ತುಮಕೂರು:

     ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ಮಹಾಮಾರಿಯಾಗಿ ಆಡಳಿತಾತ್ಮಕ, ವಾಣಿಜ್ಯ, ಸೇವಾಕ್ಷೇತ್ರ…..ಇತ್ಯಾದಿ ಎಲ್ಲಾ ಕಡೆಯಲ್ಲಿಯೂ ರಾಕ್ಷಸ ಪ್ರವೃತ್ತಿ ತೋರಿರುವುದು ಸರಿಯಷ್ಟೇ. ಕರ್ನಾಟಕ ಸರ್ಕಾರ ಈ ರೋಗ ತಡೆಗಟ್ಟಲು ಶ್ರಮಿಸುತ್ತಿರುವುದು ದೇಶದಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು. 

      ರಾಜ್ಯದಲ್ಲಿ ಮಾರ್ಚ್ 26ರಂದು ಪ್ರಾರಂಭವಾದ ಈ ಮಹಾಮಾರಿ ರೋಗ ರಾಕ್ಷಸ ಪ್ರವೃತ್ತಿ ತೋರುತ್ತಾ, ಪ್ರತಿದಿನ ಹೆಚ್ಚುತ್ತಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿದ್ದು, ಜುಲೈ ಮಾಹೆಯಲ್ಲಿಯೇ ಹೆಚ್ಚಿನ ಸೋಂಕಿತ-ಸಾವಿನ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಜನತೆ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಈಗೀಗ ಸೋಂಕಿತ ಪ್ರಕರಣಗಳು ಕಾಣುತ್ತಲಿದೆ.

  ಉದಾ:

      ತುಮಕೂರು ಜಿಲ್ಲೆಯಲ್ಲಿ ಮಾರ್ಚ್ ಮಾಹೆಯಲ್ಲಿ 2 ಇದ್ದ ಪರಿಮಾಣ ಜುಲೈ ಮಾಹೆಯಲ್ಲಿಯೇ 150ಕ್ಕೂ ಹೆಚ್ಚು ಪ್ರಕರಣಗಳು ಬಂದಿದ್ದು, ಜಿಲ್ಲೆಯಲ್ಲಿ ಹಾಲಿ 254 ಪ್ರಕರಣಗಳಿರುತ್ತವೆ. ರಾಜ್ಯದಲ್ಲಿಯೂ ಇಂತಹ ಪರಿಸ್ಥಿತಿ ಇದೆ.

     ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡುವಾಗ ಹಾಗೂ ನನ್ನನ್ನು ಸಂಪರ್ಕಿಸಿರುವ ವ್ಯಕ್ತಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಿದಾಗ ಪ್ರತಿ ತಾಲ್ಲೂಕಿನಲ್ಲಿಯೇ ಈ ರೋಗಕ್ಕೆ ಚಿಕಿತ್ಸೆ ಕೊಡುವುದು ಸೂಕ್ತ ಎಂಬ ಅಭಿಪ್ರಾಯ ಹೆಚ್ಚಳವಾಗಿದೆ. ತಾಲ್ಲೂಕಿನ ಕೇಂದ್ರಗಳ ಆಸ್ಪತ್ರೆಗಳನ್ನು “ತಾಲ್ಲೂಕು ಕೋವಿಡ್ ಆಸ್ಪತ್ರೆ’’ ಎಂದು ಘೋಷಿಸಿ, ಸುಸಜ್ಜಿತಗೊಳಿಸುವುದು ಅವಶ್ಯವಾಗಿದೆ. ರೋಗ ಲಕ್ಷಣವೇ ಗೋಚರಿಸದ ರೋಗಿಗಳು ಬಹಳವಾಗಿದ್ದು, ಇವರುಗಳಿಗೋಸ್ಕರ Covid-Care-Centerನ್ನು ತಾಲ್ಲೂಕಿನ ವಿದ್ಯಾರ್ಥಿನಿಲಯಗಳ, ಛತ್ರಗಳು, ಸಮುದಾಯ ಕೇಂದ್ರಗಳ ಕಟ್ಟಡಗಳನ್ನು ಬಳಸಿಕೊಳ್ಳಬಹುದಾಗಿದೆಯೆಂಬ ಅಭಿಪ್ರಾಯವನ್ನು ತಮ್ಮ ಮುಂದಿಡುತ್ತಿದ್ದೇನೆ.

