ಮಧುಗಿರಿ:

     ಈ ಬಾರಿ ಹಲವು ಕಡೆ ಉತ್ತಮ ಮಳೆಯಾಗುತ್ತಿದ್ದು, ರೈತರ ಬದುಕು ಹಸನಾಗುವುದಲ್ಲದೆ ಶ್ರೀ ನಂಜುಂಡೇಶ್ವರನ ಕೃಪೆಯಿಂದ ನಾಡು ಸುಭಿಕ್ಷವಾಗಲಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

      ತಾಲೂಕಿನ ಕಸಬಾ ಸಿದ್ದಾಪುರದ 510 ವರ್ಷದ ಐತಿಹಾಸಿಕ ಶ್ರೀ ನಂಜುಂಡೇಶ್ವರ ದೇಗುಲದ ಜೀರ್ಣೋದ್ಧಾರ ಹಾಗೂ ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉತ್ತಮ ಮಳೆಯ ಕಾರಣ ರೈತರು ಈ ಬಾರಿ ಶೇ.90 ರಷ್ಟು ವ್ಯವಸಾಯ ಕೈಗೊಂಡಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಕೂಡ ರೈತರ ನೆರವಿಗೆ ಧಾವಿಸಬೇಕು. ದೇಗುಲ ಅಭಿವೃದ್ಧಿಗೆ ಹೆಚ್ಚುವರಿಯಾಗಿ ತನ್ನ ಅನುದಾನದಲ್ಲಿ 3 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.

      ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೈವದ ಕುರುಹನ್ನು ಪ್ರಜ್ವಲಿಸುವಂತೆ ಮಾಡಿದರೆ ಧರ್ಮ ಉಳಿದು ಲೋಕ ಕಲ್ಯಾಣವಾಗಲಿದೆ. ಶಿಥಿಲವಾಗಿದ್ದ ಈ ದೇಗುಲದ ಜೀರ್ಣೋದ್ಧಾರಕ್ಕೆ ಸಹಕರಿಸಿದ ಸದ್ಬಕ್ತರಿಗೆಲ್ಲ ಒಳಿತಾಗಲಿ ಎಂದರು.

      ಎಲೆರಾಂಪುರದ ಕುಂಚಿಟಿಗ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಹನುಮಂತನಾಥಸ್ವಾಮೀಜಿ ಮಾತನಾಡಿ 5 ದಶಕಗಳ ಇತಿಹಾಸವುಳ್ಳ ಮಹಾ ಸಾದ್ವಿ ಶ್ರೀ ನಂಜಮ್ಮನವರ ಶ್ರೀರಕ್ಷೆ ಈ ದೇಗುಲದ ಮೇಲಿದ್ದು, ಮುಂದೆ ಪವಿತ್ರ ಕ್ಷೇತ್ರವಾಗಲಿದೆ. ಇಂತಹ ದೇವತಾ ಕಾರ್ಯವು ಹೆಚ್ಚಾದಂತೆಲ್ಲ ನಾಡಿನ ಕಲ್ಯಾಣವಾಗಲಿದೆ. ಇದರಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಪೋಷಕರು ಮುಂದಾಗಿ. ಶ್ರೀಮಠದಲ್ಲಿ ಎಲ್ಲ ವರ್ಗದ ಮಕ್ಕಳಿಗೆ ಉಚಿತ ವಸತಿ, ಊಟದ ಸಹಿತ ಶಿಕ್ಷಣವನ್ನು ನೀಡುತ್ತಿದ್ದು, ಆಸಕ್ತರು ದಾಖಲಿಸಿ ಎಂದರು.

      ದೇವಾಲಯಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೇಂದ್ರ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ, ಮಾಜಿ ಎಪಿಎಂಸಿ ಅಧ್ಯಕ್ಷ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಜಿ.ಪಂ. ಸದಸ್ಯ ಜಿ.ಜೆ.ರಾಜಣ್ಣ, ಸ್ಥಳೀಯ ತಾ.ಪಂ. ಮಾಜಿ ಸದಸ್ಯೆ ಸುವರ್ಣಮ್ಮ, ಡಾ.ಶ್ರೀನಿವಾಸಮೂರ್ತಿ, ತಾಲೂಕು ಒಕ್ಕಲಿಗರ ಸಂಘದ ಜಗಣ್ಣ, ತುಂಗೋಟಿ ರಾಮಣ್ಣ, ಸ್ಥಳೀಯ ಮುಖಂಡರಾದ ಚಂದ್ರಶೇಖರ್, ಗೌತಮ್, ರವಿಕಿರಣ, ಪ್ರದೀಪ್‍ಕುಮಾರ್, ಮಲ್ಲೇಶಗೌಡ, ರಮೇಶ್, ಮಂಜುನಾಥ, ಲಕ್ಷ್ಮಿನಾರಾಯಣ್, ನರಸಿಂಹರಾಜು, ಶ್ರೀನಿವಾಸ, ರವಿಚಂದ್ರ ಭೇಟಿ ನೀಡಿದರು. ಪ್ರಧಾನ ಅರ್ಚಕ ವಿನಯ್‍ಶರ್ಮ ನೇತೃತ್ವದಲ್ಲಿ ಹೋಮ, ಹವನ ನಡೆಯಿತು.

(Visited 14 times, 1 visits today)