ತುಮಕೂರು :

     ಸಿರಾ ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಮುಖಂಡರು ಸಿರಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಿರಾ ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಬಿ.ರಮೇಶ್ ಅವರು, ಸಿರಾ ತಾಲ್ಲೂಕಿಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಹರಿಸಲು ತಾರತಮ್ಯ ಮಾಡಲಾಗುತ್ತಿದ್ದು, ಮದಲೂರು ಕೆರೆಗೂ ನೀರು ಹಂಚಿಕೆಯಾಗಿದ್ದರು, ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಸಲ್ಲದ ನೆಪ ಹೇಳುತ್ತಾ, ಸಿರಾಗೆ ನೀರು ಹರಿಸುವುದಕ್ಕೆ ತಡೆ ಹಾಕಲಾಗಿದೆ ಎಂದು ಆರೋಪಿಸಿದರು.

      ಕಳೆದ ನಲ್ವತ್ತು ದಿನಗಳಲ್ಲಿ ಹೇಮಾವತಿ ಹರಿಸುವಂತೆ ಒತ್ತಾಯಿಸಿ ಶಿರಾದಲ್ಲಿ ರೈತರು ಹೋರಾಟ ನಡೆಸುತ್ತಿದ್ದರು, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಅವರತ್ತ ನೋಡಿಲ್ಲ, ಸಿರಾ ಏನಾದರೂ ಪಾಕಿಸ್ತಾನದಲ್ಲಿ ಇದೆಯೇ? ಇದೇ ಜಿಲ್ಲೆಯಲ್ಲಿರುವ ಸಿರಾಕ್ಕೆ ನೀರು ಹರಿಸಲು ರಾಜಕೀಯ ಮಾಡುತ್ತಿರುವುದಾದರೂ ಏತಕ್ಕೆ ಎಂದ ಅವರು, ನೀರಿನ ರಾಜಕಾರಣವನ್ನು ಬಿಟ್ಟು ಸಿರಾದ ಜನರಿಗೆ ಕುಡಿಯಲು ನೀರು ಹರಿಸಲು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

      ನೀರಾವರಿ ಹೋರಾಟಗಾರರನ್ನು ಉಸ್ತುವಾರಿ ಸಚಿವರು ಅವಮಾನ ಮಾಡಿದ್ದಾರೆ, ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಂತೆ ಸರ್ವರಿಗೂ ಸಮಪಾಲು ನೀಡಬೇಕಾಗಿರುವ ಸಚಿವರು, ರೈತರನ್ನು ಬೇಕಾಬಿಟ್ಟಿ ಮಾತನಾಡಿಸುತ್ತಾರೆ, ಹೇಮಾವತಿ ನೀರು ಹರಿಸುವಂತೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ, ಸಿರಾಗೆ ನೀರು ಹರಿಸಲಾಗಿದೆ ಎಂದು ತುಮಕೂರು ಸಂಸದರು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಮದಲೂರು ಕೆರೆ ಒಂದು ಹನಿ ನೀರು ತಲುಪಿಲ್ಲ, ನೀರಿಲ್ಲದೆ ಮದಲೂರು ಸುತ್ತಮುತ್ತಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಸಿರಾಗೆ ನೀರು ಹರಿಯದಂತೆ ಚಾನೆಲ್‍ಗೆ ಮರಳು ಮೂಟೆ ಹಾಕಿಸಿದ್ದಾರೆ. ಮದಲೂರಿಗೆ ನೀರು ಹಂಚಿಕೆಯಾಗಿಲ್ಲ ಎನ್ನುವ ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲ, ನೀರು ಹಂಚಿಕೆ ಆಗದೇ ಕೇಂದ್ರ ಸರ್ಕಾರ ಅನುದಾನ ನೀಡಿದೆಯೇ, ಸಿರಾಗೆ ಹಂಚಿಕೆಯಾಗಿರುವ 0.9ಟಿಎಂಸಿ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಅವಮಾನ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

