ತುಮಕೂರು :

      ತಾತ್ಕಾಲಿಕ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರ ಕೆಲಸ ಕಾಯಂಗೊಳಿಸಬೇಕು, ಸೇವಾ ಭದ್ರತೆ ನೀಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಸತ್ಯಾಗ್ರಹ 10ನೇ ದಿನಕ್ಕೆ ಕಾಲಿಟ್ಟಿದೆ

ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ 5 ಕೆಎಚ್‍ಟಿ ಫೇಸ್‍ನ ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕಾರ್ಮಿಕರು ಕಳೆದ 9 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಆಡಳಿತ ಮಂಡಳಿ ತಿರುಗಿಯೂ ನೋಡುತ್ತಿಲ್ಲ. ಕಾರ್ಮಿಕರ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕಾರ್ಮಿಕ ಅಧಿಕಾರಿಗಳು ಬಂದು ಆಡಳಿತ ಮಂಡಳಿಯವರ ಜೊತೆ ಮಾತುಕತೆ ನಡೆಸಿದರೂ ಅವರ ಮಾತಿಗೂ ಕಿಮ್ಮತ್ತು ಇಲ್ಲವಾಗಿದೆ. ಅಧಿಕಾರಗಳೆಂದರೆ ಆಡಳಿತ ಮಂಡಳಿ ಅಸಡ್ಡೆ ತೋರುತ್ತಿದ್ದಾರೆ ಎಂದು ಧರಣಿನಿರತರು ದೂರಿದರು.

      ಅಢಳಿತ ಮಂಡಳಿ ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಹತ್ತಾರ ವರ್ಷಗಳಿಂದ ಗುತ್ತಿಗೆ ಮತ್ತು ತಾತ್ಕಲಿಕ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ನಿಯಮದಂತೆ ಖಾಯಂಗೊಳಿಸಬೇಕು. ಇದುವರೆಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಮನೆ ಬಾಡಿಗೆ ಭತ್ಯೆಯನ್ನು ನೀಡದೆ ಆಡಳಿತ ಮಂಡಳಿ ದೌರ್ಜನ್ಯ ಎಸಗುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

      ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ರಜೆಗಳನ್ನು ನೀಡುತ್ತಿಲ್ಲ. ಪ್ರಯಾಣ ಭತ್ಯೆಯನ್ನು ಕೊಡುತ್ತಿಲ್ಲ. ನಾವು ವಾರದ ಮತ್ತು ಇತರೆ ರಜೆಗಳನ್ನು ಹಾಕಿದರೆ ಪಂಚ್ ಲಾಕ್ ಮಾಡಿ ಕಾರ್ಮಿಕರನ್ನು ಕಾರ್ಖಾನೆಯ ಹೊರಗೆ ನಿಲ್ಲಿಸಿ ಅವಮಾನ ಮಾಡುತ್ತಿದ್ದಾರೆ. ಇದನ್ನು ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

      ಮೂರು ದಿನಗಳ ಹಿಂದೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು. ಆಡಳಿತ ಮಂಡಳಿಯವರ ಜೊತೆ ಮಾತುಕತೆಗಾಗಿ ಕರೆಸಿದರು. ಮೇನೇಜರ್ ಇಲ್ಲವೆಂಬ ಕುಂಟು ನೆಪ ಹೇಳಿ ಸಾಗಹಾಕಿದರು. ಕಾರ್ಮಿಕ ಅಧಿಕಾರಿಗಳಿ ಮಾತಿಗೆ ಕೂಡ ಆಡಳಿತ ಮಂಡಳಿ ಬೆಲೆ ನೀಡುತ್ತಿಲ್ಲ.

      ಕಾರ್ಮಿಕರ ನಡುವೆ ಬಿರುಕು ಮೂಡಿಸಲು ಕೇವಲ 22 ಮಂದಿ ಕಾರ್ಮಿಕರನ್ನು ಕಾಯಂ ಮಾಡಲಾಗಿದೆ. ತಾತ್ಕಾಲಿಕ ಆಧಾರ ಮತ್ತು ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರು 200ಕ್ಕೂ ಹೆಚ್ಚು ಮಂದಿ ಇದ್ದೇವೆ. ಆದರೆ ನಮ್ಮನ್ನು ಕಾಯಂಗೊಳಿಸುವ ಮತ್ತು ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ಆಡಳಿತ ಮಂಡಳಿಯವರು ಸತಾಯಿಸುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರು ದೂರಿದರು.

(Visited 15 times, 1 visits today)