ತುಮಕೂರು:

      ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ರವರ ಆಪ್ತ ಸಹಾಯಕನಾಗಿದ್ದ ಕುಮಾರ್ ಚಲಿಸುತ್ತಿದ್ದ ಕಾರು ಅಪಘಾತವಾಗಿದ್ದು ಗಾಯಾಳು ಮೈಸೂರಿನ ಕೊಲಂಬಿಯ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

      ಕುಣಿಗಲ್ ತಾಲೂಕಿನ ಹುಲಿಯೂದುರ್ಗ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ನಿಡಸಾಲೆ (ಕುಣಿಗಲ್-ಮದ್ದೂರು ರಸ್ತೆ )ಬಳಿ ಏಂ 06, P-5738 ನಂಬರಿನ ಸ್ವಿಫ್ಟ್ ಕಾರಿನಲ್ಲಿ ತಮ್ಮ ಸ್ವಗ್ರಾಮ ಯಡವಾಣಿಗೆ ದಿನಾಂಕ:05-05-2020ರ ಮಂಗಳವಾರ ರಾತ್ರಿ 8:30ರ ಸಮಯದಲ್ಲಿ ಶಾಸಕರ ಆಪ್ತ ಕುಮಾರ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಅಪಘಾತವಾಗಿದೆ. ಅಪಘಾತವಾದ ನಂತರ ಡ್ರೈವಿಂಗ್ ಸೀಟ್‍ನಿಂದ ಮುಂದಿನ ಬಲಭಾಗದ ಕಾರಿನ ಡೋರ್ ತೆಗೆದು ಚಾಲಕ ಕುಮಾರ್ ರಸ್ತೆಯ ಇಕ್ಕೆಲದಲ್ಲಿ ಅಂಗಾತವಾಗಿ ಬಿದ್ದಿರುವಂತಹ ದೃಶ್ಯ ಕಂಡುಬಂದಿದ್ದು, ಅಪಘಾತವಾದ ರೀತಿಯಲ್ಲಿ ಇದ್ದ ಕಾರನ್ನು ಮತ್ತು ಪ್ರಜ್ಞಾವಸ್ಥೆಯಲ್ಲಿರದ ರೀತಿಯಲ್ಲಿದ್ದ ಕುಮಾರ್‍ರನ್ನು ಕಂಡಂತಹ ಪೊಲೀಸರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷಿಯ ಆಸ್ಪತ್ರೆಗೆ ದಾಖಲಿಸಿರುತ್ತಾರೆ. 

      ಬುಧವಾರ ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಮೊಕ್ಕದ್ದಮೆ ದಾಖಲಾಗಿರುತ್ತದೆ. ಅಪಘಾತವಾದ ನಂತರ ಕಾರಿನಲ್ಲಿದ್ದ ಬ್ಯಾಗೊಂದನ್ನ ಗಾಯಾಳು ಕುಮಾರ್‍ರವರ ಸಹೋದರ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿರುತ್ತದೆ.

 

      ಅಪಘಾತವಾದ ಸಂದರ್ಭದಲ್ಲಿ ಕಾರಿನಲ್ಲಿ ಇತ್ತು ಎನ್ನಲಾಗಿರುವ ಸುಮಾರು ಎರಡುವರೆ ಕೋಟಿ( 2.50 ಕೋಟಿ ) ಹಣ ಯಾರದ್ದು…? ಈ ಹಣಕ್ಕಾಗಿ ಅಪಘಾತವಾದ ರೀತಿಯಲ್ಲಿ ಸಿನಿಮಿಯಾ ಮಾದರಿಯಲ್ಲಿ ಘಟನೆ ಸೃಷ್ಟಿಯಾಯಿತೆ…?. ತುಮಕೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯಲ್ಲಿ ಅಷ್ಟು ದೊಡ್ಡ ಆಸ್ಪತ್ರೆಗಳಿದ್ದರೂ ಮೈಸೂರಿನ ಪ್ರತಿಷ್ಠಿತ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡುವ ಅನಿವಾರ್ಯತೆ ಇತ್ತಾ ?. ರಾತ್ರೋ ರಾತ್ರಿ ಹುಲಿಯೂರುದುರ್ಗ ಪಿಎಸ್‍ಐರವರಿಗೆ ಕರೆ ಮಾಡಿ ಕಾರಿನಲ್ಲಿ ಇದ್ದ ಹಣ ನನ್ನದು ಅದನ್ನು ನನಗೆ ನೀಡಿ ಎಂದು ಕರೆ ಮಾಡಿದವರು ಯಾರು ?, ನಡುರಾತ್ರಿಯಲ್ಲಿ 2 ಕೋಟಿ 50 ಲಕ್ಷ ಹಣ ಕಳೆದುಕೊಂಡು ಗಾಬರಿಯಿಂದ ವಿಲಿವಿಲಿ ಎಂದು ಒದ್ದಾಡಿದ್ದು ಯಾರು ?. ಸರಿರಾತ್ರಿಯಲ್ಲಿ ಗಾಯಾಳುವಿನ ತಮ್ಮನನ್ನು ಪೊಲೀಸ್ ಠಾಣೆಗೆ ಕರೆತರಲು ಪಿಎಸ್‍ಐ ಪಟ್ಟಂತಹ ಶ್ರಮಕ್ಕೆ ಕಾರಣವೇನು ? ಕಾರಿನಲ್ಲಿದ್ದ 2.50 ಕೋಟಿ ಹಣ ಕಾಣೆಯಾದ ಬಗ್ಗೆ ಲಿಖಿತ ದೂರು ನೀಡದಿದ್ದರೂ ಸಹ ಹಣ ವಾಪಾಸ್ ಕೊಡಿಸಲು ಪಿಎಸ್‍ಐ ಪ್ರಯತ್ನಿಸುತ್ತಿರುವುದಕ್ಕೆ ಕಾರಣವಾದರೂ ಏನು ?. ನಂತರ ಆ ಒಂದು ಕರೆಯಿಂದಾಗಿ ಹಣದ ವಿಚಾರ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾದರೂ ಏಕೆ ?. ಅಪಘಾತ ಮತ್ತು ಕಾಣೆಯಾದ ಕೋಟಿ ಹಣದ ವಿಚಾರ ಬಹಿರಂಗವಾಗದಿರುವುದು ಏಕೆ ? ಶಾಸಕರ ಆಪ್ತ ಸಹಾಯಕನ ಕಾರಿನಲ್ಲಿ 2.50 ಕೋಟಿ ಹಣ ಇಟ್ಟಿದ್ದಾದರೂ ಯಾರು ? ಈ ಹಣ ಅಕ್ರಮವೇ ?. ಈ ಹಣ ಯಾವ ಬ್ಯಾಂಕಿನಿಂದ ತಂದದ್ದು ?. ಇಷ್ಟೋಂದು ಹಣವನ್ನು ಆ ಕಾರಿನಲ್ಲಿ ಇಟ್ಟಿದ್ದರ ಕಾರಣವೇನು ? ಇದನ್ನು ಯಾರು ನೀಡಿದ್ದರು ? ಅದು ಎಲ್ಲಿಗೆ ರವಾನೆಯಾಗುತ್ತಿತ್ತು ? ಈ ಹಣಕ್ಕೂ ಶಾಸಕ ಡಿ.ಸಿ.ಗೌರಿಶಂಕರ್ ಆಪ್ತ ಸಹಾಯಕನಿಗೂ ಇರುವ ಸಂಬಂಧವೇನು ?. ಅಷ್ಟೊಂದು ಹಣ ಆಪ್ತಸಹಾಯಕ ಕುಮಾರ್ ಕೈಗೆ ಸಿಕ್ಕಿದ್ದಾದರೂ ಹೇಗೆ ಮತ್ತು ಅದು ಯಾರಿಗೆ ತಲುಪಬೇಕಿದ್ದ ಹಣ ?. ಒಟ್ಟಿಗೆ ಸಿಕ್ಕ ಎರಡುವರೆ ಕೋಟಿ ಹಣವನ್ನು ದೋಚಲು ಆಪ್ತಸಹಾಯಕ ಕುಮಾರ್ ಸೃಷ್ಟಿ ಮಾಡಿದ ದೃಶ್ಯವೇ ? ಇಂತಹ ಅನುಮಾನಗಳು ಹೆಚ್ಚಾಗುತ್ತಿವೆ. ಕಾಣೆಯಾದ ಹಣ ಮತ್ತು ಶಾಸಕರ ನಡುವೆ ಸಂಬಂಧವಿದೆಯೇ ? ಆ ಕಾರಣಕ್ಕೆ ಪಿಎಸ್‍ಐಗೆ ಕರೆ ಮಾಡಿದ್ದರಾ ?. ಪ್ರಬಲ ರಾಜಕಾರಣಿಯ ಫೋನ್ ಕರೆಗೆ ಸಬ್‍ಇನ್ಸ್‍ಪೆಕ್ಟರ್ ಹೆದರಿ ತಬ್ಬಿಬ್ಬಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರಾ ?. ಹಣದ ವಿಚಾರ ಬಹಿರಂಗವಾಗಬಾರದೆಂಬ ಕಾರಣಕ್ಕೆ ಕರೆತಂದ ಕುಮಾರ್ ಸಹೋದರನನ್ನ ವಾಪಾಸ್ ಕಳುಹಿಸಿದರಾ ? ಇಂತಹ ಹಲವಾರು ಅನುಮಾನಗಳು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

(Visited 162 times, 1 visits today)