ತುಮಕೂರು


ನಗರದ ಸಿರಾ ಗೇಟ್ ಸಮೀಪವಿರುವ 2ನೇ ವಾರ್ಡ್ ವ್ಯಾಪ್ತಿಯ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಗೋಪುರ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು.
ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ತುಮಕೂರು ನಗರದ ಇತಿಹಾಸ ಪ್ರಸಿದ್ದ 37 ದೇವಾಲಯಗಳಿಗೆ ಬಿಜೆಪಿ ಸರ್ಕಾರ 2 ಕೋಟಿ ರೂ.ಗಳನ್ನು ನೀಡಿದೆ. ಈ ಹಣದಲ್ಲಿ 2ನೇ ವಾರ್ಡ್‍ನ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ಗೋಪುರ ನಿರ್ಮಾಣಕ್ಕೆ 6 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರ ಭಾರತ ದೇಶದ ಧಾರ್ಮಿಕ ಭಾವನೆಗೆ ಹೆಚ್ಚಿನ ಒತ್ತು ನೀಡಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣವಾಗುತ್ತಿದೆ. ಅದೇ ರೀತಿಯ ತುಮಕೂರು ನಗರದಲ್ಲಿ ದೇವಾಲಯಗಳ ಅಭಿವೃದ್ಧಿಗೆ ನಮ್ಮ ರಾಜ್ಯ ಸರ್ಕಾರವೂ ಅನುದಾನ ನೀಡಿದೆ ಎಂದು ಹೇಳಿದರು.
ಈ ಭಾಗದ ಜನರ ಧಾರ್ಮಿಕ ಭಾವನೆಗಳಿಗೆ ಪೂರಕವಾದ ಅತ್ಯುತ್ತಮ ವಾತಾವರಣ ನಿರ್ಮಿಸುವ ಕೆಲಸವನ್ನು ದೇವಾಲಯ ಸಮಿತಿ ಮಾಡಬೇಕು. ಜತೆಗೆ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಜನಸಾಮಾನ್ಯರು ಸಹ ಕೈಜೋಡಿಸಬೇಕು ಎಂದರು.
ಪಾಲಿಕೆ ಸದಸ್ಯ ಮಂಜುನಾಥ್ ಮಾತನಾಡಿ, ನಮ್ಮ 2ನೇ ವಾರ್ಡ್‍ನಲ್ಲಿ 3-4 ದೇವಾಲಯಗಳಿಗೆ ಶಾಸಕರು ಸರ್ಕಾರದಿಂದ ಅನುದಾನ ಕೊಡಿಸಿದ್ದಾರೆ. ಹಾಗೆಯೇ ಅಂತರಸನಹಳ್ಳಿ ರಾಮೇಶ್ವರ ದೇವಾಲಯಕ್ಕೆ ಅನುದಾನ ನೀಡಿದ್ದಾರೆ. ಇದರೊಂದಿಗೆ ವಾರ್ಡ್‍ನಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಈ ಭಾಗದ ಜನರ ಸುಗಮ ಬದುಕಿಗೆ ನೆರವಾಗಿದ್ದಾರೆ ಎಂದರು.
ನಾಗರಿಕ ಸಮಿತಿಯ ಶೇಷಾಚಲ ಮಾತನಾಡಿ, ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯ ಕಳೆದ 12 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಸರ್ಕಾರದ ಅನುದಾನದ ಜತೆಗೆ ಈ ಭಾಗದ ಜನರೆಲ್ಲರೂ ಸೇರಿ ದೇಣಿಗೆ ಸಂಗ್ರಹಿಸಿ ದೇವಾಲಯದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮಂಜುನಾಥ್, ಲಕ್ಷ್ಮಿನರಸಿಂಹರಾಜು, ದೇವಾಲಯ ಸಮಿತಿಯ ಶಂಭುಲಿಂಗಯ್ಯ, ಶಾಂತರಾಜು, ಶೇಷಾಚಲ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)