ಶಿರಾ ಉಪಚುನಾವಣೆ :ತಪಾಸಣೆಯೊಂದಿಗೆ ಬೂತ್‍ಗಳಿಗೆ ತೆರಳಿದ ಸಿಬ್ಬಂದಿ

ತುಮಕೂರು:

      ನ.3 ರಂದು ನಡೆಯಲಿರುವ ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜ್ಯೋತಿನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆರೋಗ್ಯ ತಪಾಸಣೆ ಮಾಡಿ ಮತಯಂತ್ರಗಳೊಂದಿಗೆ ಬೂತ್‍ಗಳಿಗೆ ಕಳುಹಿಸಿ ಕೊಡಲಾಯಿತು.

       ಸಿರಾ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರ ಮಾರ್ಗದರ್ಶನದಲ್ಲಿ ಥರ್ಮಲ್ ಸ್ಕ್ರೀನಿಂಗ್, ಬಿ.ಪಿ., ಶುಗರ್ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ಮತಯಂತ್ರಗಳನ್ನು ನೀಡಿ ಬಸ್‍ನಲ್ಲಿ ಮತಗಟ್ಟೆಗಳಿಗೆ ತೆರಳಲು ಅನುವು ಮಾಡಿಕೊಡಲಾಯಿತು.

ಬಸ್ ವ್ಯವಸ್ಥೆ:

      ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ತುಮಕೂರು ನಗರ ಹಾಗೂ ಗುಬ್ಬಿ ಪಟ್ಟಣದಿಂದ ಬೆಳಿಗ್ಗೆ 6.30ಕ್ಕೆ ಬಸ್‍ನಲ್ಲಿ ಸಿರಾ ಜ್ಯೋತಿನಗರದಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ತೆರಳಿ ಅಲ್ಲಿನ ಆರೋಗ್ಯ ತಪಾಸಣೆಗೆ ಒಳಪಟ್ಟರು. ನಂತರು ಮತಯಂತ್ರಗಳನ್ನು ಪಡೆದು ಬಸ್‍ಗಳಲ್ಲಿ ಮತಗಟ್ಟೆಗಳಿಗೆ ತೆರಳಿದರು.

      ಸಿರಾ ಉಪಚುನಾವಣೆ ಸಂಬಂಧ ಜ್ಯೋತಿನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದು, 330 ಮತಗಟ್ಟೆಗಳಿಗೆ 330 ಮತಯಂತ್ರಗಳು ಹಾಗೂ 67 ಹೆಚ್ಚುವರಿ ಮತಯಂತ್ರಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಸಿರಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ನಂದಿನಿದೇವಿ ತಿಳಿಸಿದರು.

     ಮತದಾನ ಮಾಡಲು ಬರುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೇ ಬರಬೇಕು. ಮತಗಟ್ಟೆಗಳಿಗೆ ಇಂದು ಮತ್ತ ನಾಳೆ ಸ್ಯಾನಿಟೈಸ್ ಮಾಡಲಿದ್ದು, ಆಶಾ ಕಾರ್ಯಕರ್ತರು ಮತಗಟ್ಟೆಗಳಲ್ಲೇ ಇದ್ದು, ಆರೋಗ್ಯ ತಪಾಸಣಾ ಕಾರ್ಯ ಮತ್ತು ಕೋವಿಡ್ ನಿಯಮಗಳ ಪಾಲನೆ ಬಗ್ಗೆ ಮತದಾರರಿಗೆ ಅರಿವು ಮೂಡಿಸಲಿದ್ದಾರೆ ಎಂದರು.

      ಕೋವಿಡ್ ಪಾಸಿಟಿವ್ ಅಥವಾ ಜ್ವರ, ನೆಗಡಿ ಇರುವವರಿಗೆ ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚಿತವಾಗಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದರು.

(Visited 5 times, 1 visits today)

Related posts