ತುಮಕೂರು :

      ತ್ರಿವಿಧ ದಾಸೋಹ ಮೂರ್ತಿ, ನಡೆದಾಡುವ ದೇವರು ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕುಳಿತಿರುವ ಭಂಗಿಯ ಸುಮಾರು 3 ಅಡಿ ಎತ್ತರದ ಬೆಳ್ಳಿ ಮೂರ್ತಿಯನ್ನು ಅವರ ಗದ್ದುಗೆ ಮೇಲೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮುಂಜಾನೆ ಪ್ರತಿಷ್ಠಾಪಿಸಲಾಯಿತು.

       ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸೇರಿದಂತೆ ಹಲವು ಮಠಾದೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರದಲ್ಲಿರುವ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು.

       ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಹಾಕಿದ ಬಳಿಕ ನೇರವಾಗಿ ಗದ್ದುಗೆಯ ಪೀಠದ ಮೇಲೆ ಬೆಳ್ಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ಇಂದು ಮುಂಜಾನೆ ಶಿವಪೂಜೆ ಬಳಿಕ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಪೂಜೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. 

       ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗದ್ದುಗೆ ಪೀಠವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪೀಠದ ಕೆಳಭಾಗದಲ್ಲಿ ಶ್ರೀಗಳ ಪಾದುಕೆ, ಸ್ವಲ್ಪ ಮೇಲ್ಭಾಗದಲ್ಲಿ ಶಿವಲಿಂಗ ಈಗಾಗಲೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಲಿಂಗದ ಹಿಂಭಾಗದ ಮೇಲ್ಭಾಗದಲ್ಲಿ ಶ್ರೀಗಳ ಭಾವಚಿತ್ರ ಇರಿಸಲಾಗಿತ್ತು. ಈ ಭಾವಚಿತ್ರ ತೆರವುಗೊಳಿಸಿ ಅದರ ಜಾಗದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.

      ಗದ್ದುಗೆ ಪೀಠದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಸಾಕ್ಷಾತ್ ಶಿವಕುಮಾರ ಶ್ರೀಗಳೇ ಬಂದು ಕುಂತ ಅನುಭವ ಭಕ್ತಾದಿಗಳಲ್ಲಿ ಕಂಡಿದೆ.

      ಶ್ರೀಗಳು ಲಿಂಗೈಕ್ಯರಾಗಿ ಇಂದಿಗೆ 1 ವರ್ಷವಾಗಿದೆ. ಹಾಗಾಗಿ ಶ್ರೀಮಠದ ಭಕ್ತರಾದ ದೆಹಲಿ ಮೂಲದ ಉದ್ಯಮಿ ಮುಖೇಶ್ ಗರ್ಗ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಬೆಳ್ಳಿ ವಿಗ್ರಹ ಇದಾಗಿದೆ.

        ಮೊನ್ನೆ ನಡೆದ ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಂದೇ ಈ 50 ಕೆ.ಜಿ. ತೂಕದ ಬೆಳ್ಳಿ ಪುತ್ಥಳಿಯ ಪ್ರತಿಷ್ಠಾಪನೆ ಕಾರ್ಯ ನಡೆಯಬೇಕಿತ್ತು. ಆದರೆ ಈ ಪುತ್ಥಳಿ ಅಂದು ಸಮಯಕ್ಕೆ ಸರಿಯಾಗಿ ಶ್ರೀಮಠಕ್ಕೆ ಬಾರದೆ ರಾತ್ರಿ 11 ಗಂಟೆಯ ನಂತರ ಬಂದಿತ್ತು. ಹಾಗಾಗಿ ಇಂದಿಗೆ ಶ್ರೀಗಳು ಶಿವೈಕ್ಯರಾಗಿ 1 ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಬೆಳ್ಳಿ ಪುತ್ಥಳಿಯನ್ನು ಅವರ ಗದ್ದುಗೆ ಮೇಲೆ ಪ್ರತಿಷ್ಠಾಪಿಸಲಾಯಿತು.

(Visited 26 times, 1 visits today)