ಮಧುಗಿರಿ:

     “ಉಬ್ಬೆ ಮಳೆ ಬಂದರೆ ಉಬ್ಬಿಬ್ಬಿ ಕೊಂಡು ಬರುತ್ತದೆ’ ಎಂಬುದಕ್ಕೆ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯ ಸಾಕ್ಷಿಯಾಗಿದೆ.

     ಸೋಮವಾರ ರಾತ್ರಿ ಹತ್ತರಿಂದ ಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ನಿಂತು ನಿಂತು ಬಂದ ಮಳೆಯಿಂದ ಹಲವು ಹಳ್ಳಗಳು ಮೈದುಂಬಿ ಹರಿದಿದೆ.

      ತಾಲ್ಲೂಕಿನ ಗಡಿಭಾಗದಲ್ಲಿರುವ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಕೆರೆ ಹಳ್ಳ ಮೈದುಂಬಿ ಹರಿದಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹದ ಭೀತಿಯಂತೆ ಇಲ್ಲಿ ಅನುಭವ ಉಂಟಾಗಿದೆ. ಹಳ್ಳದ ನೀರು ಹೊಲ ಗದ್ದೆಗಳಿಗೆ ಹರಿದು ಬೆಳೆ ನಷ್ಟವಾಗಿದೆ, ರೆಡ್ಡಿಹಳ್ಳಿ ಕೆರೆಗೆ ಒಂದೇ ರಾತ್ರಿಯ ಮಳೆಯಿಂದಾಗಿ ಶೇ ಎಪ್ಪತ್ತರಷ್ಟು ಭಾಗ ಕೆರೆಗೆ ನೀರು ಹರಿದು ಬಂದಿದೆ. ವಾರ್ಷಿಕ ಬೆಳೆಗಳಿಗೆ ನಷ್ಟವಾಗಿದ್ದು ,ಹತ್ತಿ ಬೆಳೆಗೆ ತೊಂದರೆಯಾಗಿದೆ, ಶೇಂಗಾ ಬೆಳೆ ಒಣಗುವ ಸ್ಥಿತಿ ತಲುಪುತ್ತಿದ್ದರೂ ಅತಿವೃಷ್ಟಿಯ ರೀತಿಯಲ್ಲಿ ಬಿದ್ದ ಮಳೆಯಿಂದಾಗಿ ರೈತರು ಚಿಂತಕ್ರಾಂತರಾಗಿದ್ದಾರೆ.

      ಹನುಮಂತಪುರ ಕೆರೆ ಹಳ್ಳ, ನೇರಳೆಕೆರೆ, ಹೊಸಕೆರೆ ಕೆರೆಗಳ ಹಳ್ಳಗಳು ಹರಿದಿವೆ .ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಚೋಳೇನಹಳ್ಳಿ ಕೆರೆ ಹಳ್ಳ ಹರಿದಿದೆ. ಸಿದ್ದಾಪುರ ಕೆರೆಗೆ ಹೇಮಾವತಿ ನೀರಿನ ಜೊತೆಗೆ ಹಳ್ಳದಲ್ಲಿ ನೀರು ಹರಿದಿರುವುದು ರೈತರಿಗೆ ಸಂತಸ ತಂದಿದೆ.

      ತಾಲೂಕಿನ ಅತಿದೊಡ್ಡ ಕೆರೆಯಾದ ಬಿಜವರ ಕೆರೆಗೆ ನೀರು ಹರಿಯಬೇಕಾದರೆ ಚೋಳೇನಹಳ್ಳಿ ಮತ್ತು ಸಿದ್ದಾಪುರ ಕೆರೆಗಳ ಕೋಡಿಯ ನೀರು ಹರಿದಾಗ ಮಾತ್ರ. 

      ಪಟ್ಟಣದ ಅಂತರ್ಜಲ ವೃದ್ಧಿಸುವ ಸಿದ್ದರಕಟ್ಟೆ ಸಂಪೂರ್ಣ ಮಳೆ ನೀರಿನಿಂದ ತುಂಬಿದ್ದು ,ಈ ಕಟ್ಟೆಗೆ ಏಕಶಿಲಾ ಬೆಟ್ಟದಿಂದ ನೀರು ಹರಿದು ಬರಲಿದೆ. ಈ ಕಟ್ಟೆಯಲ್ಲಿ ಕೋಡಿ ನೀರು ಹೊರ ಬೀಳುವ ಹಂತ ತಲುಪಿದೆ. ಇನ್ನೂ ಶೇಕಡ ಎಪ್ಪತ್ತರಷ್ಟು ಮಧುಗಿರಿ ಜನತೆ ಕುಡಿಯುವ ನೀರಿಗೆ ಇಲ್ಲಿರುವ ತೆಂಗಿನ ಮರದ ಬಾವಿಯಲ್ಲಿ ನೀರು ಬಿಂದಿಗೆಯಲ್ಲಿ ತುಂಬಿಕೊಳ್ಳಲು ಒಂದು ಮೀಟರ್ ನಷ್ಟು ಹಗ್ಗ ಇದ್ದರೆ ಸಾಕು ಅನ್ನುವಷ್ಟು ಮಟ್ಟಿಗೆ ತುಂಬಿದೆ. ಮುಂದಿನ ಎರಡು ವರ್ಷ ನೀರಿಗೆ ಭಯವಿಲ್ಲವೆಂದು ನಾಗರಿಕರ ಮಾತಾಗಿದೆ.