      ರಾಜ್ಯದಲ್ಲಿನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸತ್ ಸದಸ್ಯರು ಅವರುಗಳಿಗೆ ತಮ್ಮ ತಮ್ಮ ಕ್ಷೇತ್ರದ ಜನತೆಯ ಆರೋಗ್ಯ ರಕ್ಷಣೆಗೆ ಪೂರಕವಾಗುವಂತೆ ಇವರ ನೇತೃತ್ವದಲ್ಲಿ ಕೋವಿಡ್-19ರ ಟಾಸ್ಕ್‍ಪೋರ್ಸ್ ಸಮಿತಿ ರಚಿಸುವುದು ಸೂಕ್ತವೆಂಬ ವಿಷಯವನ್ನು ತಮ್ಮ ಮುಂದಿಡುತ್ತಾ, ತಹಶೀಲ್ದಾರ್‍ರವರು, ಕಾರ್ಯ ನಿರ್ವಾಹಕ ಅಧಿಕಾರಿಗಳು, ಸರ್ಕಾರ, ಇನ್ಸ್‍ಪೆಕ್ಟರ್‍ರವರು, ಪಟ್ಟಣ ಪಂಚಾಯ್ತಿ, ನಗರಸಭೆ, ಪುರಸಭೆ, ಮುಖ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಈ ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡಿದರೆ ಜನರ ಉಸ್ತುವಾರಿಗೆ ಸಹಕಾರಿಯಾಗುತ್ತದೆ.
ಜಿಲ್ಲಾ ಕೋವಿಡ್ ಕೇಂದ್ರಕ್ಕೆ ತೀವ್ರ ಸೋಂಕಿತ ಹಾಗೂ ವಿವಿಧ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಮಾತ್ರ ಕಳುಹಿಸಲು ಹಾಗೂ ಇತರೆ ಸೋಂಕಿತರು ಜಿಲ್ಲಾ ಕೇಂದ್ರಕ್ಕೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಬಹುದು. ಆಂಬ್ಯುಲೆನ್ಸ್ ನಿರ್ವಹಣೆ ಸಮರ್ಪಕವಾಗಿಲ್ಲವೆಂಬ ದೂರು ವ್ಯಾಪಕವಾಗಿದೆ. ಈ ವ್ಯವಸ್ಥೆ ಸರಿಪಡಿಸಬೇಕಾಗಿದೆ. ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ನ್ನು ಪ್ರಾರಂಭಿಸುವ/ ಉಸ್ತುವಾರಿಯನ್ನು ಸಹ ಈ ಸಮಿತಿಗೆ ನೀಡಬಹುದಾಗಿದೆ.

      ರಾಜ್ಯದಲ್ಲಿ ಕೋವಿಡ್-19 ಹೊರತುಪಡಿಸಿ ಇತರೆ ಖಾಯಿಲೆಗಳಾದ ಮಧುಮೇಹ, ರಕ್ತದೊತ್ತಡ, ಚರ್ಮದ ಖಾಯಿಗೆ, ಕಣ್ಣಿನ ಸಮಸ್ಯೆ, ಅಪಘಾತದಿಂದ ನೊಂದವರು ಇಂತಹ ರೋಗಿಗಳ ತಪಾಸಣೆಗಳು ಕೋವಿಡ್-19 ಘಟಕಕ್ಕೆ ಹತ್ತಿರವಿರುವ ಕಟ್ಟಡಗಳಲ್ಲಿ ನಡೆಯುತ್ತಿರುವುದರಿಂದ ಈ ತರಹದ ರೋಗಿಗಳು-ವೈದ್ಯಕೀಯ ಸೌಲಭ್ಯವಿಲ್ಲದೇ ತೀವ್ರ ತರವಾದ ನೋವು ಅನುಭವಿಸುತ್ತಿರುತ್ತಾರೆ. ಇವರಿಗೆ ಸರ್ಕಾರಿ ಕಟ್ಟಡಗಳಲ್ಲಿ ಅಥರಾ ಖಾಸಗಿ ಕಟ್ಟಡದಲ್ಲಿ ಅಥವಾ ನಗರ-ಪಟ್ಟಣ-ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಾಲ್ಲೂಕಿನಲ್ಲಿರುವ ಸರ್ಕಾರಿ ಸ್ಪೆಷಲಿಸ್ಟ್ ವೈದ್ಯರನ್ನು ಬಳಸಿಕೊಂಡು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿದಲ್ಲಿ ಜನತೆಗೆ ಅನುಕೂಲವಾಗುತ್ತದೆ.

      ಮದ್ಯ ಮಾರಾಟ ಪ್ರಾರಂಭವಾದ ನಂತರ ಅಪಘಾತ ಜಾಸ್ತಿಯಾಗಿರುವುದು ಅಂಕಿ ಅಂಶಗಳಿಂದ ಕಂಡು ಬಂದಿದೆ. ತುಮಕೂರು ಜಿಲ್ಲೆಯಲ್ಲಿ ಪ್ರತಿನಿತ್ಯ ಸುಮಾರು 8ರಿಂದ 10 ಪೋಸ್ಟ್ ಮಾರ್ಟಂ ನಡೆಯುತ್ತಿದೆ. ಈ ಅಪಘಾತದ ರೋಗಿಗಳು ಹೆಚ್ಚಿನವರು ಬಡ ಜನತೆಯಾಗಿದ್ದು, ಉಚಿತವಾಗಿ ಸಲಭ್ಯ ಪಡೆಯಲು ವ್ಯವಸ್ಥೆ ಮಾಡಬೇಕಾಗಿರುತ್ತದೆ.

