ಮಧುಗಿರಿ: 

      ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನ-4 ರಂದು ಪುರಸಭೆ ಕಾರ್ಯಾಲಯದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಡಾ. ಜಿ. ವಿಶ್ವನಾಥ್ ತಿಳಿಸಿದ್ದಾರೆ.

      ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು ಪುರಸಭೆಯ ಯಾವುದೇ ಚುನಾಯಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಚುನಾಯಿಸುವ ಬಗ್ಗೆ ಚುನಾವಣಾಧಿಕಾರಿಗಳಾದ ಮಧುಗಿರಿ ತಹಶೀಲ್ದಾರ್ ರವರಿಗೆ ತಿಳಿಸಿ ಬೆಳಗ್ಗೆ 10 ರಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸ್ಪರ್ಧಿಸುವವರು ತಮ್ಮ ಲಿಖಿತ ಒಪ್ಪಿಗೆಯನ್ನು ನಮೂನೆಯಲ್ಲಿ ಸಲ್ಲಿಸಬೇಕು. ಚುನಾಯಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಲು ತಮ್ಮ ಹೆಸರನ್ನು ತಾವೇ ಸೂಚಿಸಿಕೊಳ್ಳಬಾರದು.

      ನಾಮ ನಿರ್ದೇಶನ ಪತ್ರವನ್ನು ಬೇರೆಯವರು ಸಲ್ಲಿಸುವಂತಿಲ್ಲ. ಸೂಚಕರಾಗಲಿ ಅಥವಾ ಅಭ್ಯರ್ಥಿ ಯಾಗಲಿ ಖುದ್ದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.

      ಮಧ್ಯಾಹ್ನ 1 ರಿಂದ 1.15 ರೊಳಗೆ ನಾಮಪತ್ರ ಪರಿಶೀಲನೆ ನಡೆಸಲಿದ್ದು, ಮಧ್ಯಾಹ್ನದ 1. 15 ರಿಂದ 1. 45 ರವರೆಗೆ ನಾಮಪತ್ರ ವಾಪಸ್ಸು ಪಡೆಯಲು ಅವಕಾಶವಿದ್ದು, ಮಧ್ಯಾಹ್ನ 2 ಗಂಟೆಗೆ ಅಗತ್ಯವಿದ್ದಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮತ ಎಣಿಕೆ ಪ್ರಕ್ರಿಯೆ ನಂತರ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

      ಮಧುಗಿರಿ ಪುರಸಭೆಗೆ ಅಧ್ಯಕ್ಷ ಸ್ಥಾನವನ್ನು ಪ.ಪಂಗಡ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ನ-4 ರಂದು ಚುನಾವಣಾ ಪ್ರಕ್ರಿಯೆ ನಡೆಯಲಿದೆ.

(Visited 7 times, 1 visits today)