ಫೆ.3ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

 ತುಮಕೂರು:

      ಜಿಲ್ಲಾದ್ಯಂತ ಫೆಬ್ರುವರಿ 3 ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ನಿಗಧಿತ ಗುರಿಯನ್ನು ಸಾಧಿಸಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರತೀ ಬಾರಿ 2 ಸುತ್ತಿನಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಈ ಬಾರಿ ಒಂದೇ ಸುತ್ತಿನಲ್ಲಿ ಹಮ್ಮಿಕೊಳ್ಳುತ್ತಿರುವುದರಿಂದ 0-5 ವರ್ಷದೊಳಗಿನ ಯಾವೊಂದು ಮಗುವೂ ಲಸಿಕೆಯಿಂದ ತಪ್ಪಿಹೋಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕೆಂದು ನಿರ್ದೇಶನ ನೀಡಿದರು.

      ಮಸೀದಿಗಳು ಹಾಗೂ ಖಾಸಗಿ ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳ ಪ್ರಾರ್ಥನಾ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕಲ್ಲದೆ ಕಾರ್ಯಕ್ರಮದ ಹಿಂದಿನ ದಿನ ಶಾಲಾ ಮಕ್ಕಳಿಂದ ವಿಶೇಷವಾಗಿ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸುವುದರ ಜೊತೆಗೆ ಭಾನುವಾರದಂದು ಶಾಲೆಗಳನ್ನು ತೆರೆದಿಡಬೇಕು. ತಮ್ಮ ಸುತ್ತಮುತ್ತಲಿನ 5 ವರ್ಷದೊಳಗಿರುವ ಮಕ್ಕಳನ್ನು ಪಲ್ಸ್ ಪೋಲಿಯೋ ಬೂತ್‍ಗಳಿಗೆ ಕರೆತರುವಂತೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

      ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಹಾಗೂ ಲಸಿಕಾ ದಿನದಂದು ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ಅನುವು ಮಾಡಿಕೊಡಬೇಕೆಂದು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸುವಂತೆ ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

      ರೈಲ್ವೆ ಪ್ಲಾಟ್‍ಫಾರಂ, ಬಸ್ ನಿಲ್ದಾಣ/ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಬೇಕು. ಖಾಸಗಿ ನರ್ಸಿಂಗ್ ಹೋಂ ಮಾಲೀಕರು, ಮಕ್ಕಳ ತಜ್ಞರು ತಮ್ಮ ಸಂಪರ್ಕಕ್ಕೆ ಬರುವ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.

      ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ಸಿಗೆ ರೋಟರಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಕಾರ ಅಗತ್ಯ. ಪ್ರತೀ ಬಾರಿಯಂತೆ ಸಂಸ್ಥೆಗಳು ಬೂತ್‍ಗಳಲ್ಲಿ ಲಸಿಕಾದಾರರಿಗೆ ಊಟದ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಪದಾಧಿಕಾರಿಗಳಿಗೆ ಮನವಿ ಮಾಡಿದರು.

      ಸಮುದಾಯದ ಮುಖ್ಯಸ್ಥರುಗಳನ್ನು ಭೇಟಿ ಮಾಡಿ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವುದಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಪೋಲಿಯೋ ಲಸಿಕೆ ಬಗ್ಗೆ ಬ್ಯಾನರ್, ಜಿಂಗಲ್ಸ್ ಮೂಲಕ ಜಾಗೃತಿ ಮೂಡಿಸಬೇಕು.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಜನವರಿ 28 ರಿಂದ ಫೆಬ್ರವರಿ 6ರವರೆಗೆ ನಿರಂತರ ವಿದ್ಯುಚ್ಛಕ್ತಿಯನ್ನು ಪೂರೈಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಪಾದ್ರೇಶಿಕ ಸಾರಿಗೆ ಅಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ತಮ್ಮ ಇಲಾಖೆಯ ವಾಹನಗಳನ್ನು ನಿಗಧಿತ ಸಮಯಕ್ಕೆ ನಿಯೋಜಿಸುವ ಮೂಲಕ ಸಹಕಾರ ನೀಡಬೇಕು ಎಂದು ತಾಕೀತು ಮಾಡಿದರು.

      ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವ್‍ರಾಜ್ ಸಭೆಗೆ ಮಾಹಿತಿ ನೀಡುತ್ತಾ ಜಿಲ್ಲೆಯು ಒಟ್ಟು 2819870 ಜನಸಂಖ್ಯೆ ಹೊಂದಿದ್ದು, 0-5 ವರ್ಷದೊಳಗಿನ 213679 ಮಕ್ಕಳಿದ್ದಾರೆ. ಲಸಿಕೆ ನೀಡಲು 1202 ಕೇಂದ್ರಗಳನ್ನು ತೆರೆಯಲಾಗುವುದು. ಇದಕ್ಕಾಗಿ 249 ಮೇಲ್ವಿಚಾರಕರು ಹಾಗೂ 4936 ಲಸಿಕೆ ಹಾಕುವವರನ್ನು ನಿಯೋಜನೆ ಮಾಡಲಾಗಿದೆ ಎಂದರು.

      ಈ ಸಂದರ್ಭದಲ್ಲಿ ಡಿಹೆಚ್‍ಓ ಡಾ|| ಬಿ.ಆರ್. ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ, ಮಲೇರಿಯಾ ಅಧಿಕಾರಿ ಡಾ|| ಪುರುಷೋತ್ತಮ್, ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 15 times, 1 visits today)

Related posts