ರಾಜ್ಯದ ಸಿಎಂ, ಕೇಂದ್ರ ಗೃಹಸಚಿವರನ್ನು ವಜಾಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ತುಮಕೂರು:

      ರಾಜ್ಯ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

      ಜಿಲ್ಲಾಧ್ಯಕ್ಷ ರಾಮಕೃಷ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆ ತಯಾರಿಗೆಂದು ಬಿಜೆಪಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ, ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಅನುಸರಿಸಿದ ವಾಮಮಾರ್ಗದ ಬಗ್ಗೆ ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದು, ಅಸಂವಿಧಾನಿಕವಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

        ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಉದ್ದೇಶದಿಂದ ೧೭ ಮಂದಿ ಶಾಸಕರಿಗೆ ಪ್ರಲೋಭನೆ ತೋರಿ, ಮುಂಬೈ ಹಾಗೂ ಚೆನ್ನೆ ನಲ್ಲಿ ಇಟ್ಟ ವಿಚಾರವನ್ನು ಯಡಿಯೂರಪ್ಪ ಹೇಳಿದ್ದಾರೆ, ಇದಕ್ಕೆಲ್ಲ ಬಿಜೆಪಿ ರಾಷ್ಟ್ರೀ ಅಧ್ಯಕ್ಷರು ಹಾಗೂ ಗೃಹ ಸಚಿವರಾಗಿರುವ ಅಮಿತ್ ಶಾ ಅವರ ಕೈವಾಡ ಇರುವುದು ಸತ್ಯವಾಗಿದೆ. ಸರ್ಕಾರವನ್ನು ಬಿಳಿಸಬೇಕೆಂಬ ಉದ್ದೇಶದಿಂದಲೇ ಅನರ್ಹಗೊಂಡಿರುವ ಶಾಸಕರು ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ಬಹಿರಂಗಗೊಂಡಿರುವ ವಿಡಿಯೋದಲ್ಲಿ ಬಯಲಾಗಿದೆ ಎಂದರು.

      ಬಿಜೆಪಿ ೧೭ ಮಂದಿ ಶಾಸಕರನ್ನು ಮುಂಬೈನಲ್ಲಿ ಒತ್ತೆಯಾಳಾಗಿ ಎರಡು ಮೂರು ತಿಂಗಳು ಇಟ್ಟುಕೊಂಡು, ಸಮ್ಮಿಶ್ರ ಸರ್ಕಾರವನ್ನು ಬಿಳಿಸಿ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಅನರ್ಹಗೊಂಡಿರುವ ಶಾಸಕರು ತ್ಯಾಗ ಮಾಡಿದ್ದಾರೆ, ಇದೆಲ್ಲ ವಿಚಾರವೂ ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿತ್ತು ಎಂದು ಹೇಳಿರುವ ಯಡಿಯೂರಪ್ಪ ಅವರು ಸುಪ್ರೀಂ ಪ್ರಕರಣ ಇತ್ಯರ್ಥಗೊಂಡ ನಂತರ ಅನರ್ಹರನ್ನು ಮಂತ್ರಿಗಳಾಗನ್ನಾಗಿಸಲಿದೆ ಎಂದು ಅವರು ಆರೋಪಿಸಿದರು.

      ಮಾಜಿ ಶಾಸಕ ರಫೀಕ್ ಅಹ್ಮದ್ ಅವರು ಮಾತನಾಡಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ತ್ಯಾಗ ಮಾಡಿರುವ ಅನರ್ಹ ಶಾಸಕರ ಬಗ್ಗೆ ಬಿಜೆಪಿ ಮುಖಂಡರು ಮಾತನಾಡಬಾರದು ಎಂದು ತಾಕೀತು ಮಾಡಿರುವ ಸಿಎಂ ಯಡಿಯೂರಪ್ಪ ಅವರು, 17 ಸಚಿವ ಸ್ಥಾನಗಳನ್ನು ಇವರಿಗಾಗಿ ಮೀಸಲಿಟ್ಟಿದ್ದಾರೆ, ಬಿಜೆಪಿಯ ಕೇಂದ್ರ ನಾಯಕತ್ವ ಹಾಗೂ ಅನರ್ಹ ಶಾಸಕರು ಸಂವಿಧಾನದ ಕಲಂ 190 ಹಾಗೂ 10ನೇ ಪರಿಚ್ಛೇದವನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದರು.

      ಸಂವಿಧಾನದ ಉಲ್ಲಂಘಿಸಿ, ಜನರ ಆಯ್ಕೆಗೆ ವಿರುದ್ಧವಾಗಿ ಸರಕಾರವನ್ನು ರಚಿಸುವ ಮೂಲಕ ಪ್ರಜಾ ಪ್ರಭುತ್ವದ ಕಗ್ಗೂಲೆ ಮಾಡಿರುವ ಬಿಜೆಪಿ ಮುಖಂಡರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂವಿಧಾನದ ನಿಯಮವನ್ನು ಮೀರಿದ್ದಾರೆ. ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

      ಅನೈತಿಕವಾಗಿ, ಅಸಂವಿಧಾನಿಕವಾಗಿ, ಪ್ರಜಾಪ್ರಭುತ್ವ ವಿರೋಧಿಯಾಗಿ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು, ಅಮಿತ್ ಶಾ ಮತ್ತು ಯಡಿಯೂರಪ್ಪ ಅವರನ್ನು ತಕ್ಷಣದಿಂದ ವಜಾಗೊಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

      ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶಫೀ ಅಹ್ಮದ್, ಆರ್.ನಾರಾಯಣ್, ಉಪಮೇಯರ್ ರೂಪಶ್ರೀ ಶೆಟ್ಟಾಳಯ್ಯ, ಟೂಡಾ ಮಾಜಿ ಅಧ್ಯಕ್ಷ ಶಿವಮೂರ್ತಿ, ರೆಡ್ಡಿಚಿನ್ನಯಲ್ಲಪ್ಪ, ನಾರಾಯಣಮೂರ್ತಿ, ವಾಲೆಚಂದ್ರು, ಹೆಚ್.ಸಿ.ಹನುಮಂತಯ್ಯ, ಆಟೋರಾಜು, ಪುಟ್ಟರಾಜು, ಸುಜಾತ, ಇನಾಯತ್, ಶಕೀಲ್ ಇತರರಿದ್ದರು.

(Visited 27 times, 1 visits today)

Related posts