ಪಾವಗಡ :

      ಬಿಸಿಯೂಟ ಯೋಜನೆಯಲ್ಲಿ ವಸತಿನಿಲಯಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡದೇ ಮಕ್ಕಳ ಬಾಯಿಗೆ ಮಣ್ಣು ಹಾಕುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಶಾಸಕ ವೆಂಕಟರವಣಪ್ಪ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

      ಶುಕ್ರವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕರೆದಿದ್ದ ತಾಲ್ಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಮಾತನಾಡುತ್ತಾ, ಶಾಲೆಗಳಲ್ಲಿನ ಬಿಸಿಯೂಟ ಯೋಜನೆಯಲ್ಲಿ, ಎಸ್.ಸಿ. ಎಸ್.ಟಿ. ಹಾಗೂ ಬಿ.ಸಿ.ಎಂ. ವಸತಿ ನಿಲಯಗಳಲ್ಲಿ ತರಕಾರಿ, ಎಣ್ಣೆ ಉಳಿಸಿಕೊಂಡು ಕಳಪೆ ಅಡುಗೆ ಮಾಡುವುದು ಕಂಡು ಬಂದಿದೆ. ಸಂಬಂಧಿಸಿದ ಅಕ್ಷರ ದಾಸೋಹ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ಬಿ.ಇ.ಒ. ಸಿದ್ದಗಂಗಪ್ಪ, ಶಿವಣ್ಣ, ಮತ್ತು ಸುಬ್ಬರಾಯಗೆ ಎಚ್ಚರಿಕೆ ನೀಡಿದರು. ಅಲ್ಲದೇ ಪ್ರತಿನಿತ್ಯ ವಸತಿನಿಲಯಗಳಿಗೆ ಬೇಟಿ ನೀಡಿ ಮಕ್ಕಳ ಜೊತೆಯಲ್ಲಿ ಊಟ ಮಾಡಬೇಕೆಂದು ತಾಕೀತು ಮಾಡಿದರು.
ಮೇವು ಬ್ಯಾಂಕ್‍ಗಳಲ್ಲಿ ಲೋಡ್ ಗಟ್ಟಲೆ ಹುಲ್ಲು ನೀಡುತ್ತಿದ್ದೀರ.. ಬಡ ರೈತರಿಗೆ ಅನ್ಯಾಯ ಮಾಡುತ್ತೀದ್ದಿರ ಎಂದು ಪಶು ವೈದ್ಯಾಧಿಕಾರಿ ಸಿದ್ದಗಂಗಪ್ಪ ವಿರುದ್ಧ ಜಿ.ಪಂ. ಸದಸ್ಯೆ ಗೌರಮ್ಮ ತಿಮ್ಮಯ್ಯ ಕೆಂಡಾಮಂಡಲರಾದರು.

      ತಾಲ್ಲೂಕಿನಲ್ಲಿ ಮಳೆ ಬಾರದೇ ಇದ್ದು ಗೋಶಾಲೆಗಳನ್ನು ತೆರೆದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸಭೆಯ ನಡುವೆಯೇ ಶಾಸಕ ವೆಂಕಟರವಣಪ್ಪ ತುಮಕೂರು ಜಿಲ್ಲಾಧಿಕಾರಿ ರಾಕೇಶ್‍ಕುಮಾರ್‍ಗೆ ಮೋಬೈಲ್‍ನಲ್ಲಿ ಮಾತಾಡಿ, ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

      ವಸತಿ ಯೋಜನೆಯಲ್ಲಿ ಉಳ್ಳವರಿಗೆ ಮನೆಗಳನ್ನು ಮಂಜುರು ಮಾಡಬೇಡಿ. ಯಾರೇ ಶಿಫಾರಸ್ ಮಾಡಿದರೂ ಕೊನೆಗೆ ನಾನು ಹೇಳಿದರೂ ಸಹ ಅರ್ಹರಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

     ಸಾಮಾಜಿಕ ಮತ್ತು ವಲಯ ಅರಣ್ಯ ಇಳಾಖೆಯಿಂದ ರಸ್ತೆ ಪಕ್ಕದಲ್ಲಿ ಹಾಗೂ ಸೋಲಾರ್ ಕ್ಯಾಂಪ್‍ನಲ್ಲಿ ಹಾಕಿರುವ ಸಸಿಗಳಿಗೆ ನೀರುಣಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಸುರೇಶ್‍ಗೆ ಶಾಸಕರು ಸೂಚಿಸಿದರು.

      ಗಂಗಾಕಲ್ಯಾಣ ಯೋಜನೆಯಲ್ಲಿ ಮೂಂಜೂರಾಗಿರುವ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಬೆಸ್ಕಾಂ ಇಂಜನಿಯರ್ ಕೃಷ್ಣಮೂರ್ತಿಗೆ ಶಾಸಕರು ತಿಳಿಸಿದರು.

      ತಿರುಮಣಿ ಬಳಿ ನಿರ್ಮಾಣವಾಗುತ್ತಿರುವ ಸೋಲಾರ್ ಕ್ಯಾಂಪ್‍ನಲ್ಲಿ ಕೃಷಿ ಇಲಾಖೆಯಿಂದ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ಅವ್ಯವಹಾರ ಎಸಗಲಾಗಿದೆ. ಅಲ್ಲದೇ ಈ ಯೋಜನೆಯಲ್ಲಿ ನೀಡಬೇಕಾಗಿರುವ ಸ್ಪಿಂಕ್ಲರ್‍ಗಳು, ಟಾರ್‍ಪಲ್‍ಗಳನ್ನು ಈ ತಕ್ಷಣವೇ ನೀಡಬೇಕೆಂದು ನಾಗಲಮಡಿಕೆ ಜಿ.ಪಂ. ಸದಸ್ಯ ಚೆನ್ನಮಲ್ಲಯ್ಯ, ಜಿ.ಪಂ. ಸದಸ್ಯ ಕೆ.ಎಸ್.ಪಾಪಣ್ಣ ಕೃಷಿ ಅಧಿಕಾರಿಣಿ ವಿಜಯಮೂರ್ತಿಗೆ ತಾಕೀತು ಮಾಡಿದರು.

(Visited 13 times, 1 visits today)