ತುಮಕೂರು


ರಾಜ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಅಧಿಕಾರ ದೊರೆಯಲಿರುವ ಮುನ್ಸೂಚನೆ ನೀಡಿದ್ದು, ಇದನ್ನು ಸಕಾರಗೊಳಿಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಡಿಸಿಸಿ ಅಧ್ಯಕ್ಷ ಆರ್.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 06 ರಂದು ನಡೆಯುವ ಸರ್ವೋದಯ ಸಮಾವೇಶದ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ನಾಯಕರು, ಕಾರ್ಯಕರ್ತರು ಸಹ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಯಾಗಲು ಕೈಜೋಡಿಸಿದ್ದೀರಿ, ಇದರ ಭಾಗವಾಗಿ ನೆರೆಯ ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿಯೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿ,ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದರು.ಇದು ಪಕ್ಷಕ್ಕೆ ಮತ್ತಷ್ಟು ಹುಮ್ಮಸ್ಸು ನೀಡಿದೆ. ಇದೇ ಹುಮ್ಮಸ್ಸನ್ನು ನವೆಂಬರ್ 06ರಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಾಗತ ಸಮಾರಂಭವಾದ ಸರ್ವೋದಯ ಸಮಾವೇಶದಲ್ಲಿ ನಾವೆಲ್ಲರೂ ತೋರಿಸಬೇಕಿದೆ ಎಂದರು.
ಎಐಸಿಸಿ ಅಧ್ಯಕ್ಷರಾಗಿ 52 ವರ್ಷಗಳ ಕನ್ನಡಿಗರೊಬ್ಬರು ಆಯ್ಕೆಯಾಗಿರುವುದು ಕರ್ನಾಟಕಕ್ಕೆ ಅಲ್ಲ,ಇಡೀ ದಕ್ಷಿಣ ಭಾರತಕ್ಕೆ ಹೆಮ್ಮೆ ಪಡುವ ವಿಚಾರವಾಗಿದೆ.ಹಾಗಾಗಿ ನವೆಂಬರ್ 06ರಂದು ಬೆಂಗಳೂರಿನಲ್ಲಿ ನಡೆಯುವ ಸರ್ವೋದಯ ಸಮಾವೇಶದ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸುವ ಮೂಲಕ,ರಾಹುಲ್‍ಗಾಂಧಿ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಾಗಿದೆ.ಪ್ರತಿವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 2 ಸಾವಿರ ಜನರಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಮುಖಂಡರು,ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಸಂಪರ್ಕ ನಡೆಸಿ,ಹೆಚ್ಚು ಜನರನ್ನು ಕರೆತರಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ರಾಜ್ಯದಲ್ಲಿರುವ ಶೇ40ರ ಕಮಿಷನ್ ಸರಕಾರ ಇಡೀ ನಾಡಿನ ಜನರನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ. ಸರಕಾರದ ಯೋಜನೆಗಳ ಬಹುತೇಕ ಹಣ ಸಚಿವರು ಮತ್ತು ಅವರ ಹಿಂಬಾಲಕರ ಜೇಬು ಸೇರುತ್ತಿದೆ. ಭ್ರಷ್ಟಾಚಾರವನ್ನು ತಡೆಯುವಲ್ಲಿ ಮುಖ್ಯಮಂತ್ರಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದನ್ನು ಪ್ರಶ್ನಸಿದರೆ ವಿರೋಧಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನರ ಮುಂದಿಟ್ಟು ಬಿಜೆಪಿ ಕಿತ್ತೊಗೆಯಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರು ಜಯಕುಮಾರ್ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ನವೆಂಬರ್ 06ರಂದು ನಡೆಯುವ ಕಾರ್ಯಕ್ರಮದ ಸಲುವಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಈಗಾಗಲೇ ಜಿಲ್ಲೆಯ ನಾಯಕರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಹೆಚ್ಚು ಜನರನ್ನು ಕರೆತರಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಯೂರ ಜಯಕುಮಾರ್ ಅವರು ಸಹ ಜಿಲ್ಲೆಗೆ ಭೇಟಿ ನೀಡಿ, ಸಮಾಲೋಚನೆ ನಡೆಸುತ್ತಿದ್ದಾರೆ. ಇದರ ಮಹತ್ವವನ್ನು ಅರಿತು ನಾವುಗಳು ಕೆಲಸ ಮಾಡಬೇಕಿದೆ. ನವೆಂಬರ್ 06ರ ಸರ್ವೋದಯ ಸಮಾವೇಶದಲ್ಲಿ ನಮ್ಮ ಶಕ್ತಿ ಪ್ರದರ್ಶಿಸುವ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ಕಳುಹಿಸಬೇಕಿದೆ ಎಂದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ, ಮುರುಳೀಧರ ಹಾಲಪ್ಪ, ಪ್ರಸನ್ನ ಗುಬ್ಬಿ ,ಮುಖಂಡರಾದ ಹೊನ್ನಗಿರಿಗೌಡ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾರಾಜಣ್ಣ ಸರ್ವೋದಯ ಸಮಾವೇಶದ ಕುರಿತಂತೆ ಸಲಹೆ ನೀಡಿದರು.ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮರಿಚನ್ನಮ್ಮ, ಅಪ್ತಾಬ್ ಅಹಮದ್, ಮೇಯರ್ ಪ್ರಭಾವತಿ, ಸೈಯದ್ ನಯಾಜ್, ಮಹೇಶ್ ಉಪಸ್ಥಿತರಿದ್ದರು.

(Visited 1 times, 1 visits today)