ಸಿದ್ಧಗಂಗಾ ಶ್ರೀ ಲಿಂಗೈಕ್ಯ : ಮಠಕ್ಕೆ ಬರುವ ಮಾರ್ಗದಲ್ಲಿ ಬದಲಾವಣೆ!!

ತುಮಕೂರು:

      ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ.

      ಲಿಂಗೈಕ್ಯರಾದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿ ಅವರ ಪಾರ್ಥಿವ ಶರೀರವನ್ನು ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಗೋಸಲ ಸಿದ್ದೇಶ್ವರ ವೇದಿಕೆಗೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

      ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುವಾಗುವಂತೆ ಶಾಲಾ ಕಾಲೇಜುಗಳು ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

       ಮಠಕ್ಕೆ ಆಗಮಿಸಲು ರಾಷ್ಟ್ರೀಯ ಹೆದ್ದಾರಿ-4 ಒಂದೇ ಸಂಚಾರಿ ಮಾರ್ಗವಿದ್ದು, ಸಂಚಾರವನ್ನು ಸುಗಮವಾಗಿಸಲು ರಸ್ತೆ ಮಾರ್ಗವನ್ನು ಬದಲಾಯಿಸಲಾಗಿದೆ. ಪೂನಾ, ಶಿರಾ ಮಾರ್ಗದ ಕಡೆ ಹೋಗುವ ವಾಹನಗಳನ್ನು ಡಾಬಸ್‍ಪೇಟೆ ಜಂಕ್ಷನ್‍ನಿಂದ ಹಾಗೂ ಶಿವಮೊಗ್ಗ ಕಡೆ ಹೋಗುವ ವಾಹನಗಳಿಗೆ ನೆಲಮಂಗಲ ಜಂಕ್ಷನ್‍ನಿಂದ ಡೈವರ್ಟ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ-4ನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು, ವಿವಿಧ ಗಣ್ಯ ಮಹೋದಯರು ಸಂಚರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಖಾಸಗಿ, ಇತರೆ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ-4ನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಐಜಿ ದಯಾನಂದ್ ಮನವಿ ಮಾಡಿದ್ದಾರೆ.

      ಸಾರ್ವಜನಿಕ ದರ್ಶನ ಮಾಡುವ ಭಕ್ತರಿಗೆ ರಾಗಿ ಹೊಲ ಸೇರಿದಂತೆ 3 ಕಡೆ ಊಟದ ವ್ಯವಸ್ಥೆ, ಕುಡಿಯುವ ನೀರು ಹಾಗೂ ಮೊಬೈಲ್ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಉತ್ತರ ಕರ್ನಾಟಕದಿಂದ ಬರುವ ಭಕ್ತರಿಗೆ ಸರ್ಕಾರಿ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರ ಅನುಕೂಲಕ್ಕಾಗಿ ಸರ್ಕಾರಿ ಬಸ್‍ನಿಲ್ದಾಣ ರೈಲು ನಿಲ್ದಾಣದಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 3500 ಪೊಲೀಸ್ ಸಿಬ್ಬಂದಿ, 10 ಪೊಲೀಸ್ ವರಿಷ್ಠಾಧಿಕಾರಿಗಳು, 30 ಕೆಎಸ್‍ಆರ್‍ಪಿ ತುಕಡಿ, ವಿವಿಧ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಶ್ರೀ ಸಿದ್ಧಗಂಗಾ ಮಠಕ್ಕೆ ಬರುವ ಮಾರ್ಗಗಳು:-

      ಬೆಂಗಳೂರು ಕಡೆಯಿಂದ ಸಿದ್ದಗಂಗಾ ಮಠಕ್ಕೆ ಬರುವ ಸಾರ್ವಜನಿಕರು ತುಮಕೂರು-ಗುಬ್ಬಿ ರಿಂಗ್ ರಸ್ತೆ ಮೂಲಕ ಬಂದು ರೋಟಿಗರ್ ಬಳಿ ಬಲಕ್ಕೆ ತಿರುಗಿ ಬಟವಾಡಿ 80 ಅಡಿ ರಸ್ತೆ ಮೂಲಕ ಮಿರ್ಜಿ ಪೆಟ್ರೋಲ್ ಬಂಕ್ ಬಳಿ ಬಂದು ಎಡಗಡೆ ತಿರುಗಿ, ಬಟವಾಡಿ ವೈ ಜಂಕ್ಷನ್ ಮೂಲಕ ಬಟವಾಡಿ ಅಂಡರ್ ಬ್ರಿಡ್ಜ್ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ, ಇಸ್ರೋ ಆವರಣದಲ್ಲಿ (ಹೆಚ್‍ಎಂಟಿ) ವಾಹನಗಳನ್ನು ನಿಲುಗಡೆ ಮಾಡಿ, ಅಲ್ಲಿಂದ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ವಾಹನಗಳ ಮುಖಾಂತರ ಮಠಕ್ಕೆ ತೆರಳಬಹುದು.

