ತುಮಕೂರು:

      ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಧಿಸೂಚನೆಯನ್ನು ಅಕ್ಟೋಬರ್ 9ರಂದು ಹೊರಡಿಸಲಿದ್ದು, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ: ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಅಕ್ಟೋಬರ್ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆಗೆ ಅಕ್ಟೋಬರ್ 17, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 19 ಕೊನೆಯ ದಿನವಾಗಿರುತ್ತದೆ. ನವೆಂಬರ್ 3ರಂದು ಚುನಾವಣಾ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.

      ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಧುಗಿರಿ ಉಪವಿಭಾಗದ ಉಪವಿಭಾಗಾಧಿಕಾರಿ ಡಾ: ನಂದಿನಿದೇವಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಶಿರಾ ತಾಲ್ಲೂಕಿನ ತಹಶೀಲ್ದಾರ್ ನಾಹೀದಾ ಝಂ ಝಂ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸಾವಿರ ಮತದಾರರಿಗೆ ಒಂದು ಮತಗಟ್ಟೆಯಂತೆ 330 ಮತಗಟ್ಟೆಗಳನ್ನು ಸ್ಥಾಪಿಸ ಲಾಗುವುದು. 7-2- 2020ರಂದು ಪ್ರಚುರಪಡಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಈ ಚುನಾವಣೆಗೆ ಬಳಸಲಾಗುತ್ತಿದ್ದು, 01-10-2020 ಪುರುಷರು 1,10,265 ಮಹಿಳೆಯರು 1,05,419, ಇತರೆ 10 ಮಂದಿ ಸೇರಿ ಒಟ್ಟು 2,15,694 ಮತದಾರರು ಇದ್ದಾರೆ. ಮತದಾನಕ್ಕೆ ಒಟ್ಟು 1584 ಸಿಬ್ಬಂದಿಯನ್ನು ನೇಮಿಸಲಾಗುವುದು. ಮಾದರಿ ನೀತಿ ಸಂಹಿತೆಯು ಚುನಾವಣಾ ಆಯೋಗ ವೇಳಾಪಟ್ಟಿ ಘೋಷಿಸಿದ ಕ್ಷಣದಿಂದಲೇ ಸಂಪೂರ್ಣ ಜಿಲ್ಲೆಗೆ ಅನ್ವಯಿಸಲಿದೆ. ಹೊಸ ಕಾಮಗಾರಿಗಳ ಶಂಕುಸ್ಥಾಪನೆ/ ಉದ್ಘಾಟನೆ ನೆರವೇರಿಸಲು ಅವಕಾಶವಿಲ್ಲ. ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದ್ದರೆ ಮುಂದುವರೆಸಬಹುದು ಎಂದು ಅವರು ತಿಳಿಸಿದರು.

      ಜಿಲ್ಲೆಯಲ್ಲಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಉಪ ಚುನಾವಣೆ ನಡೆಯುತ್ತಿರುವುದರಿಂದ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಗಡಿ ಹಾಗೂ ಜಿಲ್ಲೆಯ ಇನ್ನಿತರೆ ತಾಲ್ಲೂಕುಗಳು ಸಂದಿಸುವ ರಸ್ತೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಚುನಾವಣಾ ಅಕ್ರಮ ತಡೆಗಟ್ಟಲು ಸದ್ಯಕ್ಕೆ 4 ಪ್ಲೈಯಿಂಗ್ ಸ್ವ್ಕಾಡ್, 10 ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗುವುದು. ಅಲ್ಲದೆ ಸ್ಟಾಟಿಕ್ ಸರ್ವೆಲೇನ್ಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್, ವೀಡಿಯೋ ವೀವಿಂಗ್ ಟೀಮ್, ಇನ್ನಿತರೆ ತಂಡಗಳನ್ನು ರಚಿಸಲಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಶಿರಾ ಹಾಗೂ ಅಕ್ಕಪಕ್ಕದ ತಾಲ್ಲೂಕುಗಳಲ್ಲಿ ಮದ್ಯ ಮಾರಾಟವಾಗಿರುವ ಬಗ್ಗೆ ಮಾಹಿತಿ ಹಾಗೂ ಮದ್ಯದ ಅಂಗಡಿಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದರು.

      ಈಗಾಗಲೇ ಶಿರಾದಲ್ಲಿ ವಿವಿಧ ರಾಜಕೀಯ ಪಕ್ಷಗಳ ಜೊತೆ ಸಭೆ ಮಾಡಲಾಗಿದೆ. ವಿವಿಧ ಸಭೆ-ಸಮಾರಂಭಗಳಿಗೆ/ ವಾಹನಗಳಿಗೆ ಹಾಗೂ ಇತ್ಯಾದಿಗಳಿಗೆ ಅನುಮತಿ ನೀಡುವ ಸಂಬಂಧ ಸಿಂಗಲ್ ವಿಂಡೋ ಸಿಸ್ಟಂ ಅಡಿ ಚುನಾವಣಾಧಿಕಾರಿಗಳು/ ಶಿರಾ ತಾಲ್ಲೂಕು ತಹಶೀಲ್ದಾರರ ಕಛೇರಿಯಲ್ಲಿ ಕ್ರಮವಹಿಸಲಾಗಿದೆ. ಮತದಾನದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಹಾಗೂ ಮತಎಣಿಕೆ ಕಾರ್ಯವು ಶಿರಾ ಪದವಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

      ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆಗಳು ಭದ್ರತಾ ಕೊಠಡಿ ಹಾಗೂ ಆರ್‍ಓ ಕಛೇರಿಯನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಲಾಗುವುದು. 80 ವರ್ಷ ಮೇಲ್ಪಟ್ಟ ಮತದಾರರು, ವಿಕಲ ಚೇತನರು ಹಾಗೂ ಕೋವಿಡ್ ಶಂಕಿತ ಅಥವಾ ಸೋಂಕಿತರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ಆಯೋಗ ಅವಕಾಶ ಕಲ್ಪಿಸಿದೆ. ನಮೂನೆ-12ಡಿ ಯಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸಿದ 5 ದಿನದೊಳಗೆ ಮನವಿ ಸಲ್ಲಿಸಿದರೆ ಪೋಸ್ಟಲ್ ಬ್ಯಾಲೆಟ್‍ನ ವ್ಯವಸ್ಥೆ ಕಲ್ಪಿಸಲಾಗುವುದು. ಮತದಾರರು ಮತಗಟ್ಟೆಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತಗಟ್ಟೆ ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಸೋಂಕು ನಿಯಂತ್ರಣದ ಮುಂಜಾಗ್ರತಾ ಸೌಲಭ್ಯಗಳನ್ನು ಒದಗಿಸಲಾಗುವುದು. ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಕ್ಷಯರೋಗಾಧಿಕಾರಿಗಳನ್ನು ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಕೋವಿಡ್-19ರ ನೋಡಲ್ ಅಧಿಕಾರಿಯಾಗಿ ಶಿರಾ ತಾಲ್ಲೂಕು ಆರೋಗ್ಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಭ್ಯರ್ಥಿಗಳು/ ರಾಜಕೀಯ ಪಕ್ಷಗಳು ಬಹಿರಂಗ ಸಭೆ ಮತ್ತು ಸಮಾರಂಭ ಮಾಡಲು ವಿಶಾಲ ಮೈದಾನವನ್ನು ಈಗಾಗಲೇ ಗುರುತಿಸಿ ಆಯೋಗಕ್ಕೆ ಸಲ್ಲಿಸಲಾಗಿದೆ. ಸದರಿ ಮೈದಾನದಲ್ಲಿಯೇ ಕೇಂದ್ರ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳು ಹಾಗೂ ಆಯೋಗ ನೀಡಿರುವ ಸೂಚನೆಗಳನ್ವಯ ಕಾರ್ಯಕ್ರಮಗಳನ್ನು ಸಂಘಟಿಸಬೇಕಾಗುತ್ತದೆ. ಅನುಮತಿ ನೀಡುವಾಗಲೆ ಮುಚ್ಚಳಿಕೆ ಪತ್ರ ಪಡೆದು ಮಾರ್ಗಸೂಚಿಗಳೊಂದಿಗೆ ಅನುಮತಿ ನೀಡಲಾಗುವುದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನಾಮಪತ್ರ ಸಲ್ಲಿಸಲು ಇಬ್ಬರು ವ್ಯಕ್ತಿಗಳು ಹಾಗೂ ಎರಡು ವಾಹನಗಳಿಗೆ ಮಾತ್ರ ಚುನಾವಣಾಧಿಕಾರಿಗಳ ಕಛೇರಿಯ ಪ್ರವೇಶಕ್ಕೆ ಅವಕಾಶವಿರುತ್ತದೆ. ನಾಮಪತ್ರ ಅಫಿಡವಿಟ್‍ಗಳನ್ನು ಮತ್ತು ಠೇವಣಿ ಹಣವನ್ನು ಆನ್‍ಲೈನ್‍ನಲ್ಲಿಯೂ ಸಹ ಸಲ್ಲಿಸಬಹುದಾಗಿರುತ್ತದೆ. ಮನೆ-ಮನೆ ಪ್ರಚಾರಕ್ಕೆ ಕೇವಲ 5 ಜನರಿಗೆ ಮಾತ್ರ ಆಯೋಗವು ಅವಕಾಶ ಕಲ್ಪಿಸಿದೆ.

      ಜಿಲ್ಲೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ 28404 ಮತದಾರರು: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಅಧಿಸೂಚನೆಯನ್ನು ಅಕ್ಟೋಬರ್ 1ರಂದು ಪ್ರಾದೇಶಿಕ ಆಯುಕ್ತರು ಬೆಂಗಳೂರು ಇವರು ಹೊರಡಿಸಿದ್ದು, ಜಿಲ್ಲೆಯಲ್ಲಿ 28404 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

      ನಾಮಪತ್ರದ ಕೊನೆಯ ದಿನಾಂಕವಾದ ಅಕ್ಟೋಬರ್ 8ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ ಮಾಡಲಿದ್ದು, ಅದೇ ಮತದಾರರ ಪಟ್ಟಿಯನ್ನು ಚುನಾವಣೆಗೆ ಬಳಸಲಾಗುವುದು. ಸೆಪ್ಟೆಂಬರ್ 30ರವರೆಗೂ ಸ್ವೀಕರಿಸಿರುವ ಅರ್ಜಿಗಳನ್ನು ಪರಿಗಣಿಸಲಾಗಿದೆ. ಈ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 64 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅಕ್ಟೋಬರ್ 28ರಂದು ಚುನಾವಣಾ ಮತದಾನ ನಡೆಯಲಿದೆ. ಈ 

      ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಲೋಕ್ ಕುಮಾರ್ ದುಬೆ ಹಾಜರಿದ್ದರು.

(Visited 33 times, 1 visits today)