ತುಮಕೂರು:

      ರಾಜ್ಯದ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು 6 ತಿಂಗಳ ಕಾಲ ಮುಂದೂಡಬೇಕು, ಚುನಾವಣೆ ಮುಂದೂಡುವುದು ಅನಿವಾರ್ಯವಾದಲ್ಲಿ ಆಡಳಿತ ಸಮಿತಿ ಸದಸ್ಯರು ಅಥವಾ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬದಲು ಈಗಿರುವ ಚುನಾಯಿತಿ ಸದಸ್ಯರ ಅವಧಿಯನ್ನು 6 ತಿಂಗಳವರೆಗೆ ವಿಸ್ತರಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮಂಗಳವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

      ಈ ಸಂದರ್ಭದಲ್ಲಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಷರೀಫ್, ರಾಜ್ಯದ ಪಂಚಾಯತ್‍ರಾಜ್ ವ್ಯವಸ್ಥೆಗೆ ತನ್ನದೇ ಆದ ಇತಿಹಾಸವಿದ್ದು, ಸಂವಿಧಾನದ 73ನೇ ತಿದ್ದುಪಡಿ ಮೂಲಕ ಆಡಳಿತ ವಿಕೇಂದ್ರೀಕರಣದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇಡೀ ದೇಶಕ್ಕೇ ಮಾದರಿಯನ್ನಾಗಿ ತೋರಿಸಿಕೊಟ್ಟ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ ಎಂದರು.

      ಗ್ರಾಮ ಪಂಚಾಯಿತಿಗಳ ಅವಧಿ 5 ವರ್ಷದ ಅವಧಿ ಪ್ರಸ್ತುತ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಕೆಲವೊಂದು ಪಂಚಾಯಿತಿಗಳ ಅವಧಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಗಿಯಲಿದೆ. ಒಟ್ಟಾರೆ ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯದ 6,041 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಕೋವಿಡ್-19 ಹಿನ್ನಲೆಯಲ್ಲಿ ಕನಿಷ್ಟ 6 ತಿಂಗಳು ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವುದು ಅನಿವಾರ್ಯವಾಗಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ. ಆದರೆ ಇದು ಸೂಕ್ತವಲ್ಲ, ಅಲ್ಲದೆ ರಾಜ್ಯ ಸರ್ಕಾರದ ಈ ಧೋರಣೆ ಸಂವಿಧಾನ ಮತ್ತು ಪಂಚಾಯತ್‍ರಾಜ್ ಕಾಯ್ದೆಯ ಆಶಯಗಳಿಗೆ ತದ್ವಿರುದ್ಧವಾಗಿದೆ. ಸರ್ಕಾರದ ಈ ನಡೆಯನ್ನು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ ಎಂದು ಹೇಳಿದರು.

      ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಪಂ ಚುನಾವಣೆ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿರುವ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು,  ಗ್ರಾಪಂಗಳಿಗೆ ಯಾವುದೇ ಕಾರಣಕ್ಕೂ ಆಡಳಿತಾಧಿಕಾರಿಗಳನ್ನು ನೇಮಿಸಬಾರದು, ಇದರ ಬದಲು ಹಾಲಿ ಇರುವ ಸದಸ್ಯರನ್ನೇ 6 ತಿಂಗಳ ಕಾಲ ಮುಂದುವರೆಸಬೇಕೆಂದು ತಾಜುದ್ದೀನ್ ಷರೀಫ್ ಒತ್ತಾಯಿಸಿದರು.

      ಈಗಾಗಲೇ ಕೋವಿಡ್-19 ನಿರ್ವಹಣೆ ದೃಷ್ಠಿಯಿಂದ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಹೊಣೆಗಾರಿಕೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಚುನಾಯಿತ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸಿದರೆ ಅಥವಾ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಂತೆ ಮಾಡಿ ಅದರ ಬದಲಿಗೆ ಆಡಳಿತ ಸಮಿತಿ ಇಲ್ಲವೇ ಆಡಳಿತಾಧಿಕಾರಿಗಳ ವ್ಯವಸ್ಥೆ ಜಾರಿಗೆ ತಂದರೆ ಕೋವಿಡ್-19 ನಿರ್ವಹಣೆ ಸಮರ್ಪಕ ವ್ಯವಸ್ಥೆ ಇಲ್ಲದೆ ಗ್ರಾಮೀಣ ಪ್ರದೇಶಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗುವ ಸಮಸ್ಯೆ, ಅನಾನುಕೂಲತೆಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

      ಕೋವಿಡ್-19 ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ಧೇಶದಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯದರ್ಶಿ ಅಫ್ಜಲ್ ಖಾನ್, ಉಪಾಧ್ಯಕ್ಷರಾದ ಆಸಿಫುಲ್ಲಾ ಭಾಗವಹಿಸಿದ್ದರು.

(Visited 15 times, 1 visits today)