲ್ಲಿ ಕೊರೆಸಿರುವ ಕೊಳವೆ ಬಾವಿಯಲ್ಲಿ ಮೂರು ಇಂಚು ನೀರು ದೊರೆತಿದೆ. ಅದು ಎರಡು ತಿಂಗಳಿನಿಂದ ಪೈಪ್ಲೈನ್ ಸಹಾ ಮಾಡದೆ, ಪಂಪು ಮೋಟಾರ್ ಇಲ್ಲಿಯವರೆಗೂ ಅಳವಡಿಸಿಲ್ಲ.

      ಇನ್ನೂ ಶುದ್ಧ ಕುಡಿವ ನೀರಿನ ಘಟಕ ಶ್ರೀಲಕ್ಷ್ಮಿ ರಂಗನಾಥ ದೇವಾಲಯದ ಮುಂಭಾಗದಲ್ಲಿದ್ದರು.ಘಟಕದಲ್ಲಿ ನೀರನ್ನು ಕಂಡು ಎಷ್ಟೋ ದಿನಗಳಾಗಿದೆಯೋ ಎನ್ನುವಂತಿದೆ. ಸಮೀಪದಲ್ಲಿಯೇ ದನಕರುಗಳು ಮತ್ತು ಮೂಕ ಪ್ರಾಣಿಗಳು ಕುಡಿಯುವ ನೀರಿನ ತೊಟ್ಟಿ ಇದ್ದು ,ಅಲ್ಲಿರುವ ನೀರು ಕೊಳೆತಿರುವುದನ್ನು ನೋಡಿದರೆ ಈ ಗ್ರಾಮದಲ್ಲಿ ನೀರು ಬಂದು ಎಷ್ಟು ದಿನವಾಗಿದೆ ಅನ್ನುವುದಕ್ಕೆ ಕ್ಯೆಗನ್ನಡಿಯಾಗಿದೆ. ಈ ತೊಟ್ಟಿಯ ಅನೈರ್ಮಲ್ಯದಿಂದ ಕೂಡಿದ್ದು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಯಾಗಿದೆ. ಇನ್ನೂ ವಾನರ ಸೇನೆ ಪ್ರತಿನಿತ್ಯ ಕುಡಿಯಲು ಬಂದು ನೀರು ಅನೈರ್ಮಲ್ಯ ವಾಗಿರುವ ವಾಸನೆ ಕುಡಿದು ಹೋಗುತ್ತಿರುವುದನ್ನು ಸಹಾ ಕಾಣಬಹುದಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

        ಗ್ರಾಮದ ಸನಿಹದಲ್ಲೇ ಜಯಮಂಗಲಿ ನದಿಯಿದೆ. ಈ ನದಿಯಲ್ಲಿ ನೀರು ಹರಿದು ಹದಿನೈದು ವರ್ಷಗಳು ಆಗಿವೆ. ಒಂದು ಕಾಲದಲ್ಲಿ ಅಲೆಮನೆಯಾಡಲಾಗುತ್ತಿತ್ತು, ಮತ್ತಿತರ ಕೃಷಿ ಚಟುವಟಿಕೆ ಸಮೃದ್ಧಿಯಾಗಿತ್ತು. ನದಿಯಲ್ಲಿ ನೀರು ಹರಿದಿದ್ದು ಅಪರೂಪ ಅದರಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಇದರ ಪರಿಣಾಮ ನೀರಿಗೆ ಹಾಹಾಕಾರ ಉಂಟಾಗಿದೆ. ಅಲ್ಪಸ್ವಲ್ಪ ಮಳೆಯಿಂದಾಗಿ ಈ ಭಾಗದಲ್ಲಿ ಭೂಮಿ ಹಸಿರಾಗಿ ಕಾಣುತ್ತೇವೆ ಹೊರತು ಅಂತರ್ಜಾಲ ಮಾತ್ರ ಪಾತಾಳಕ್ಕೆ ಸೇರಿದೆ.

       ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ವಿಸರ್ಜನೆ ಯಾಗುತ್ತಿದ್ದಂತೆ ಹೇಳುವವರು ಇಲ್ಲ ಕೇಳುವವರು ಇಲ್ಲದಂತಾಗಿದೆ. ಟ್ಯಾಂಕರ್ ನೀರನ್ನು ಸಮೀಪದ ಮುದ್ದೇಯ್ಯನಪಾಳ್ಯದಿಂದ ತಂದು ಜನರಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಪ್ರತಿ ತಿಂಗಳು ಅಂದಾಜು ಎರಡು ಲಕ್ಷ ರೂಗಳ ವರೆಗೂ ಟ್ಯಾಂಕರ್ ಗೆ ಬಿಲ್ ಪಾವತಿಸುತ್ತಿದ್ದಾರೆಂಬ ಮಾತು ಕೇಳಿ ಬಂತು.

      ಗ್ರಾಮದ ಹೇಮಂತ್ ಗೌಡ ಮಾತನಾಡಿ, ಟ್ಯಾಂಕರ್ ಗೆ ಹಣ ಪಾವತಿ ಮಾಡುವ ಬದಲು ಅದೇ ಹಣದಲ್ಲಿ ಪೈಪ್ ಲೈನ್ ಮಾಡಬಹುದಾಗಿತ್ತು. ಇದನ್ನು ನೋಡಿದರೆ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

       ಇನ್ನು ಇದೇ ಗ್ರಾಮದ ವಿಮರ್ಶಕ- ಚಿಂತಕ ಕನ್ನಡಪರ ಹೋರಾಟಗಾರ ಕೇಶವರೆಡ್ಡಿ ಹಂದ್ರಾಳ ಕೇವಲ ಭಾಷಣದಲ್ಲಿ ನಾಡು ನುಡಿ ಜಲ ಸಂರಕ್ಷಿಸುವ ಬಗ್ಗೆ ಮಾತನಾಡುತ್ತಾರೆ, ತಮ್ಮ ಸ್ವಗ್ರಾಮದಲ್ಲಿ ನೀರಿಗೆ ತೊಂದರೆ ಆಗುತ್ತಿದ್ದರೂ ಎಲ್ಲೂ ಧ್ವನಿ ಎತ್ತುತ್ತಿಲ್ಲ ಎಂದು ಗ್ರಾಮದ ಮಧ್ಯಭಾಗದಲ್ಲಿರುವ ಪೆಟ್ಟಿಗೆ ಅಂಗಡಿಯ ಮಾಲೀಕನ ಮಾತಾಗಿದೆ.

(Visited 10 times, 1 visits today)