ಜೆಡಿಎಸ್‍ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪಗೆ ಖಡಕ್ ಎಚ್ಚರಿಕೆ!!

ತುರುವೇಕೆರೆ:

      ತುರುವೇಕೆರೆ ಅಕ್ಷರಶಃ ರಾಜಕೀಯ ರಣರಂಗವಾಗಿ ಮಾರ್ಪಾಡಾಗಿದ್ದು, ಒಬ್ಬರ ಮೇಲೊಬ್ಬರು ರಾಜಕೀಯ ಕೆಸರೆರಚಾಟ ಮಾಡುತ್ತಿದ್ದಾರೆ.

      ತಾನು, ತನ್ನ ಅಧಿಕಾರ ಇವಷ್ಟನ್ನೇ ಗುರಿಯಾಗಿಸಿಕೊಂಡು ತನ್ನ ಬೆಂಬಲಿಗರ ಓಲೈಕೆಗಾಗಿ ತನ್ನ ಘನತೆಯ ಶೋಭೆಯನ್ನು ಮರೆತು ಎದುರಾಳಿಯ ತೇಜೋವಧೆಗೆ ಮುಂದಾಗಿರುವುದು ವಿಪರ್ಯಾಸ.

      ಯಾರೊಬ್ಬರು ಸಹ ತನ್ನ ನೈತಿಕತೆಯ ಹೊರೆ ಹೆಚ್ಚುವಿಕೆಗೆ ಮುಂದಾಗದೆ ಎದುರಾಳಿಯ ತೇಜೋವಧೆಯೊಂದೆ ಗುರಿಯಾಗಿಸಿಕೊಂಡು ತಾನು ತನ್ನ ಬೆಂಬಲಿಗರಿಂದ ಅಸಂಭದ್ಧ ಪದಗಳ ಬಳಕೆಯನ್ನು ಮಾಡುತ್ತಾ ರಾಜಕೀಯ ಕೆಸರೆರಚಾಟದ ಜಂಗಿ ಕುಸ್ತಿಯ ಅಖಾಡವನ್ನಾಗಿ ತುರುವೇಕೆರೆ ಕ್ಷೇತ್ರವನ್ನ ಮಾರ್ಪಡಿಸಿಕೊಂಡು ಅಭಿವೃದ್ಧಿಯ ಮೂಲ ಮಂತ್ರವನ್ನ ಹೊರಗಿಟ್ಟು ಕೊರೊನಾ ಸೋಂಕಿನಂತಹ ಆರೋಗ್ಯ ತುರ್ತುಪರಿಸ್ಥಿತಿಯ ಅರಿವಿಲ್ಲದೆ ಮಾತನಾಡುತ್ತಿರುವುದು, ಮಾತನಾಡಲು ಪ್ರೇರೇಪಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ತುರುವೇಕೆರೆ ಜನಾಭಿಪ್ರಾಯವಾಗಿದೆ.

      ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಮಾತುಗಳು ಮೌನವನ್ನೇ ಮರೆತು ರಾಜಕೀಯ ರಣಾಂಗಣವನ್ನೇ ಸೃಷ್ಟಿ ಮಾಡುತ್ತಿವೆ ಎನ್ನುವ ಮನಸ್ಥಿತಿಗೆ ಆ ಕ್ಷೇತ್ರದ ಮತದಾರ ಬಂದಿರುವಂತಿದೆ. ಬಿಜಿಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರ ವಾಕ್ಸಮರವು ಎದುರಾಳಿ ಪಕ್ಷಗಳ ಅಪಹಾಸ್ಯಕ್ಕೆ ಗುರಿಯಾಗುತ್ತದೆಯೇನೋ ಎಂಬ ಆತಂಕ ಆಯಾಯ ನಿಷ್ಠಾವಂತ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ಪತ್ರಿಕಾಗೋಷ್ಠಿಗಳು, ಪ್ರತಿಭಟನೆಗಳು ಸಾಕ್ಷಿಯಾಗಿವೆ.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಸಾಲ ಜಯರಾಮಣ್ಣನ ಸಹೋದರ ಕುಮಾರ್ ಮಾತನಾಡಿ, ಶಾಸಕ ಮಸಾಲ ಜಯರಾಮಣ್ಣ ನಮ್ಮ ಊರಿನ ಬಂಗಾರದ ಮನುಷ್ಯರಾಗಿದ್ದಾರೆ. ನಮ್ಮ ಕುಟುಂಬದ ಸದಸ್ಯರೊಬ್ಬನನ್ನು ದುರ್ಬಳಕೆ ಮಾಡಿಕೊಂಡಿರುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನಮ್ಮ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸಕ್ಕೆ ಮುಂದಾಗಿದ್ದು ಮನೆಮುರುಕ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕುಟುಂಬದಲ್ಲಿ ನಾವುಗಳು ಅಣ್ಣತಮ್ಮಂದಿರಾಗಿ ಚನ್ನಾಗಿದ್ದೆವು. ಕೃಷ್ಣಪ್ಪನ ಕೆಟ್ಟಕಣ್ಣು ಬಿದ್ದ ನಂತರ ನಮ್ಮ ದೊಡ್ಡಪ್ಪ ಗಂಗ ತಿಮ್ಮಣ್ಣನನ್ನು ದಾಳವಾಗಿ ಬಳಸಿಕೊಂಡು ಅಣ್ಣ ತಮ್ಮಂದಿರಲ್ಲಿ ದ್ವೇಷ ಬಿತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜಕಾರಣ ಅವರು ಮಾಡಿಕೊಳ್ಳಲಿ, ಆದರೆ ನಮ್ಮ ಕುಟುಂಬವನ್ನು ರಾಜಕಾರಣಕ್ಕೆ ಎಳೆದುತಂದರೆ ಕೃಷ್ಣಪ್ಪನಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ.
ನಮ್ಮ ಕುಟುಂಬಕ್ಕೆ ಸದಾ ಬೆಂಗಾವಲಾಗಿರುವ ನಮ್ಮ ಅಣ್ಣ ಜಯರಾಮಣ್ಣನಿಂದಾಗಿ ಇಂದು ನಮ್ಮ ಕುಟುಂಬ ಸದಸ್ಯರು ಸುಸ್ಥಿತಿಯ ಜೀವನ ನಡೆಸುತ್ತಿದ್ದೇವೆ.

      ಮಾಜಿ ಶಾಸಕರು ಕುಟುಂಬವನ್ನು ರಾಜಕಾರಣಕ್ಕೆ ಎಳೆದು ತಂದರೆ ಅವರ ಮನೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

        ಪಕ್ಷದ ಮುಖಂಡ ವಿ.ಬಿ.ಸುರೇಶ್ ಮಾತನಾಡಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುನಿಯೂರು ಗ್ರಾಮದ ಸಮಸ್ಯೆಯ ಸೃಷ್ಟಿಕರ್ತರು.

      ರಾಜಕಾರಣದ ಅಸ್ಥಿತ್ವಕ್ಕೆ ಈ ಘಟನೆ ಬಳಸಿಕೊಳ್ಳುವುದು ದುರಂತ. ಪ್ರತಿಭಟನೆಯ ವೇಳೆ ಬಿಜೆಪಿ ಕಾರ್ಯಕರ್ತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿಯವರು ಬಳೆತೊಟ್ಟು ರಾಜಕಾರಣ ಮಾಡುತ್ತಿಲ್ಲ ನಾಲಿಗೆ ಹರಿ ಬಿಡುವುದು ಸರಿಯಲ್ಲ. ತಮ್ಮ ಹಿಂಬಾಲಕರು ಬಾಯಿಗೆ ಬಂದಂತೆ ಶಾಸಕರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಇದರ ಫರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ಕೊಟ್ಟರು.

(Visited 311 times, 1 visits today)

Related posts