ತುಮಕೂರು:

      ಇಡೀ ವಿಶ್ವದಾದ್ಯಂತ ಕೊರೊನಾ ರಣಕಹಳೆ ಮೊಳಗಿದ್ದು ಕೋಟ್ಯಾಂತರ ಜನ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ದೇಶವು ಹೊರತಾಗಿಲ್ಲ. ಪ್ರತಿ ದಿನ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿದ್ದು, ದೇಶದ ಜನತೆಯ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಇನ್ನು ರಾಜ್ಯಾದ್ಯಂತ ಸೋಂಕಿತರು ಹೆಚ್ಚಾಗುತ್ತಿರುವ ಸಂಗತಿಗಳು ಪ್ರತಿದಿನ ಘಟಿಸುತ್ತಿವೆ. ಈ ನಡುವೆಯು ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಯ ಉಳಿದಿದ್ದ ಇಂಗ್ಲೀಷ್ ಪರೀಕ್ಷೆಯನ್ನು ಮಾಡಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳು ಹಾಗೂ ಹೆಚ್ಚೆರಿಕೆಯ ಕ್ರಮಗಳನ್ನು ಕೈಗೊಂಡಿದೆ. ಇನ್ನು ತುಮಕೂರು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮಗೊಳ್ಳುವ ಮೂಲಕ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳು ನಡೆಯಲಿದೆ. ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆಗಾಗಿ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು, ಈ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 1306 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

     ಈ ಕಾಲೇಜಿನ 62 ಕೊಠಡಿಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ ಈಗಾಗಲೇ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಡೆಸ್ಕ್‍ಗಳ ಮೇಲೆ ನಮೂದಿಸಲಾಗಿದೆ.

      ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತರ ಜಿಲ್ಲೆಯಿಂದ 27 ಮಂದಿ, ಬೆಂಗಳೂರಿನಿಂದಲೂ ಬರುವ ವಿದ್ಯಾರ್ಥಿಗಳು ಸೇರಿ ಒಟ್ಟು 1306 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಸಿದ್ದಲಿಂಗಪ್ಪ ತಿಳಿಸಿದ್ದಾರೆ.

      ಪರೀಕ್ಷಾ ಕೊಠಡಿಯ ವಿಸ್ತೀರ್ಣದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಹಾಕಲಾಗಿದ್ದು, 20 ರಿಂದ 26 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

      ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 8.30 ರಿಂದಲೇ ವಿದ್ಯಾರ್ಥಿಗಳಿಗೋಸ್ಕರ 4 ತಂಡಗಳನ್ನು ರಚನೆ ಮಾಡಿದ್ದು, ವೈದ್ಯಾಧಿಕಾರಿಗಳು, ಆರೋಗ್ಯ ಸಹಾಯಕರು ಹಾಗೂ ಕಾಲೇಜಿನ ಸಿಬ್ಬಂದಿ ಈ ತಂಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಸ್ಯಾನಿಟೈಸ್ ಮಾಡಿ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸಲಾಗುವುದು ಎಂದರು. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳ ದೂರವಾಣಿ ಸಂಖ್ಯೆ ಪಡೆದು, ಅವರಿಂದ ಸಹಿ ಪಡೆಯಲಾಗುವುದು. ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

      ವಿದ್ಯಾರ್ಥಿಗಳು ಪರೀಕ್ಷೆ ಬರೆದು ಹೋಗುವ ತನಕ ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಜತೆಗೆ ಕಾಲೇಜಿನ ಉತ್ತಮ ವಾತಾವರಣ ನಿರ್ಮಾಣಕ್ಕೂ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ನಮ್ಮ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಯಾವುದೇ ಕಂಟೈನ್ಮೆಂಟ್ ವಲಯ ಹಾಗೂ ಕ್ವಾರಂಟೈನ್ ಕೇಂದ್ರಗಳಿಂದ ವಿದ್ಯಾರ್ಥಿಗಳು ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

(Visited 10 times, 1 visits today)