ಮಧುಗಿರಿ: 

      ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನಾಗಿಸುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ ನಂತರ ತುಮಕೂರು ಜಿಲ್ಲೆಯ 4 ತಾಲೂಕುಗಳನ್ನು ವಿಭಜಿಸಿ ಮಧುಗಿರಿಯನ್ನು ಜಿಲ್ಲೆಯನ್ನಾಗಿಸಬೇಕೆಂಬ ಕೂಗು ಮತ್ತೆ ಕೇಳಿ ಬರುತ್ತಿದೆ.

       2013 ರ ವಿಧಾನಸಭಾ ಚುನಾವಣೆಯ ಸಮಯದಲ್ಲೇ ಕೆ.ಎನ್.ರಾಜಣ್ಣನವರು ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಾಗ ಅದನ್ನು ಯಾರೂ ಸಹ ನಂಬಿರಲಿಲ್ಲ. ಅದಕ್ಕೆ ಕಾರಣಗಳೂ ಇದ್ದವು… ಏನಿದೆ ಮಧುಗಿರಿಯಲ್ಲಿ ಹದಗೆಟ್ಟ ಮತ್ತು ದೂಳು ತುಂಬಿದ ತಾಲೂಕಿನ ರಸ್ತೆಗಳು, ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದ ಹಳ್ಳಿಗಳು, ಪಟ್ಟಣದ ಬಹುತೇಕ ನೀರಿನ ಟ್ಯಾಂಕುಗಳ ಮುಂದೆ ಪ್ರದರ್ಶನ ನೀಡುತ್ತಿದ್ದ ಖಾಲಿ ಕೊಡಗಳು. ಪಟ್ಟಣದ ತುಂಬೆಲ್ಲಾ ನೀರು ತುಂಬಿಕೊಂಡು ಓಡಾಡುತ್ತಿದ್ದ ಟ್ಯಾಂಕರ್‍ಗಳು. ಇಷ್ಟು ಬಿಟ್ಟರೆ ಇಲ್ಲಿ ಏನೂ ಇಲ್ಲ. ನಿಜ ಹೇಳಬೇಕೆಂದರೆ ವಾಸಕ್ಕೆ ಮಧುಗಿರಿ ಯೋಗ್ಯವೇ ಅಲ್ಲ ಇನ್ನು ಜಿಲ್ಲಾ ಕೇಂದ್ರದ ವಿಷಯ ಆಗದ ಮಾತು ಬಿಡಿ ಎಂದೇ ಬಹಳಷ್ಟು ಜನ ಮಾತನಾಡಿಕೊಳ್ಳುತ್ತಿದ್ದರು.

       ನಿಜ.. ಆಗಿನ ಪರಿಸ್ಥಿತಿಯೇ ಬೇರೆ ಆದರೆ ಇಂದಿನ ಮಧುಗಿರಿಯ ಚಿತ್ರಣವೇ ಬೇರೆ.. 2013 ರಲ್ಲಿ ಕೆ.ಎನ್.ರಾಜಣ್ಣನವರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರದ ವರ್ಷಗಳಲ್ಲಿ ತಾಲೂಕು ಶರವೇಗದಲ್ಲಿ ಅಭಿವೃದ್ದಿ ಹೊಂದಿದ್ದು, ಸುಮಾರು ಸಾವಿರ ಕೋಟಿ ರೂಗಳ ಅಭಿವೃದ್ದಿ ಕಂಡಿದೆ. ದೂಳಿನಿಂದ ತುಂಬಿಕೊಂಡಿದ್ದ ತಾಲೂಕಿನ ಬಹುತೇಕ ರಸ್ತೆಗಳು ಡಾಂಬರು ಭಾಗ್ಯ ಕಂಡಿವೆ. ಆರಂಭದಲ್ಲೇ ಕೆರೆಗಳ ಬಗ್ಗೆ ಕಾಳಜಿ ವಹಿಸಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲ. ಹಿಂದೆ ಕೇವಲ 2 ಮಾತ್ರ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ 7 ಕ್ಕೆ ಏರಿದೆ. 

       ಏಷ್ಯಾ ಖಂಡದಲ್ಲಿಯೇ ಪ್ರಥಮ ಏಕಶಿಲಾ ಬೆಟ್ಟವೆಂದು ಎಂದು ಖ್ಯಾತಿಗಳಿಸಿರುವ ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರೋಪ್‍ವೇ ಅಳವಡಿಸಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರ ಬಜೆಟ್‍ನಲ್ಲಿ ನೂರು ಕೋಟಿ ರೂ ಘೋಷಿಸಿದ್ದು, ಪ್ರವಾಸೋಧ್ಯಮ ಇಲಾಖೆ ನಿಧಾನಗತಿಯಿಂದ ಕಾಮಗಾರಿ ವಿಳಂಬವಾಗುತ್ತಿದೆ.