      ಶಿವಮೊಗ್ಗ ಕಡೆಯಿಂದ ಮಠಕ್ಕೆ ಬರುವ ಭಕ್ತಾದಿಗಳು ಬಿ.ಹೆಚ್.ರಸ್ತೆ ಮುಖಾಂತರ ಸರ್ಕಾರಿ ಜ್ಯೂನಿಯರ್ ಕಾಲೇಜ್ ಮೈದಾನಕ್ಕೆ ಬಂದು, ಅಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ಮುಖಾಂತರ ಮಠಕ್ಕೆ ತೆರಳಬಹುದು.

      ಶಿರಾ ಕಡೆಯಿಂದ ಸಿದ್ದಗಂಗಾ ಮಠಕ್ಕೆ ಬರುವ ಭಕ್ತಾಧಿಗಳ ಭಾರಿ ವಾಹನಗಳು (ಹೆಚ್.ಎಂ.ವಿ.)ರಂಗಾಪುರ ಬ್ರಿಡ್ಜ್ ಬಳಿ ಸರ್ವೀಸ್ ರಸ್ತೆ ಮುಖಾಂತರ ಶ್ರೀದೇವಿ ಕಾಲೇಜ್ ರಸ್ತೆ ಮೂಲಕ ಅಶೋಕ ರಸ್ತೆ, ಬಿ.ಹೆಚ್.ರಸ್ತೆ ಮುಖಾಂತರ ಸರ್ಕಾರಿ ಜ್ಯೂನಿಯರ್ ಕಾಲೇಜ್ ಮೈದಾನಕ್ಕೆ ಬಂದು, ಅಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ಮುಖಾಂತರ ಮಠಕ್ಕೆ ತೆರಳಬಹುದು. ಲಘು ವಾಹನಗಳು ಅಕ್ಕತಂಗಿ ಕೆರೆ ಬ್ರಿಡ್ಜ್ ಬಳಿ ಸರ್ವೀಸ ರಸ್ತೆ ಮುಖಾಂತರ ದೇವರಾಯಪಟ್ಟಣದ ಮೂಲಕ ಬಸವಣ್ಣ ದೇವಸ್ಥಾನದ ಹಿಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಅಲ್ಲಿಂದ ಮಠಕ್ಕೆ ತೆರಳುವುದು.

      ಕುಣಿಗಲ್ ಕಡೆಯಿಂದ ಮಠಕ್ಕೆ ಬರುವ ಭಕ್ತಾದಿಗಳು ತುಮಕೂರು ನಗರಕ್ಕೆ ಕುಣಿಗಲ್ ಸರ್ಕಲ್ ಮೂಲಕ ಪ್ರವೇಶಿಸಿ ಲಕ್ಕಪ್ಪ ಸರ್ಕಲ್, ಬಿ.ಹೆಚ್.ರಸ್ತೆ ಮುಖಾಂತರ ಸರ್ಕಾರಿ ಜ್ಯೂನಿಯರ್ ಕಾಲೇಜ್ ಮೈದಾನಕ್ಕೆ ಬಂದು ಅಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ, ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ಮುಖಾಂತರ ಮಠಕ್ಕೆ ತೆರಳಬಹುದು.

      ತುಮಕೂರು ನಗರದಿಂದ ಸಿದ್ದಗಂಗಾ ಮಠದ ಕಡೆ ಬರುವ ಭಕ್ತಾಧಿಗಳು ಬಟವಾಡಿ ಅಂಡರ್ ಬ್ರಿಡ್ಜ್ ಮುಖಾಂತರ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ, ಎಪಿಎಂಸಿ ಯಾರ್ಡ್‍ನ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಅಲ್ಲಿಂದ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್(ಬಸ್) ವಾಹನಗಳ ಮುಖಾಂತರ ಮಠಕ್ಕೆ ತೆರಳಬಹುದು.

 

(Visited 31 times, 1 visits today)

Related posts