ತುಮಕೂರು : 

      ತುರುವೇಕೆರೆ ಶಾಸಕ ತೇಜು ಮಸಾಲೆ ಮಾಲೀಕ ಹಾಗೂ ಕರ್ನಾಟಕ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಸಾಲೆ ಜಯರಾಮ್ ಅವರ ಪುತ್ರ ತೇಜು ಜಯರಾಂ ಅವರ ಮೇಲೆ ಮಂಗಳವಾರ ರಾತ್ರಿ ಹತ್ಯೆಗೆ ಪ್ರಯತ್ನ ನಡೆದಿದೆ.

ಬೆಂಗಳೂರಿನಿಂದ ತುರುವೇಕೆರೆಯ ಅಂಕಲಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದ ತೇಜು ಅವರ ಮೇಲೆ ಗುಬ್ಬಿ ತಾಲ್ಲೂಕಿನ ನೆಟ್ಟೆಕೆರೆ ಬಳಿ ದಾಳಿ ನಡೆದಿದೆ.

       ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತೇಜು ಅವರನ್ನು ಮಾರ್ಗ ಮಧ್ಯದಲ್ಲಿ ಅಡ್ಡಗಟ್ಟಿದ ಕಿಡಿಗೇಡಿಗಳು ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ದಾಳಿಯ ಉದ್ದೇಶ ಅರಿತ ತೇಜು ಜಯರಾಮ್ ಕೂಡಲೇ ಎಚ್ಚೆತ್ತು ಕಿಡಿಗೇಡಿಗಳಿಂದ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಷ್ಟರಲ್ಲಿ ದಾಳಿಕೋರರು ತಾವು ಬಂದಿದ್ದ ಎರಡು ಕಾರುಗಳನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.

       ದಾಳಿಕೋರರ ಕಾರಿನಲ್ಲಿ ಕಾರದ ಪುಡಿ, ಲಾಂಗ್, ಕ್ರಿಕೆಟ್ ಬ್ಯಾಟ್, ಚಾಕು ಮತ್ತಿತರ ಮಾರಕಾಸ್ತ್ರಗಳು ಪತ್ತೆಯಾಗಿವೆ. ತೇಜು ಅವರನ್ನು ಅಡ್ಡಗಟ್ಟುವ ಮುನ್ನ ದಾಳಿಕೋರರು ಕಾರಿನ ಕಿಟಕಿಯಿಂದ ಕ್ರಿಕೆಟ್ ಬ್ಯಾಟ್ ಹೊರಗೆ ತೋರಿಸುವ ಮೂಲಕ ಬೆದರಿಸುವ ಕೆಲಸ ಮಾಡಿದ್ದಾರೆ. ಬಳಿಕ ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಡುತ್ತಿದ್ದಂತೆ ಸ್ಥಳಕ್ಕೆ ಸಿಎಸ್ ಪುರ ಠಾಣೆಯ ಪೊಲೀಸರು ದೌಡಾಯಿಸಿದ್ದು, ದಾಳಿ ಮಾಡಿರುವವರ ಫೈಕಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ವೀರಣ್ಣಗುಡಿ ಗ್ರಾಮದ ರಾಮ, ಅವ್ವೇರಹಳ್ಳಿ ಗ್ರಾಮದ ಕೃಷ್ಣ, ಧನಂಜಯ ಎಂಬುವರಿಂದ ದಾಳಿ ನಡೆದಿದೆ ಎನ್ನಲಾಗಿದ್ದು, ಇವರು ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪ ಅವರ ಬೆಂಬಲಿಗರು ಎಂಬ ಆರೋಪ ಕೇಳಿ ಬಂದಿದೆ.

 

(Visited 15 times, 1 visits today)