      ಇನ್ನು ಸರ್ಕಾರಿ ಕಚೇರಿಗಳ ಬಗ್ಗೆ ಹೇಳುವುದಾದರೆ ತಾಲೂಕಿನಲ್ಲಿ ಎಸ್.ಪಿ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಹೊರತು ಪಡಿಸಿ ಬಹುತೇಕ ಕಚೇರಿಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಅಬಿವೃದ್ದಿಯ ದೃಷ್ಟಿಯಿಂದ ನಾಲ್ಕು ಪ್ರಮುಖ ಭಾಗಗಳಲ್ಲಿ ಪ್ರಮುಖ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಲಾಗಿದೆ.

       ತುಮಕೂರು ರಸ್ತೆಯಲ್ಲಿ ಹೈಕೋರ್ಟ್ ಮಾದರಿಯಲ್ಲಿ ನೂತನ ಕೋರ್ಟ್ ನಿರ್ಮಾಣ, ಸಿರಾ ರಸ್ತೆಯಲ್ಲಿ ನೂತನ ತಾ.ಪಂ ಕಚೇರಿ ಮತ್ತು ಇತ್ತೀಚೆಗೆ ನೂತನ ಪಿಡಬ್ಲ್ಯೂಡಿ ಕಚೇರಿ, ಗೌರಿಬಿದನೂರು ರಸ್ತೆಯಲ್ಲಿ ಏ.ಆರ್.ಟಿ.ಓ ಕಚೇರಿ. ಪಾಡಗಡ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಅಬಿವೃದ್ದಿ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, ಪಟ್ಟಣದಲ್ಲಿ ಈಗಾಗಲೇ 53 ಕೋಟಿ ವೆಚ್ದಲ್ಲಿ ಯುಜಿಡಿ ಕಾಮಗಾರಿ ಕೆಲಸಗಳೂ ನಡೆಯುತ್ತಿದೆ. ಇದರಿಂದಾಗಿ ರಿಯಲ್ ಎಸ್ಟೇಟ್ ಸಾಕಷ್ಟು ಬೆಳೆದಿದ್ದು, ನಿವೇಶನಗಳ ಬೆಲೆ ತುಮಕೂರಿಗಿಂತಲೂ ಹೆಚ್ಚಾಗಿದೆ.

       ಕೆರೆಗಳಿಗೆ ನೀರು ಹರಿಸಲು ಯೋಜನೆ:

      ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆ ಪೂರ್ಣಗೊಂಡಲ್ಲಿ ತಾಲೂಕಿನ 42 ಕೆರೆಗಳಿಗೂ ನೀರು ಹರಿಯಲಿದೆ. ಈಗಾಗಲೇ 50 ಕೋಟಿದಲ್ಲಿ ವೆಚ್ಚದ ಯು.ಜಿ.ಡಿ ಕಾಮಗಾರಿ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಕೆಲಸ ಅರಂಭವಾಗಿ ಪಟ್ಟಣದ ಅಬಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.

      ಕೈಗಾರಿಕಾ ಪ್ರದೇಶ:

     ಇನ್ನು ಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಜೆಟ್‍ನಲ್ಲಿ ಮಧುಗಿರಿಯಲ್ಲಿ ಕೈಗಾರಿಕಾ ಪ್ರದೇಶವನ್ನಾಗಿಸುವುದಾಗಿ ಘೋಷಿಸಿದ್ದರು.

        10 ತಾಲೂಕುಗಳನ್ನೊಳಗೊಂಡ ತುಮಕೂರು ಅತೀ ದೊಡ್ಡ ಜಿಲ್ಲೆಯಾಗಿದ್ದು, ಗಡಿ ಪ್ರದೇಶವಾದ ಮಧುಗಿರಿ ತಾಲೂಕು ಇಂದು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಆಂದ್ರ ಗಡಿಗೆ ಹೊಂದಿಕೊಂಡಿರುವ ಮಧುಗಿರಿ ಸಿರಾ, ಕೊರಟಗೆರೆ, ಪಾವಗಡ ತಾಲೂಕುಗಳನ್ನು ಸೇರಿಸಿ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಘೋಷಿಸಿದಲ್ಲಿ ಬರ ಪೀಡಿತ ಪ್ರದೇಶಗಳ ಅಭಿವೃದ್ದಿಯ ಕನಸು ನನಸಾಗಲಿದೆ. ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

(Visited 60 times, 1 visits today)