ತುಮಕೂರು :

      ಕೊರೋನಾ ವೈರಸ್ ಕೋವಿಡ್-19 ಹರಡದಂತೆ ತಡೆಗಟ್ಟಲು ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪರಿಶೀಲನೆ ನಡೆಸಿದರು.

       ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ವೈರಸ್ ಕೋವಿಡ್-19 ಹರಡದಂತೆ ತಡೆಯಲು ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರನ್ನು (ಪ್ರೈಮರಿ ಅಂಡ್ ಸೆಕೆಂಡರಿ ಕಾಂಟ್ಯಾಕ್ಟ್) ಸಂಪೂರ್ಣವಾಗಿ ಪತ್ತೆಹಚ್ಚಿ ಅವರನ್ನು ಕ್ವಾರಂಟೈನ್ ಮಾಡಿ, ಅವರ ಮೇಲೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

     ಕೋವಿಡ್‍ಗೆ ಸಂಬಂಧಿಸಿದವರನ್ನು ತಾಲ್ಲೂಕು ಆಸ್ಪತ್ರೆ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಇಟ್ಟು ನಿಗಾವಹಿಸುವ ಬದಲು ಎಲ್ಲರನ್ನು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿ, ಅಲ್ಲಿಯೇ ಚಿಕಿತ್ಸೆ/ ನಿಗಾವಹಿಸಲು ಸುಲಭವಾಗುತ್ತದೆ. ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ನಿರ್ವಹಣೆಗೆ ಅನುಕೂಲವಾಗಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಶಂಕಿತರಿಗೆ ನೆಗೆಟಿವ್ ವರದಿ ಬಂದಿದ್ದರೂ ಕಡ್ಡಾಯವಾಗಿ 28 ದಿನಗಳ ಕಾಲ ಅವರನ್ನು ನಿಗಾವಣೆಯಲ್ಲಿಡಬೇಕು. ಜಿಲ್ಲೆಯಲ್ಲಿ ಕೊರೋನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

      ಕೊಳಚೆ ಪ್ರದೇಶದ ನಿವಾಸಿಗಳು ಸೇರಿದಂತೆ ಬಡವರು ಇರುವ ಕಡೆ 1/2 ಲೀ. ಹಾಲನ್ನು ವಿತರಣೆ ಮಾಡಿ. ಅಲ್ಲದೆ ಅಗತ್ಯವಿದ್ದರೆ 200 ಎಂ.ಎಲ್. ಹಾಲಿನ ಪಾಕೇಟ್‍ಗಳನ್ನು ತಯಾರಿಸಿ ವಿತರಣೆಗೆ ಕ್ರಮವಿಡುವಂತೆ ಕೆಎಂಎಫ್ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲೆಯಲ್ಲಿರುವ ರೈಸ್‍ಮಿಲ್‍ಗಳನ್ನು ಉತ್ಪಾದನೆ ಮಾಡಲು ಅವಕಾಶ ನೀಡಿದ್ದು, ಅವುಗಳಿಗೆ ಅಗತ್ಯವಿರುವ ಕಚ್ಚಾವಸ್ತು ತರಲು, ಕಾರ್ಮಿಕರ ಓಡಾಟಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದ ಸಚಿವರು, ಕೋಳಿ, ಮಟನ್ ಮಾರಾಟ ಮಾಡಲು, ಅನುಕೂಲ ಕಲ್ಪಿಸಿ. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿ ಹಾಗೂ ಅಂಗಡಿಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಲಿ. ಅಲ್ಲದೆ ಮನೆ ಮನೆ ಡೆಲಿವರಿ ಮಾಡುವ ವ್ಯವಸ್ಥೆ ಮಾಡಿದರೆ ಸೂಕ್ತ ಎಂದರು.

      ತುಮಕೂರು ಜಿಲ್ಲೆಯಲ್ಲಿ ಬೆಳೆಯುವ ತರಕಾರಿ/ ಹಣ್ಣುಗಳನ್ನು ರೈತರಿಂದ ಖರೀದಿಸಿ, ತುಮಕೂರು ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಸ್ವಯಂ ಸೇವಕರನ್ನು ಬಳಸಿಕೊಂಡು ವಾಹನಗಳ ಮೂಲಕ ಮಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

     ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು. ಜಿಲ್ಲೆಯಲ್ಲಿ ಅಗತ್ಯ ಔಷಧಿ ದಾಸ್ತಾನು, ಕೋವಿಡ್ ನಿಯಂತ್ರಣದ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಹಾಗೂ ಡಿಹೆಚ್‍ಓ ಡಾ: ಚಂದ್ರಿಕಾ ಅವರಿಂದ ಮಾಹಿತಿ ಪಡೆದರು.

       ಸಭೆಯಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾ ಪಂಚಾಯತ್ ಸಿಇಓ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

(Visited 9 times, 1 visits today)