ತುಮಕೂರು: 

      ಕೇಂದ್ರ ಸರ್ಕಾರದ ಕಾಯ್ದೆಗಳನ್ನು ವಿರೋಧಿಸಿ ಕಳೆದ 13 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ, ರೈತ ವಿರೋಧಿ ಕಾಯ್ದೆಯನ್ನು ವಾಪಾಸ್ ಪಡೆಯಲು ಒತ್ತಾಯಿಸಿದ್ದಾರೆ, ಕಾಯ್ದೆ ಹಿಂಪಡೆಯಲು ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದರು ಮೋದಿ ಅವರು ಕಾಯ್ದೆಯನ್ನು ವಾಪಾಸ್ ಪಡೆಯಲಿಲ್ಲ ಎಂದು ಜೆಡಿಎಸ್ ನಗರಾಧ್ಯಕ್ಷ ಬೆಳ್ಳಿ ಲೋಕೇಶ್ ಆರೋಪಿಸಿದರು.

      ಭಾರತಬಂದ್ ಅಂಗವಾಗಿ ಜೆಡಿಎಸ್ ಕಚೇರಿಯಿಂದ ಟೌನ್‍ಹಾಲ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರೈತರಿಗೆ ಬೆಂಬಲ ಸೂಚಿಸಿದರು, ಈ ವೇಳೆ ಮಾತನಾಡಿದ ಅವರು, ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದರು, ಕೃಷಿ ಸಚಿವರಾಗಲಿ, ಪ್ರಧಾನಿಗಳಾಗಲಿ ರೈತರ ಅಹವಾಲು ಆಲಿಸಲು ಆಗಲಿಲ್ಲ ಎಂದರೆ ಅವರ ರೈತ ಪರ ಕಾಳಜಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

      ರಾಜ್ಯದಲ್ಲಿ ರೈತರ ಹೋರಾಟಕ್ಕೆ ಜೆಡಿಎಸ್ ಬೆಂಬಲ ನೀಡಿದ್ದು ರೈತ ಚಳವಳಿಗೆ ಬೆಂಬಲ ನೀಡುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂಚಿಸಿದ್ದರು, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದರೆ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಬಿಜೆಪಿ ಸರ್ಕಾರ ಮೋಸವನ್ನು ಮಾಡುತ್ತಿದೆ ಎಂದು ದೂರಿದರು.

      ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲಕರವಾಗಿ ಕಾಯ್ದೆಯನ್ನು ರೂಪಿಸಿರುವುದನ್ನು ವಿರೋಧಿಸಿ ರೈತರು ಹೋರಾಟ ಮಾಡುತ್ತಿರುವುದಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ, ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

     ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ದೇವರಾಜು, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಎಸ್ಟಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾಹೇರಾ ಬಾನು, ರಂಗನಾಥ್, ಚೆಲುವರಾಜು, ಬಾಲಕೃಷ್ಣ, ವಿಶ್ವೇಶ್ವರಯ್ಯ, ರಂಗನಾಥ್, ಬೈರೇಶ್, ಕೆಂಪರಾಜು, ನಾಗಮಣಿ, ಚಂದ್ರಣ್ಣ, ಬಟವಾಡಿ ಲೋಕೇಶ್, ಪ್ರಸನ್ನ ಕುಮಾರ್, ಉಪ್ಪಾರಹಳ್ಳಿ ಕುಮಾರ್, ಹೇಮಂತ್ ಕುಮಾರ್ ಸೇರಿದಂತೆ ಇತರರಿದ್ದರು.

(Visited 17 times, 1 visits today)