ತುರುವೇಕೆರೆ:

 

      ಇದೇ ಮೊದಲ ಬಾರಿಗೆ ಜಿಲ್ಲೆಗೆ ನ್ಯಾಯಯುತವಾಗಿ ಹೇಮಾವತಿ ನೀರು ಹರಿಯುತ್ತಿದೆ ಎಂದು ಶಾಸಕ ಮಸಾಲಾ ಜಯರಾಮ್ ಹರ್ಷ ವ್ಯಕ್ತಪಡಿಸಿದರು.

      ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇದುವರೆಗೂ ಜಿಲ್ಲೆಗೆ ಹೇಮಾವತಿ ನೀರು ಹರಿಯುವ ಸಂಬಂಧ ಅನ್ಯಾಯವಾಗುತ್ತಿತ್ತು. ಆದರೆ ಈಗ ತಮ್ಮ ಬಿಜೆಪಿ ಸರ್ಕಾರ ಬಂದ ತರುವಾಯ ಜಿಲ್ಲೆಗೆ ನ್ಯಾಯ ದೊರಕಿಸಿದೆ ಎಂದು ಹೇಳಿದರು.

       ನಿನ್ನೆಯಿಂದ ಜಿಲ್ಲೆಗೆ ಬಾಕಿ ಉಳಿದಿದ್ದ 6 ಟಿಎಂಸಿ ನೀರು ಹರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ವರ್ಷದಲ್ಲಿ ಎರಡು ಬಾರಿ ನೀರು ಹರಿಸುತ್ತಿರುವುದು ಇತಿಹಾಸದಲ್ಲೇ ಇರಲಿಲ್ಲ. ಇದೇ ಮೊದಲು. ಈಗ ಜಿಲ್ಲೆಯ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದ ಫಲವಾಗಿ ಹೇಮಾವತಿ ನೀರು ಹರಿಯುತ್ತಿದೆ ಎಂದು ಮಸಾಲಾ ಜಯರಾಮ್ ಹೇಳಿದರು. ಈಗ ಸುಮಾರು 2000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಜಿಲ್ಲೆಯ ಕುಡಿಯುವ ನೀರಿನ ಅಗತ್ಯವಿರುವ ಕೆರೆಗಳಿಗೆ ಹಂತಹಂತವಾಗಿ ನೀರು ಹರಿಸಲಾಗುವುದು ಎಂದು ಹೇಳಿದರು.

        ಮಾಜಿ ಸಚಿವ ಹೆಚ್.ಡಿ.ರೇವಣ್ಣನವರು ತಮ್ಮ ಜಿಲ್ಲೆಗೆ ನೀರು ಹರಿಸದೇ ತುಮಕೂರು ಜಿಲ್ಲೆಗೆ ನೀರು ಹರಿಸುತ್ತಿದ್ದಾರೆಂದು ಹೇಳಿರುವುದು ಸರಿಯಲ್ಲ. ಈಗಾಗಲೇ ಹಾಸನ ಜಿಲ್ಲೆಗೆ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿಗೆ ನೀರು ಹರಿಸಲಾಗಿದೆ. ತುಮಕೂರು ಜಿಲ್ಲೆಗೆ ಮೊದಲಿನಿಂದಲೂ ಆನ್ಯಾಯವಾಗುತ್ತಿತ್ತು. ಹಿಂದೆ ಆಗಿದ್ದ ಅನ್ಯಾಯ ಮುಂದುವರೆಸಲು ಸಿದ್ದರಿಲ್ಲದ ಬಿಜೆಪಿ ಸರ್ಕಾರ ಜಿಲ್ಲೆಗೆ ನ್ಯಾಯ ಒದಗಿಸಿದೆ ಎಂದರು.

ತೂಬು:

        ತಾಲೂಕಿನ ಸಾರಿಗೇಹಳ್ಳಿ ಕೆರೆಗೆ ನೀರು ಹರಿಸುವ ಸಂಬಂಧ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈಗಾಗಲೇ ಕಾಲುವೆಯ ದುರಸ್ಥಿ ಕಾರ್ಯ ಹಾಗೂ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೇ ಸಂಧರ್ಭದಲ್ಲಿ ಸಾರಿಗೇಹಳ್ಳಿ ಕೆರೆಗೆ ನೀರು ಹರಿಸುವ ತೂಬನ್ನೂ ಸಹ ನಿರ್ಮಿಸಲಾಗುವುದು. ಈ ಕುರಿತಂತೆ ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆತಿದೆ. ಟೆಂಡರ್ ಪ್ರಕ್ರಿಯೆಯೂ ಆಗಿದೆ. ಕಾಮಗಾರಿ ಮಾಡುವುದು ಮಾತ್ರ ಬಾಕಿ ಇದೆ. ಆದರೆ ಕೆಲವು ಕುಹಕಿಗಳು ತೂಬು ನಿರ್ಮಿಸುವ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಮಾಡದ ಕೆಲಸವನ್ನು ತಾವು ಮಾಡಿರುವುದಾಗಿ ಹೇಳಿದ ಶಾಸಕ ಮಸಾಲಾ ಜಯರಾಮ್ ತಾವು ಮಾತಿಗಿಂತ ಕೃತಿಗೆ ಆಧ್ಯತೆ ನೀಡುವುದಾಗಿ ಹೇಳಿದರು.

      ಅಂತರ್ಜಲ: ಜಿಲ್ಲೆಗೆ ಹೇಮಾವತಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಏರಲಿದೆ. ಸಾವಿರಾರು ಅಡಿ ಕೊರೆಸಿದರೂ ನೀರು ಕಾಣದ ರೈತರಿಗೆ ಹೇಮಾವತಿ ನೀರು ಜೀವ ಜಲದಂತಾಗಿದೆ ಎಂದರು.

      ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಕಾರಣರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯವರಿಗೆ ತಾಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

(Visited 8 times, 1 visits today)