        ಜಿಲ್ಲಾ ರೈತ ಸಂಘದ ಮುಖಂಡ ಎ.ಗೋವಿಂದರಾಜು ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಪಡೆಯಲು ಇದುವರೆಗೂ ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಿಗಾಗಲಿ ಆಗಲಿಲ್ಲ, ಕೆನಾಲ್ ಅಗಲೀಕರಣವಾಗದೇ, ಜಿಲ್ಲೆಯ ಪಾಲಿನ ನೀರು ಬರುವುದಿಲ್ಲ, ಸಿರಾ ತಾಲ್ಲೂಕಿಗೆ ನೀರು ಹರಿಸಿರುವುದಕ್ಕೆ ದಾಖಲೆಗಳಿಲ್ಲ, ತಕ್ಷಣವೇ ನೀರು ಹರಿಸುವುದಕ್ಕೆ ಮಾಪನ ಅಳವಡಿಸಬೇಕು ಹಾಗೂ ಸಿರಾ ಹಾಗೂ ಕುಣಿಗಲ್ ತಾಲ್ಲೂಕಿಗೆ ಹಂಚಿಕೆಯಾಗಿರುವ ನೀರು ಹರಿಸಬೇಕು ಎಂದು ಆಗ್ರಹಿಸಿದರು.

        ನಾವೇನು ನಕ್ಸಲೈಟಾ ಬಂದೂಕು ಇಟ್ಕೊಂಡು ಮುತ್ತಿಗೆ ಹಾಕ್ತೀವಾ, ರೈತರ ಹೋರಾಟವನ್ನು ಹತ್ತಿಕ್ಕುವ ಇಂತಹ ಕೆಲಸ ಮಾಡಬಾರದು, ಸಿರಾದಿಂದ ಹೊರಟ ರೈತರನ್ನು ಬಂಧಿಸಲಾಗಿದೆ, ಸಿರಾ ತಾಲ್ಲೂಕಿನ ಶಾಶ್ವತ ನೀರಾವರಿ ಹೋರಾಟಗಾರರಿಗೆ ರೈತ ಸಂಘ ಬೆಂಬಲ ನೀಡುತ್ತೇವೆ, ಸಬೂಬು ಹೇಳದೆ ಮದಲೂರು ಕೆರೆಗೆ ನೀರು ಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

       ದಲಿತ ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಧುಸ್ವಾಮಿ ಅವರು, ಸಚಿವರಾಗಿ ಕಾರ್ಯನಿರ್ವಹಿಸಲು ಅನರ್ಹರು, ರೈತರೊಂದಿಗೆ ಹೇಗೆ ಮಾತನಾಡಬೇಕೆಂಬ ಅರಿವು ಇಲ್ಲದ ಅವರು, ಸಿರಾಗೆ ನೀರು ಹರಿಸದೇ ಇದ್ದಲ್ಲಿ, ಸಿರಾ ತಾಲ್ಲೂಕಿನಲ್ಲಿ ಯಾವುದೇ ಕಾರ್ಯಕ್ರಮವನ್ನು ಮಾಡಲು ಬಿಡುವುದಿಲ್ಲ, ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಕೆರೆಗಳಿಗೆ ನೀರು ಹರಿಸಲು ಮುಂದಾಗಿರುವ ಸಚಿವರು, ಸಿರಾಗೆ ನೀರು ಹರಿಸಬೇಕು, ಸಿರಾ ತಾಲ್ಲೂಕಿನ ಒಂದು ಭಾಗದ ಮತದಾರರು ಮತ ಹಾಕಿದ್ದಾರೆ ಎನ್ನುವುದನ್ನು ಮರೆತಿದ್ದಾರೆ, ತುಮಕೂರು ಸಂಸದರಿಗೆ ಕಾಮನ್‍ಸೆನ್ಸ್ ಇಲ್ಲ, ಮದಲೂರು ಕೆರೆಗೆ ನೀರು ಹರಿಸಿದರೆ ತಾಲ್ಲೂಕು ಅರ್ಧ ಬರ ಮುಕ್ತವಾಗುತ್ತದೆ ಎನ್ನುವುದು ಗೊತ್ತಿದ್ದರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

       ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎನ್.ಶ್ರೀನಿವಾಸ್, ಯತಿರಾಜು, ಪುಟ್ಟಕಾಮಣ್ಣ, ಪರಮಶಿವಯ್ಯ, ಟೈರ್ ರಂಗನಾಥ್, ಸಿಪಿಐ ಮುಖಂಡ ಗಿರೀಶ್, ತಾರೇಗೌಡ, ಲಕ್ಷ್ಮಣಗೌಡ, ಕಾರ್ಪೇನಹಳ್ಳಿ ರಂಗನಾಥ್, ಬೆಲ್ಲದಮಡು ಭರತ್‍ಕುಮಾರ್, ಕಲ್ಲೇಗೌಡ, ಶಿವಕುಮಾರ್, ಗೋವಿಂದಪ್ಪ ಇತರರು ಭಾಗವಹಿಸಿದ್ದರು.

(Visited 12 times, 1 visits today)