ಶಿರಾ ಉಪಚುನಾವಣೆಯಲ್ಲಿ ಬಿಜೆಪಿಗೆ ಅಹಿಂದ ವಿರೋಧಿ ಅಲೆಯೇ..?

ಶಿರಾ:

    ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದ ಕಾರ್ಯಕರ್ತರನ್ನ ಬಿಜೆಪಿ ತನ್ನೆಡೆ ಸೆಳೆಯಲು ರಣತಂತ್ರಗಳನ್ನು ರೂಪಿಸಿ ವಿವಿಧ ಆಮಿಷಗಳ ಮಹಾಪೂರವನ್ನೇ ಹರಿಸುತ್ತಿದೆ.

     ಕಾಂಗ್ರೆಸ್ ಪಕ್ಷವೂ ಸಹ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತೀಯರನ್ನ ತನ್ನೆಡೆ ಸೆಳೆದುಕೊಳ್ಳುವಲ್ಲಿ ತಾನೂ ಸಹ ಕಡಿಮೆಯಿಲ್ಲ ಎಂಬುದನ್ನ ನಿರೂಪಿಸಲು ಹೊರಟಿದೆ. ಜ್ಯಾತ್ಯಾತೀಯ ಜನತಾ ದಳದಲ್ಲಿ ಸಮರ್ಥ ದಂಡನಾಯಕನ ಕೊರತೆ ಹೆಚ್ಚಾಗಿ ಕಂಡುಬರುತ್ತಿದ್ದು, ದಿವಂಗತ ಬಿ.ಸತ್ಯನಾರಾಯಣ್‍ರವರ ಪತ್ನಿ ಅಮ್ಮಜಮ್ಮ ಅಧಿಕೃತ ಅಭ್ಯರ್ಥಿಯೆಂದು ಘೋಷಣೆಯಾಗಿದ್ದು, ಕಣ್ಣೀರಿನ ರಾಜಕಾರಣದಲ್ಲಿ ಅನುಕಂಪದ ಅಲೆಯಲ್ಲಿ ತೇಲುವ ಕನಸು ಹೊತ್ತಿದೆ.
ರಾಜ್ಯದ ಪ್ರಭಲ ನಾಯಕರ ಸಾಲಿನಲ್ಲಿ ನಿಲ್ಲುವ ಟಿ.ಬಿ.ಜಯಚಂದ್ರ 9 ಬಾರಿ ಸ್ಪರ್ಧಿಸಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ತಮ್ಮನ್ನು ತಾವು ಓರೆ ಹಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ರಾಜೇಶ್‍ಗೌಡರು ಮೂಲ ಬಿಜೆಪಿಗರಲ್ಲದಿದ್ದರೂ ಜಾತಿಯ ಬಲ ಮತ್ತು ಹಣದ ಪ್ರಾಬಲ್ಯವುಳ್ಳವರಾಗಿದ್ದು ವಲಸಿಗ ಅಭ್ಯರ್ಥಿ ಹಣೆಪಟ್ಟಿಯನ್ನ ಮೂಲ ಬಿಜೆಪಿಗರಿಂದ ಪಡೆದಿರುತ್ತಾರೆ. ಬಿಜೆಪಿಯನ್ನ ಕಟ್ಟಿ ಬೆಳೆಸಲು ಪ್ರಯತ್ನಿಸಿದ ಬಿ.ಕೆ.ಮಂಜುನಾಥ್ ಮತ್ತು ಎಸ್.ಆರ್.ಗೌಡರನ್ನು ಪಕ್ಷ ಕಡೆಗಣಿಸಿ ತಾತ್ಸಾರದಿಂದ ನೋಡಿ ಕೇವಲ ಹಣಬಲವೊಂದನ್ನೇ ಕೇಂದ್ರವಾಗಿಸಿಕೊಂಡು ವಲಸಿಗ ರಾಜೇಶ್‍ಗೌಡರಿಗೆ ಮಣೆ ಹಾಕಿದ್ದು ಬಿಜೆಪಿಯಲ್ಲಿ ಭಿನ್ನಮತ ಉಲ್ಬಣಗೊಳ್ಳಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