      ಡಾಕ್ಟರ್, ನರ್ಸ್ ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಕೋವಿಡ್-19 ಚಿಕಿತ್ಸೆ ನೀಡಲು ತೊಂದರೆಯಾಗಿದೆಯೆಂಬ ಮಾಹಿತಿಯಿದ್ದು, ಕೇಂದ್ರ ಸರ್ಕಾರದ ತುರ್ತು ಸೇವಾ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ತಡೆಗಟ್ಟುವ ಕಾಯ್ದೆಯನ್ನು ಬಳಸಿಕೊಂಡು 65 ವರ್ಷ ಮೀರಿರದ ನಿವೃತ್ತ ಅರೆ ವೈದ್ಯಕೀಯ ಸಿಬ್ಬಂದಿ/ನರ್ಸ್ ಹಾಗೂ 70 ವರ್ಷ ಮೀರಿರದ ವೈದ್ಯರುಗಳ ಸೇವೆ ಪಡೆಯಬಹುದು. ಇದರೊಂದಿಗೆ ರಾಜ್ಯದ ಕಾಲೇಜುಗಳಲ್ಲಿ ಎಂಬಿಬಿಎಸ್ ಪೂರೈಸಿ ಮಾಸ್ಟರ್‍ಡಿಗ್ರಿ ಮಾಡುತ್ತಿರುವ ವೈದ್ಯರನ್ನು ಬಳಸಿಕೊಳ್ಳಬಹುದು (ಸೇನಾ ಮಾದರಿ ರೀತ್ಯಾ), ಗುಟ್ಕಾ ಹಾಕಿಕೊಂಡು ರಸ್ತೆಯಲ್ಲಿ ಉಗುಳುವ ಪ್ರಕರಣ ಹೆಚ್ಚಾಗುತ್ತಲಿದ್ದು, ಇದರ ಮಾರಾಟ ತಡೆಗಟ್ಟಲು ರಸ್ತೆಯಲ್ಲಿ ಉಗುಳುತ್ತಾ, ಸಾಂಕ್ರಾಮಿಕ ರೋಗ ಹರಡಲು ಕಾರಣರಾದ ಸಗಟು/ಚಿಲ್ಲರೆ ಮಾರಾಟಗಾರರು, ಇವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಬೇಕಾಗಿದೆ. ತುಮಕೂರು ಜಿಲ್ಲೆಗೆ ಸಂಬಂಧಪಟ್ಟಂತೆ ಮೇಲಿನ ವಿಷಯಗಳ ಜೊತೆಗೆ ಕೆಲವು ವಿಷಯಗಳನ್ನು ತಮ್ಮ ಮುಂದಿಡುತ್ತಿದ್ದೇನೆ.

      ತುಮಕೂರು ನಗರದಲ್ಲಿಯೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿದ್ದು, ಈ ಕಾಲೇಜುಗಳನ್ನು ಹಾಗೂ ಇದರ ವೈದ್ಯಕೀಯ ಸಿಬ್ಬಂದಿ/ ಅರೆ ವೈದ್ಯಕೀಯ ಸಿಬ್ಬಂದಿ ಸೇವೆಯನ್ನು ಕೇಂದ್ರ ಸರ್ಕಾರದ / ರಾಜ್ಯ ಸರ್ಕಾರದ ವಶಕ್ಕೆ ಪಡೆದು, ಇಲ್ಲಿ ಕೋವಿಡ್-19 ಜಿಲ್ಲಾ ಶುಶ್ರೂಷ ಆಸ್ಪತ್ರೆ ಮಾಡಲು ವಿನಂತಿಸುತ್ತೇನೆ. ಜಿಲ್ಲೆಯ ತಾಲ್ಲೂಕುಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ. ಆದುದರಿಂದ ದೊಡ್ಡ ಜಿಲ್ಲೆಗೆ ಹೆಚ್ಚಿನ ಆಂಬುಲೆನ್ಸ್‍ಗಳು ಅವಶ್ಯಕತೆ ಇದ್ದು, ತಕ್ಷಣ ಮಾಹಿತಿ ಪಡೆದು ಒದಗಿಸಲು ವಿನಂತಿ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಬಟ್ಟೆ ತೊಳೆಯುವ ಯಂತ್ರಗಳ ಕೊರತೆ ಇದ್ದು, ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕಾಗಿದೆ.

(Visited 14 times, 1 visits today)