      ಕೆರೆ ಕೋಡಿ: ತಾಲೂಕಿನ ಕವಣದಾಲ ಪಂಚಾಯ್ತಿ ವ್ಯಾಪ್ತಿಯ ರಂಗಯ್ಯನಪಾಳ್ಯದ ಕೆರೆ ಕೋಡಿ ನೀರು ತುಂಬಿ ಹರಿದಿದೆ. ತಾಲ್ಲೂಕಿನಲ್ಲಿ ಕುಮುದ್ವತಿ ನದಿ ಈಗಾಗಲೇ ಹರಿದಿದ್ದು ,ಜಯಮಂಗಲಿ ಮತ್ತು ಸುವರ್ಣಮುಖಿ ನದಿ ಹರಿಯಬೇಕಾಗಿದೆ.

      ಹಳ್ಳವನ್ನು ಸರಿಪಡಿಸಿ: ಚೋಳೇನಹಳ್ಳಿ ಕೆರೆಯಿಂದ ಬಿಜವರ ಕೆರೆಗೆ ಹರಿಯುವ ಹಳ್ಳದ ಭಾಗವಾದ ಅಗಸರ ಹೊಳೆ ಆಸುಪಾಸಿನಲ್ಲಿ ಗಿಡಗಂಟೆಗಳು ಬೆಳೆದಿದ್ದು ನೀರು ಸರಾಗವಾಗಿ ಹರಿಯದೆ ತಗ್ಗು ಪ್ರದೇಶಗಳಿಗೆ ನೀರು ಹರಿದು ಬೆಳೆಗಳು ನಷ್ಟವಾಗದಂತೆ ತಡೆಗಟ್ಟಲು ಸಣ್ಣ ನೀರಾವರಿ ಇಲಾಖೆಯವರು ಸರಿಪಡಿಸುವಂತೆ ರೈತರ ಆಗ್ರಹವಾಗಿದೆ.

      ಯುಜಿಡಿ: ಪಟ್ಟಣದಲ್ಲಿ ಯುಜಿಡಿ ಕೆಲಸ ನಡೆಯುತ್ತಿದ್ದು, ಮಳೆಯಿಂದಾಗಿ ಬಹುತೇಕ ರಸ್ತೆಗಳು ಕೆಸರು ಗದ್ದೆಗಳಾಗಿದೆ. ಇದರಿಂದ ಬ್ಯೆಸಿಕಲ್ ನಲ್ಲಿ ಪತ್ರಿಕೆ ಹಂಚುವ ಹುಡುಗರೇ ನೆಲಕ್ಕೆ ಬಿದ್ದು ಗಾಯಗಳ ಮಾಡಿಕೊಂಡಿದ್ದು ಇನ್ನೂ ದ್ವಿಚಕ್ರ ವಾಹನ ಸವಾರರು ಎಚ್ಚರ ತಪ್ಪಿದರೆ ಆಸ್ಪತ್ರೆ ಸೇರುವ ಸ್ಥಿತಿ ತಲುಪಿದೆ.

      ಮಾಜಿ ಶಾಸಕ ಕೆಎನ್ ರಾಜಣ್ಣ ರವರು ಸುದ್ದಿಗಾರರೊಂದಿಗೆ ಮಳೆ ಬೆಳೆ ಬಗ್ಗೆ ಮಾಹಿತಿ ಪಡೆದು, ತಾಲೂಕಿಗೆ ಈ ಬಾರಿ ಪಟ್ಟಣ ಬಿಟ್ಟು ಗ್ರಾಮಾಂತರ ಪ್ರದೇಶಕ್ಕೆ ಯುವಕರ ದಂಡೇ ಆಗಮಿಸಿದ್ದು ಭೂಮಿಯನ್ನೇ ನಂಬಿ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಾರದ ಕೆಳಗೆ ಮಿಡಿಗೇಶಿ ಭಾಗದಲ್ಲಿ ಮಳೆ ಇಲ್ಲದೆ ಶೇಂಗಾ ಬೆಳೆ ಒಣಗುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಮಾಜಿ ಶಾಸಕರು, ಈ ಬಾರಿ ಏನಾದರೂ ಮಳೆ ಕೈಕೊಟ್ಟರೆ ಕೆಲವು ಯುವಕರು ಜೀವನದಲ್ಲಿ ಜಿಗುಪ್ಸೆ ಹೊಂದುತ್ತಾರೆ ಎಂಬ ಮಾತನಾಡಿದ್ದರು. ಈ ಮಳೆ ತಾಲೂಕಿನ ಜನತೆಯಲ್ಲಿ ಧೈರ್ಯ ತುಂಬಿದರೆ ಡಿಸಿಸಿ ಬ್ಯಾಂಕ್ ನಿಂದ ಬಿತ್ತನೆಗೂ ಮುಂಚೆ ಕೆಸಿಸಿ ಸಾಲ ನೀಡಿದ್ದು ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದ್ದನ್ನು ರೈತರು ಜ್ಞಾಪಿಸಿ ಕೊಳ್ಳುತ್ತಿದ್ದಾರೆ.

      ಮಳೆ ವಿವರ:ಮಧುಗಿರಿ-63ಮಿ. ಮೀ, ಬಡವನಹಳ್ಳಿ-20 ಮಿ.ಮೀ, ಮಿಡಿಗೇಶಿ-90 ಮಿ.ಮೀ,ಐ.ಡಿ.ಹಳ್ಳಿ-93.3ಮಿ.ಮೀ.ಬ್ಯಾಲ್ಯ-44.3ಮಿ.ಮೀ ಮತ್ತು ಕೋಡಿಗೆನಹಳ್ಳಿ-59.5 ಮಿ.ಮೀ ನಷ್ಟು ಮಳೆಯಾಗಿರುವುದು ಮಳೆ ಮಾಪಣ ಕೇಂದ್ರಗಳಲ್ಲಿ ದಾಖಲಾಗಿದೆ.

(Visited 33 times, 1 visits today)