      ಶಿರಾ ವಿಧಾನಸಭಾ ಕ್ಷೇತ್ರ ಅಹಿಂದ ಮತದಾರರ ಕ್ಷೇತ್ರವಾಗಿದ್ದು, ಕುಂಚಿಟಿಗರ ಪ್ರಾಬಲ್ಯ ಒಂದೆಡೆಯಾದರೆ ನಿರ್ಣಯಾಕವಾಗಿ ಗೊಲ್ಲ ಸಮುದಾಯ ಹಾಗೂ ಕುರುಬ ಸಮುದಾಯಗಳು ಅಧಿಕಾರದ ಗದ್ದುಗೆಯನ್ನ ಅಲಂಕರಿಸುವ ಎಲ್ಲಾ ಗುಣಲಕ್ಷಣಗಳು ಇದ್ದರೂ ಸಹ ಕುರುಬರು ಮತ್ತು ಗೊಲ್ಲ ಸಮುದಾಯಗಳ ನಾಯಕರ ಏಳ್ಗೆಯನ್ನ ರಾಜಕೀಯ ಧಮನಿಸುವ ಹುನ್ನಾರದಲ್ಲಿ ಅಲ್ಲಿಯ ಪ್ರಬಲ ಜನಾಂಗದ ರಾಜಕೀಯ ನಾಯಕರು ಸಫಲರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

      ದಲಿತ ಸಮುದಾಯ ಅತ್ಯಂತ ನಿರ್ಣಾಯಕ ಪಾತ್ರವನ್ನ ವಹಿಸುತ್ತದೆಯಾದರೂ ದಲಿತರು, ಕುರುಬರು ಮತ್ತು ಗೊಲ್ಲರ ಏಕೀಕರಣವನ್ನ ತಡೆಯುವಲ್ಲಿ ಕುಂಚಿಟಿಗರು ಜಯಗಳಿಸಿದ್ದಾರೆ ಎನ್ನಲಾಗುತ್ತಿದೆ. ಅಹಿಂದ ಮತಕ್ಷೇತ್ರವಾದ ಶಿರಾ ಉಪಸಮರದಲ್ಲಿ ಪ್ರಭಲ ಮೂರು ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿರುವವರ ಪೈಕಿ ಕಾಂಗ್ರೆಸ್‍ನಿಂದ ಟಿ.ಬಿ.ಜಯಚಂದ್ರ, ಬಿಜೆಪಿಯಿಂದ ರಾಜೇಶ್‍ಗೌಡ, ಜೆಡಿಎಸ್‍ನಿಂದ ಅಮ್ಮಾಜಮ್ಮ ಇವರೆಲ್ಲರೂ ಕುಂಚಿಟಿಗ ಸಮುದಾಯದವರೇ ಆಗಿರುತ್ತಾರೆ. ಅಹಿಂದ ಮತದಾರರೇ ಮೇಲುಗೈ ಸಾಧಿಸಿದ್ದರೂ ಸಹ ಅಹಿಂದ ವರ್ಗಗಳಿಂದ ಯಾವೊಬ್ಬ ಅಭ್ಯರ್ಥಿಯು ಅಧಿಕೃತವಾಗಿ ಯಾವುದೇ ಪಕ್ಷದಿಂದ ಕಣಕ್ಕಿಳಿಸದಿರುವುದು ಅಹಿಂದ ವರ್ಗಗಳ ದುರ್ವಿಧಿ.

      ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷಗಳು ಹಲವಾರು ವರ್ಷಗಳಿಂದ ತಮ್ಮ ಪ್ರಾಬಲ್ಯತೆಯನ್ನು ನಾಮುಂದು ತಾಮುಂದು ಎಂದು ಪ್ರದರ್ಶಿಸುತ್ತಲೇ ಬಂದಿವೆ. ಆದರೆ, ಬಿಜೆಪಿ ತನ್ನ ಖಾತೆಯನ್ನು ತೆರೆಯಲು ಅಹಿಂದ ವರ್ಗಗಳ ಮತಗಳನ್ನೇ ಮುಖ್ಯ ಗುರಿಯಾಗಿಸಿಕೊಂಡು ಅವರುಗಳ ಓಲೈಕೆಗೆ ಪೊಳ್ಳು ಭರವಸೆಗಳನ್ನ ನೀಡುತ್ತ ಹಲವಾರು ರೀತಿಯ ಆಮಿಷಗಳನ್ನ ಸಾರ್ವಜನಿಕವಾಗಿ ಆಯಾಯ ಸಮುದಾಯಗಳ ಮುಖಂಡರುಗಳ ಓಲೈಕೆಗಾಗಿ ನೀಡುತ್ತಿದೆ ಎನ್ನುವುದು ಹಲವರ ವಾದ.

      ಕೇವಲ ಚುನಾವಣಾ ಗಿಮಿಕ್ಕಿಗಾಗಿ ಸಮುದಾಯ ಗಳನ್ನ ಒಡೆಯುವ ಮುಖೇನ ರಾಜಕೀಯ ರಣತಂತ್ರಗಳನ್ನ ರೂಪಿಸುತ್ತಿದೆ ಎನ್ನುವ ಆಪಾದನೆ ಶಿರಾ ಕ್ಷೇತ್ರದಿಂದಲೇ ಹೆಚ್ಚಾಗಿ ಕೇಳಿಬರುತ್ತಿದೆ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಕೇವಲ ಪತ್ರದಲ್ಲಿ ಘೋಷಣೆಯಾಗಿರುವುದು ಸರಿಯಷ್ಟೇ ಈ ಅಭಿವೃದ್ಧಿ ನಿಗಮದಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಗೊಲ್ಲ ಸಮುದಾಯದ ವಿದ್ಯಾವಂತ ಯುವಕರು ಚರ್ಚೆಗಳನ್ನ ಮಾಡುವ ಮುಖೇನ ಗೊಲ್ಲರ ಹಟ್ಟಿಗಳಲ್ಲಿ ಬಿಜೆಪಿಯ ರಾಜಕಾರಣದ ತಂತ್ರಗಾರಿಕೆಯನ್ನ ಅನಾವರಣಗೊಳಿಸುತ್ತಿದೆ. ಅಭಿವೃದ್ಧಿ ನಿಗಮವು ಆ ಸಮುದಾಯಕ್ಕೆ ನಿಜಕ್ಕೂ ಅಗತ್ಯತೆಯಿದ್ದು, ಅದನ್ನ ಪತ್ರದಲ್ಲೇ ಉಳಿಸಿಕೊಳ್ಳದೆ ಕಾರ್ಯರೂಪಕ್ಕೆ ತಂದಿದ್ದರೇ ಅದರ ಸಫಲತೆ ದೊರೆಯಬಹುದಿತ್ತೇನೋ..? ಕೇವಲ ಆದೇಶದ ಪ್ರತಿಗಳು ಸಹಜವಾಗಿ ಎಲ್ಲಾ ಸರ್ಕಾರಗಳಲ್ಲೂ ಹೊರಬರುತ್ತವೆ ಆದರೆ, ಅದು ಆ ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಅದರ ಸಾರ್ಥಕತೆ ಲಭಿಸುತ್ತದೆ. ಸರ್ಕಾರ ಅಭಿವೃದ್ಧಿ ನಿಗಮದ ಆದೇಶ ಮಾಡುವ ಭರದಲ್ಲಿ ವಿದ್ಯಾವಂತ ಯುವಕರ ಪ್ರಜ್ಞಾವಂತಿಕೆಯನ್ನ ಮರೆತಂತಿದೆ. ಎಲ್ಲಾ ಸಮುದಾಯದಗಳಲ್ಲೂ ರಾಜಕೀಯ ಚಾಣಾಕ್ಷ ನಡೆಯುಳ್ಳ ಯುವ ಸಮುದಾಯವಿದ್ದು, ಅವರುಗಳು ಇಂತಹ ಪತ್ರ ವ್ಯವಹಾರಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ನಾವುಗಳು ನಮ್ಮ ಸಮಾಜದ ಅಭಿವೃದ್ಧಿಗಾಗಿ ಅಧ್ಯಕ್ಷರ ನೇಮಕ, ಅಭಿವೃದ್ಧಿಯ ಪ್ರಕ್ರಿಯೆಗಳು, ಅದರ ರೂಪುರೇಷೆಗಳ ಜೊತೆಗೆ ಹಣ ಬಿಡುಗಡೆಯಾಗಿದ್ದಿದ್ದರೇ ಈ ಅಭಿವೃದ್ಧಿ ನಿಗಮದ ಸಾರ್ಥಕತೆ ಅದರ ಉಪಯೋಗ ನಮ್ಮ ಸಮುದಾಯಕ್ಕಾಗುತ್ತಿತ್ತು. ಆಗ ಆ ಸಮುದಾಯದ ಮತಗಳ ಓಲೈಕೆಗಾಗಿ ಅಭಿವೃದ್ಧಿ ನಿಗಮದ ನಾಮಧೇಯವನ್ನು ಸದ್ಬಳಕೆ ಮಾಡಿಕೊಳ್ಳಬಹುದಿತ್ತು. ಆದರೆ ಎದುರಾಗಿರುವ ಉಪಚುನಾವಣೆಯಲ್ಲಿ ಸದರಿ ವಿಚಾರ ಪರಿಣಾಮಕಾರಿಯಾಗಿ ನಮ್ಮ ಸಮುದಾಯದ ಮೇಲೆ ಪ್ರಭಾವ ಬೀರುವುದಿಲ್ಲ ಎನ್ನುವುದು ಗೊಲ್ಲ ಸಮುದಾಯದ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

      ಗುಬ್ಬಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೂರು ಬಾರಿ ಸೋಲಿನ ಸುಳಿಯಲ್ಲಿ ಸಿಲುಕಿದ ಗೊಲ್ಲ ಸಮುದಾಯದ ಜಿ.ಎನ್.ಬೆಟ್ಟಸ್ವಾಮಿ ಸೋಲಿಗೆ ಪ್ರಮುಖ ಕಾರಣ ಮತ್ಯಾರು ಅಲ್ಲ ಲಿಂಗಾಯತ ಸಮುದಾಯವೇ ಬಹುಮುಖ್ಯ ಎನ್ನುವುದು ಕೆಲವರ ಅಭಿಪ್ರಾಯ. ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದ್ದ ಜಿ.ಎನ್.ಬೆಟ್ಟಸ್ವಾಮಿರವರು ಕೇವಲ ಗೊಲ್ಲ ಸಮುದಾಯದವರು ಎನ್ನುವ ಏಕೈಕ ಕಾರಣಕ್ಕೆ ಲಿಂಗಾಯತರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುಖೇನ ಯಾದವರ ಗೆಲುವನ್ನು ಸಹಿಸುವ ಶಕ್ತಿ ಅವರಿಗಿರಲಿಲ್ಲ ಎನ್ನುವ ಅಭಿಪ್ರಾಯ ಒಂದೆಡೆಯಾದರೆ, ಗೊಲ್ಲ ಸಮುದಾಯದ ಜಿ.ಎನ್.ಬೆಟ್ಟಸ್ವಾಮಿರವರ ಸೋಲಿಗೆ ಬಹುಮುಖ್ಯ ಕಾರಣರಾಗಿದ್ದ ಪಕ್ಷೇತರ ಅಭ್ಯರ್ಥಿ ದಿಲೀಪ್ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಒಕ್ಕಲಿಗರ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಎದುರು ಸ್ಪರ್ಧಿಸಿದ್ದ ವ್ಯಕ್ತಿ ಲಿಂಗಾಯಿತರೆನ್ನುವ ಕಾರಣಕ್ಕಾಗಿ ಎಲ್ಲವನ್ನೂ ಬದಿಗೊತ್ತಿ ಮತ್ತೆ ಬಿಜೆಪಿಯೊಳಗೆ ನುಸುಳಿ ಲಿಂಗಾಯಿತರ ಅಭ್ಯರ್ಥಿ ಜೆ.