ಕೊರಟಗೆರೆ


ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಅಂತ್ಯಂತ ಸಡಗರ, ಸಂಭ್ರಮದಿಂದ ಹಮ್ಮಿಕೊಳ್ಳಲಾಗಿತ್ತು, ಕೊರಟಗೆರೆಯ ಜನಪ್ರಿಯ ತಹಶೀಲ್ದಾರ್ ನಾಹೀದ ಜಮ್ ಜಮ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದರು.
ಇನ್ನೂ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಿಂದ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಕನ್ನಡ ಬಾವುಟ ಹಿಡಿದು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕಾಲೇಜು ಮೈದಾನದವರೆಗೂ ಮೆರವಣಿಗೆ ನಡೆಸಲಾಯಿತು.
ಶಾಲಾ ವಿದ್ಯಾರ್ಥಿಗಳಿಂದ ಕನ್ನಡದ ಕಂಪನ್ನು ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಕಣ್ಮನ ಸೆಳೆದವು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದ ಜಮ್ ಜಮ್ ಮಾತನಾಡಿ, ಕನ್ನಡಿಗರ ಏಕೀಕರಣಕ್ಕಾಗಿ ನಡೆಸಿದ ಸಮ್ಮೇಳನಗಳಿಂದ ಕರ್ನಾಟಕ ರಾಜ್ಯ ರಚನೆಗೆ ಪುಷ್ಠಿ ನೀಡಿದವು, ಮಹಾತ್ಮ ಗಾಂಧೀಜಿ ಅವರು ಭಾಗಿಯಾಗಿದ್ದ ಅಧಿವೇಶನದಲ್ಲಿ ಬಲವಾಗಿ ಮೊಳಗಿದ್ದು ಕರ್ನಾಟಕ ಏಕೀಕರಣ ಬೇಡಿಕೆ. ಸ್ವಾತಂತ್ರದ ನಂತರ ಭಾರತ್ ಸಮಿತಿ ರಾಜ್ಯ ವಿಂಗಡಣಾ ಆಯೋಜನೆ ಶಿಫಾರಸ್ಸಿನಂತೆ ಮೈಸೂರು ರಾಜ್ಯ ಉದಯವಾಗಿ, ದೇವರಾಜು ಅರಸು ಮುಖ್ಯಮಂತ್ರಿಯಾದ ಕಾಲದಲ್ಲಿ ನ.1,1973ರಲ್ಲಿ ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು. ನಮ್ಮ ರಾಜ್ಯ ಹಲವು ವೈಶಿಷ್ಟ್ಯಗಳನ್ನು ಒಳಗೊಂಡು ಹೆಮ್ಮೆಯ ರಾಜ್ಯವಾಗಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕಾವ್ಯ ರಮೇಶ್ ಮಾತನಾಡಿ, ನಮ್ಮ ದೇಶಕ್ಕೆ ಸ್ವತಂತ್ರ ಸಿಗಬೇಕಾದರೆ ನಾಯಕರು ಎಷ್ಟು ಕಷ್ಟಪಟ್ಟರೋ ಹಾಗೆಯೇ ನಮ್ಮ ನಾಡಿಗೆ ಕರ್ನಾಟಕವೆಂದು ನಾಮಕರಣ ಮಾಡಲು ಸಹಸ್ರಾರು ಕನ್ನಡಿಗರ ಶ್ರಮ ಇದೆ. ಮೈಸೂರು ರಾಜ್ಯ ಹಿಂದೆ ಇದ್ದಂತಹ ಹೆಸರನ್ನು ಆಗಿನ ಮೈಸೂರು ರಾಜ್ಯದ ರಾಜ ಒಡೆಯರ್ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಕನ್ನಡಿಗರಿಗೆ ಹೆಮ್ಮೆ ರಾಜ್ಯವನ್ನಾಗಿ ನೀಡಿದರು. ಅಂದಿನಿಂದ ನಮ್ಮ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವವೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ದೇಶದ ನಾನಾ ಭಾಗಗಳಲ್ಲಿ ಎಲ್ಲಿಯೇ ಕನ್ನಡಿಗರಿದ್ದರೂ ಅಲ್ಲಿ ಭುವನೇಶ್ವರಿ ಮಾತೆಯ ಭಾವಚಿತ್ರವನ್ನಿಟ್ಟು ಕನ್ನಡ ಬಾವುಟವನ್ನು ಹಾರಿಸುತ್ತಾರೆ. ಇದೇ ಅಲ್ಲವೇ ನಮ್ಮ ನಾಡಿನ ಸಂಸ್ಕೃತಿಯನ್ನು ಸಾರುವ ಸಂದೇಶ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಿಗೂ, ಪತ್ರಕರ್ತರಿಗೂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ತಾಲ್ಲೂಕು ಆಡಳಿತದ ಅಧಿಕಾರಿಗಳು, ವಿವಿಧ ಕ್ಷೇತ್ರದ ಹೋರಾಟಗಾರರು, ವಿವಿಧ ಕ್ಷೇತ್ರದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(Visited 1 times, 1 visits today)