ತುಮಕೂರು


ರಾಜಧಾನಿಗೆ ಅತಿ ಹತ್ತಿರದಲ್ಲಿರುವ ತುಮಕೂರು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯಲ್ಲಿ ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು,200 ಯುನಿಟ್ ವರೆಗೆ ಉಚಿತ ವಿದ್ಯುತ್,ಗುಣಮಟ್ಟದ ಆರೋಗ್ಯ ಸೇವೆ ಇನ್ನಿತರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವುದಾಗಿ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೆಡಿಎಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ರೈತರೊಂದಿಗೆ, ಮಧ್ಯಮವರ್ಗ ಹಾಗು ಬಡಜನರಿಗಾಗಿ,ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ವಿದ್ಯುತ್, ಶಿಕ್ಷಣ,ಆರೋಗ್ಯ ಸೇವಗಳನ್ನು ಒಳಗೊಂಡ ಹಲವಾರು ಜನಮುಖಿ ಯೋಜನೆಗಳನ್ನು ಜಾರಿಗೆ ತರಲಿದೆ.ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಗೊಂಡ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿವೆ.ಅದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಅಭಿವೃದ್ದಿ ಯೋಜನೆಗಳು ಜಾರಿಗೆ ಬರಲಿವೆ ಎಂದರು.
ಜನರಿಗೆ ದಿನದ 14 ಗಂಟೆ,ವಾರದ ಏಳು ದಿನವೂ ಉಚಿತವಾಗಿ ಶುದ್ದ ಕುಡಿಯುವ ನೀರು ಒದಗಿಸುವುದು, ಅದೇ ರೀತಿಯಲ್ಲಿ ನಗರದ ಎಲ್ಲಾ ವಾರ್ಡುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತರೆದು ಗುಣಮಟ್ಟದ ಸೇವೆ ಒದಗಿಸುವುದು,ಅಲ್ಲದೆ ವಿದ್ಯಾವಂತ ಯುವ ಜನತೆಗೆ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಹಾಗು ಉದ್ಯೋಗಾಧಾರಿತ ತರಬೇತಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅಗತ್ಯ ಯೋಜನೆಗಳು,ಹಾಗು ವಿದ್ಯುತ್ ಖಾಸಗೀಕರಣ ತಡೆಗಟ್ಟುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಎನ್.ಗೋವಿಂದರಾಜು ನುಡಿದರು.
ವಿದ್ಯುತ್ ಖಾಸಗೀಕರಣ ಜಾರಿಗೆ ಬಂದರೆ ಇಡೀ ದೇಶದ ರೈತರು ವಿದ್ಯುತ್ ಬಿಲ್ ಕಟ್ಟಲಾಗದೆ ಬೀದಿಗೆ ಬೀಳಲಿದ್ದಾರೆ. ಹಾಗಾಗಿ ವಿದ್ಯುತ್ ಖಾಸಗೀಕರಣ ವನ್ನ ಜೆಡಿಎಸ್ ವಿರೋಧಿಸುತ್ತದೆ.ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿದ್ಯುತ್ ಖಾಸಗೀಕರಣ ಕ್ಕೆ ತುದಿಗಾಲಲ್ಲಿ ನಿಂತಿವೆ.ರೈತರು,ಬಡವರ ಬಗ್ಗೆ ಒಂದಿಷ್ಟು ಕಾಳಜಿಯನ್ನು ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ರಾಜ್ಯದಲ್ಲಿ 20 ಲಕ್ಷಕ್ಕು ಅಧಿಕ ನಿರುದ್ಯೋಗಿಗಳಿದ್ದಾರೆ. ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 20 ಸಾವಿರ ವಿದ್ಯಾವಂತ ಪದವಿಧರ ನಿರುದ್ಯೋಗಿಗಳಿದ್ದಾರೆ.ಅವರಿಗೆ ಉದ್ಯೋಗ ನೀಡುವಂತಹ ಯಾವುದೇ ಯೋಜನೆಗಳನ್ನು ಸರಕಾರ ಜಾರಿಗೆ ತರಲಿಲ್ಲ.ಬದಲಿಗೆ ತುಮಕೂರಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಸಹ ಬರದಂತೆ ನೋಡಿಕೊಂಡರು. ಹಾಲಿ ಮತ್ತ ಮಾಜಿ ಶಾಸಕರ ಶಿಕ್ಷಣ ಲಾಭಿಯಿಂದ ಬಡವರ ಮಕ್ಕಳ ಮೆಡಿಕಲ್ ಶಿಕ್ಷಣಕ್ಕೆ ಮಣ್ಣು ಬಿತ್ತು ಎಂದು ಗೋವಿಂದರಾಜು ದೂರಿದರು.
ರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರವಿದ್ದರೂ ಬಿಜೆಪಿ ಪಕ್ಷ ಹಿಂದಿಯನ್ನು ಪ್ರಾದೇಶಿಕ ಭಾಷೆಗಳ ಮೇಲೆ ಹೇರುತ್ತಿದೆ. ಇತ್ತೀಚಿಗೆ ಸಣ್ಣ, ಸಣ್ಣ ಹುದ್ದೆಗಳ ಪ್ರವೇಶ ಪರೀಕ್ಷೆಯಲ್ಲಿಯೂ ಕನ್ನಡವನ್ನು ಕಡೆಗಣಿಸಿ,ಹಿಂದಿ ಅಥವಾ ಇಂಗ್ಲೀಷನಲ್ಲಿ ಮಾತ್ರ ಉತ್ತರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ, ಪ್ರಾದೇಶಿಕ ಭಾಷೆಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಇದರ ವಿರುದ್ದ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ಕುಮಾರಸ್ವಾಮಿ ಅವರು ದ್ವನಿ ಎತ್ತಿದ್ದು,ಇದನ್ನು ಬೆಂಬಲಿಸಿ, ನವೆಂಬರ್ 01ರಂದು ಎಲ್ಲಾ ಜೆಡಿಎಸ್ ಕಾರ್ಯಕರ್ತರು ತಮ್ಮ ಮನೆಯ ಮೇಲೆ ಕನ್ನಡ ಭಾವುಟದ ಜೊತೆಗೆ,ಜೆಡಿಎಸ್ ಬಾವುಟ ಹಾರಾಡಿಸಬೇಕು. ಹಾಗೆಯೇ ತಮ್ಮ ಅಕ್ಕಪಕ್ಕದ ಮನೆಯವರ ಮನವೊಲಿಸಿ,ಕನ್ನಡ ಭಾವುಟ ಹಾರಿಸುವಂತೆ ಪ್ರೇರೆಪಿಸಬೇಕೆಂಬುದು ಪಕ್ಷದ ಉದ್ದೇಶ ವಾಗಿದೆ ಎಂದು ಎನ್.ಗೋವಿಂದರಾಜು ನುಡಿದರು.
ತುಮಕೂರು ಜಿಲ್ಲೆಗೆ ಪಂಚರತ್ನ ರಥಯಾತ್ರೆ ನವಂಬರ್ 14 ರಂದು ಜಿಲ್ಲೆಗೆ ಆಗಮಿಸಲಿದ್ದು ಆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ,ಸಿ.ಎಂ ಇಬ್ರಾಹಿಂ ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅವರೊಂದಿಗೆ ಜಿಲ್ಲೆಯ ಎಲ್ಲಾ ನಾಯಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎನ್.ಗೋವಿಂದರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಮಧು,ಮುಖಂಡರಾದ ಪ್ರೆಸ್ ರಾಜಣ್ಣ,ಸೋಲಾರ್ ಕೃಷ್ಣಮೂರ್ತಿ, ತಾಹೀರಾಭಾನು, ಗಂಗಹನುಮಯ್ಯ, ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್, ರಂಗನಾಥ್
ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)