ಎಸ್.ಬಸವರಾಜು ಗೆಲುವಿಗೆ ಟೊಂಕಕಟ್ಟಿ ನಿಂತರು. ನಂತರದ ದಿನಗಳಲ್ಲಿ ಹಾಲಿ ಕಾನೂನು ಸಚಿವರ ಹಿಂಬಾಲಕರಾಗಿ ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಹಾಲಿ ಸಚಿವ ಅಂದಿನ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿರವರು ಗೊಲ್ಲರ ಹಟ್ಟಿಯೊಂದರಲ್ಲಿ ಸಾರ್ವಜನಿಕವಾಗಿ ಗೊಲ್ಲ ಯುವಕನ ಮೇಲೆ ಹಲ್ಲೆ ಮಾಡುವ ಮುಖೇನ, ಗೊಲ್ಲರ ಮೇಲಿನ ಆಕ್ರೋಶವನ್ನ ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಇಂತಹ ಪಕ್ಷ ಕೇವಲ ಮತಭೇಟೆಗಾಗಿ ಅಭಿವೃದ್ಧಿ ನಿಗಮದ ಹೆಸರಿನ ಪತ್ರವೊಂದನ್ನ ಹಿಡಿದು ಗೊಲ್ಲ ಸಮುದಾಯದ ಓಲೈಕೆಗೆ ಪ್ರಯತ್ನಿಸುತ್ತಿದೆ ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂದು ಯಾದವ ಸಮುದಾಯ ಬಹಿರಂಗವಾಗಿಯೇ ಉಚ್ಚರಿಸುತ್ತಿದೆ.
ಕೇವಲ ಯಾದವ ಸಮುದಾಯವೊಂದನ್ನ ಗುರಿಯಾಗಿಸಿಕೊಂಡು ಯಾದವರ ಸೋಲು ಮತ್ತು ಗೊಲ್ಲರ ರಾಜಕೀಯ ಬೆಳವಣಿಗೆಯನ್ನ ಪೋಷಿಸಿಲ್ಲವೆಂಬ ಆಪಾದನೆ ಅಷ್ಟೇ ಅಲ್ಲ, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕನಕವೃತ್ತದ ಸಂದರ್ಭದಲ್ಲಿ ಬಿಜೆಪಿ ಸಚಿವರ ನಡೆ ಮತ್ತು ಅವರ ಬೆಂಬಲಿಗರ ವರ್ತನೆಗಳು ರಾಜ್ಯಮಟ್ಟದಲ್ಲಿ ಕುರುಬ ಸಮುದಾಯಗಳ ಆಕ್ರೋಶಕ್ಕೆ ತುತ್ತಾಗಿತ್ತು. ರಾಜ್ಯಾವ್ಯಾಪಿ ಪ್ರತಿಭಟನೆ ಉಲ್ಬಣಗೊಂಡಿತ್ತು. ಶಿರಾ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಕಣಕ್ಕಿಳಿದಿದ್ದ ಬಿ.ಕೆ.ಮಂಜುನಾಥ್ ಈ ಬಾರಿಯೂ ಸ್ಪರ್ಧೆಯನ್ನ ಬಯಸಿ ಬಿಜೆಪಿಯ ಟಿಕೇಟ್ ಆಕಾಂಕ್ಷಿಯಾಗಿದ್ದರು. ಅವರು ಕುರುಬ ಸಮುದಾಯದವರು ಎನ್ನುವ ಏಕೈಕ ಕಾರಣಕ್ಕಾಗಿ ಎರಡು ಬಾರಿ ಸ್ಪರ್ಧಿಸಿದ್ದ ಮುಖಂಡನನ್ನ ಕಡೆಗಣಿಸಿದ್ದು ಎಷ್ಟರಮಟ್ಟಿಗೆ ಸರಿ..? ಅಲ್ಲದೆ ಕುರುಬ ಸಮುದಾಯದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನ ಕೆಳಗಿಳಿಸಲು ಬಿಜೆಪಿ ರಣತಂತ್ರ ರೂಪಿಸಿದ್ದು, ಜಿಲ್ಲೆಯಲ್ಲಲ್ಲದೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಇದು ಸಾಲದೆಂಬಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರುಬ ಸಮುದಾಯದ ಅಧಿಕಾರಿ ಮತ್ತು ನೌಕರರಿಗೆ ತುಮಕೂರಿನ ಸಂಸದರು ಮತ್ತು ಅವರ ಹಿಂಬಾಲಕರು ಕೊಡುತ್ತಿರುವ ಕಿರುಕುಳ ಮತ್ತು ವರ್ಗಾವಣೆಯ ತೊಂದರೆ ಒಂದೆಡೆಯಾದರೆ, ಬಿ.ಕೆ.ಮಂಜುನಾಥ್‍ರವರ ಟಿಕೇಟ್ ವಂಚನೆ ಮತ್ತು ಅವರನ್ನ ಕಡೆಗಣನೆಯನ್ನ ಕುರುಬ ಸಮುದಾಯ ಮರೆಯುವುದಿಲ್ಲ ಎಂಬ ಅಭಿಪ್ರಾಯಗಳು ಸಾರ್ವ ಜನಿಕವಾಗಿ ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ.

      ಶಿರಾ ಕ್ಷೇತ್ರವಲ್ಲದೆ ಜಿಲ್ಲೆಯಲ್ಲೇ ಅತ್ಯಂತ ನಿರ್ಣಾಯಕ ಮತದಾರರಾಗಿರುವ ದಲಿತ ಸಮುದಾಯಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲಿ ಸಂಸದರು ಮತ್ತು ಸಚಿವರು ಅತಿ ಹೆಚ್ಚು ಕಿರುಕುಳ ನೀಡುತ್ತಿದ್ದಾರೆ ಎಂಬ ಆಪಾದನೆ ಹೆಚ್ಚಾಗಿ ಕೇಳಿಬರುತ್ತಿತ್ತು. ಅವುಗಳ ಪೈಕಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಚಂದ್ರಕಲಾ, ಗುಬ್ಬಿ ತಹಸೀಲ್ದಾರ್‍ರಾಗಿದ್ದ ಮಮತ, ಜಿಲ್ಲಾ ಸರ್ಜನ್ ಆಗಿ ಜಿಲ್ಲಾಸ್ಪತ್ರೆಗೆ ಅಧಿಕಾರವಹಿಸಿಕೊಳ್ಳಲು ಬಂದ ಸುರೇಶ್‍ಬಾಬು ಕೇವಲ ದಲಿತರೆನ್ನುವ ಕಾರಣಕ್ಕಾಗಿ ಅವರಿಗೆ ನೀಡಿದ್ದ ಕಿರುಕುಳಗಳು, ಭ್ರಷ್ಟಾಚಾರದ ಹಣೆಪಟ್ಟಿಯನ್ನ ಕಟ್ಟಿ ವರ್ಗಾವಣೆಯ ಶಿಕ್ಷೆ ನೀಡಲಾಗಿತ್ತು. ಡಿ.ಹೆಚ್.ಓ ಚಂದ್ರಕಲಾ ಮತ್ತು ತಹಸೀಲ್ದಾರ್ ಮಮತರವರಿಗೆ ಭ್ರಷ್ಟಾಚಾರದ ಕರಿನೆರಳು ಸೋಕುವಂತೆ ಮಾಡಿ ವರ್ಗಾವಣೆಗೆ ಪಟ್ಟು ಹಿಡಿದದ್ದು ಹಾಲಿ ಬಿಜೆಪಿ ಮುಖಂಡ ಸಚಿವರ ಪರಮಾಪ್ತ, ಹಿಂದೆ ಗುಬ್ಬಿ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿದ್ದ ದಿಲೀಪ್ ಎನ್ನುವುದು ಒಂದು ಕಡೆಯಾದರೆ, ತುಮಕೂರಿನ ಸಂಸದರು ಅವರ ಬೆಂಬಲಿಗರು ಮಾಡದ ತಪ್ಪಿಗೆ ಪ್ರಾಮಾಣಿಕ ಅಧಿಕಾರಿ ಮಮತಾರವರಿಗೆ ವರ್ಗಾವಣೆ ಶಿಕ್ಷೆ ನೀಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿಯಾಗಿ ಬಂದಿದ್ದ ಚಂದ್ರಕುಮಾರ್ ಮತ್ತು ಜೆ.ಡಿ.ಸವಿತಾರವರ ವರ್ಗಾವಣೆ ಶಿಕ್ಷೆ ದಲಿತರೆನ್ನುವ ಕಾರಣಕ್ಕೆ ಎನ್ನುವುದು ಎಷ್ಟರಮಟ್ಟಿಗೆ ಸರಿ..? ಬಹಳಷ್ಟು ವರ್ಷಗಳಿಂದ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿರುವ ವೀರಭದ್ರಯ್ಯನವರ ವರ್ಗಾವಣೆಯಾಗಿ ಆ ಸ್ಥಳಕ್ಕೆ ಸುರೇಶ್‍ಬಾಬು ನಿಯುಕ್ತಿಗೊಂಡರು. ಕೇವಲ ದಲಿತರೆನ್ನುವ ಕಾರಣಕ್ಕೆ ಚಾರ್ಜ್ ಕೊಡದೆ ಒಂದೇ ದಿನದಲ್ಲಿ ಇದೇ ಸರ್ಕಾರದಲ್ಲಿ ಮರು ಆದೇಶ ಮಾಡಿ ತಡೆದದ್ದು ವೀರಭದ್ರಯ್ಯನವರು ಲಿಂಗಾಯಿತರೆನ್ನುವ ಕಾರಣಕ್ಕಾಗಿಯೇ..? ಅಥವಾ ಸುರೇಶ್‍ಬಾಬು ದಲಿತರು ಎನ್ನುವ ಕಾರಣಕ್ಕಾಗಿಯೇ ಎನ್ನುವುದು ದಲಿತ ಸಮುದಾಯದ ಯಕ್ಷಪ್ರಶ್ನೆ..?

      ತುಮಕೂರು ನಗರವು ಸೇರಿದಂತೆ ಜಿಲ್ಲೆಯ ವಿವಿಧೆಡೆ ದಲಿತರು, ಕುರುಬರು, ಗೊಲ್ಲರು ಸೇರಿದಂತೆ ವಿವಿಧ ಸಮುದಾಯಗಳ ಅಧಿಕಾರಿಗಳಿಗೆ ವರ್ಗಾವಣೆಯ ಶಿಕ್ಷೆ ನೀಡಿ ಕಿರುಕುಳ ನೀಡುತ್ತಿರುವ ಹಾಲಿ ಸಂಸದರ ಪರಮಾಪ್ತರು ಮತ್ತು ಅವರ ನಡೆಗಳು ಅಹಿಂದ ಸಮುದಾಯಗಳ ಆಕ್ರೋಶಕ್ಕೆ ತುತ್ತಾಗಿದೆ ಎನ್ನುವುದು ಅಹಿಂದ ವರ್ಗಗಳ ಅಧಿಕಾರಿಗಳ ಅಳಲಾಗಿದೆ. ಕೇವಲ ಪ್ರಭಲ ಸಮುದಾಯವಾದ ಲಿಂಗಾಯತ ಜನಾಂಗದ ಅಧಿಕಾರಿಗಳಿಗಷ್ಟೇ ಕಾರ್ಯನಿರ್ವಹಿಸುವ ಸಾಮಥ್ರ್ಯವಿದೆಯೇ..? ನಾವುಗಳ್ಯಾರು ಸರ್ಕಾರಿ ನೌಕರರಲ್ಲವೇ..? ನಮ್ಮಗಳಿಗೇಕೆ ಇಂತಹ ಶಿಕ್ಷೆ..? ಲಿಂಗಾಯಿತರಲ್ಲದ ಅಧಿಕಾರಿಗಳು ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವಂತಿಲ್ಲವೇ..? ಭ್ರಷ್ಟಾಚಾರವನ್ನೇ ಮೈಗಂಟಿಸಿಕೊಳ್ಳದ ದಲಿತರು ಹಾಗೂ ಹಿಂದುಳಿದ ವರ್ಗಗಳ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿ ಹೊರಗೆ ಕಳುಹಿಸುತ್ತಿದ್ದೀರಿ ಭ್ರಷ್ಟಾಚಾರದಲ್ಲಿ ತಲ್ಲೀನವಾಗಿರುವ ಮತ್ತು ಭ್ರಷ್ಟಚಾರದಲ್ಲಿ ಭಾಗಿಯಾಗಿ ಸಾರ್ವಜನಿಕವಾಗಿ ಬಹಿರಂಗವಾಗಿರುವ ಅಧಿಕಾರಿಗಳ ಅಮಾನತ್ತು ಹಾಗೂ ವರ್ಗಾವಣೆ ಏಕೆ ಆಗುತ್ತಿಲ್ಲ..? ಎನ್ನುವ ನೊಂದ ಅಧಿಕಾರಿಗಳ ಪ್ರಶ್ನೆಯನ್ನ ಸಾಕ್ಷೀಕರಿಸುವಂತೆ ಚಂದ್ರಕಲಾ ಮತ್ತು ಮಮತರವರ ವರ್ಗಾವಣೆಗೆ ಕಾರಣೀಭೂತರಾದ ರಾಜಕಾರಣಿಗಳು ತುಮಕೂರು ತಹಶೀಲ್ದಾರ್ ಮೋಹನ್ ಮೇಲೆ ಎಸಿಬಿಯಲ್ಲಿ ಕೇಸು ದಾಖಲಾಗಿದೆ, ವರ್ಗಾಣೆಗೆ ಶಿಪಾರಸ್ಸು ಕೂಡ ಮಾಡಲಾಗಿದೆ. ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಬೃಹತ್ ಮಟ್ಟದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಲಿಂಗಾಯಿತ ಅಧಿಕಾರಿಗಳೆನ್ನುವ ಏಕೈಕ ಕಾರಣಕ್ಕಾಗಿ ಅವರುಗಳನ್ನು ರಕ್ಷಿಸಲಾಗುತ್ತಿದೆಯೇ..? ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದ ಸ್ಥಿತಿಯಲ್ಲಿ ಕೆಲವು ಅಧಿಕಾರಿಗಳಿದ್ದಾರೆ.
ಇಂತಹ ಹಲವು ವಿಚಾರಗಳನ್ನ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮುಂದಿಟ್ಟುಕೊಂಡು ಬಿಜೆಪಿ ಪಕ್ಷದ ವಿರುದ್ಧ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಂತಹ ತಂತ್ರಗಳು ಅಧಿಕಾರಿಗಳ ಕಿರುಕುಳ ಮತ್ತು ವರ್ಗಾವಣೆಯ ವಿಚಾರಗಳು ಆಯಾ ಸಮುದಾಯಗಳ ಮೇಲೆ ಸದರಿ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ, ನಿಜಕ್ಕೂ ಬಿಜೆಪಿ ಪಕ್ಷ ಅಹಿಂದ ವರ್ಗಗಳ ವಿರೋಧಿಯೇ, ಅಹಿಂದ ವರ್ಗಗಳ ನಾಯಕರುಗಳು ಬಿಜೆಪಿ ಪಕ್ಷದಲ್ಲಿಲ್ಲವೇ..? ಎನ್ನುವುದು ರಾಜಕೀಯ ವಿಶ್ಲೇಷಕರ ಯಕ್ಷಪ್ರಶ್ನೆಯಾಗಿದೆ..?

(Visited 26 times, 1 visits today)

Related posts

Leave a Comment