ಕೊರಟಗೆರೆ

ತಹಶೀಲ್ದಾರ್ ನಹೀದಾ ಜಮ್ ಜಮ್ ರವರ ಕಾರ್ಯದಕ್ಷತೆ ಹಾಗೂ ಕಾರ್ತವ್ಯ ನಿಷ್ಠೆ ಎಷ್ಟಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಹೌದು ಕೊರಟಗೆರೆ ತಾಲ್ಲೂಕಿನ ಅಲೆಮಾರಿ ಜನಾಂಗದವರು ಇಷ್ಟು ವರ್ಷಗಳ ಕಾಲ ಅನುಭವಿಸಿದ್ದ ಯಾತನೆ, ನೋವುಗಳೆಲ್ಲಾ ಕಳೆದು ಮರು ಜೀವನ ನಡೆಸಲು, ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ತಾಲ್ಲೂಕಿನ ಜನಸ್ನೇಹಿ ತಹಶಿಲ್ದಾರ್ ಎಂದೇ ಖ್ಯಾತಿ ಪಡೆದ ನಹೀದಾ ಜಮ್ ಜಮ್ ರವರು ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪಣ ತೊಟ್ಟು ನಿಂತಿದ್ದಾರೆ.
ಮೂರು ತಿಂಗಳಿಂದ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 31ರಲ್ಲಿ ಒಂದು ಎಕರೆ ಜಮೀನಿನಲ್ಲಿ ಅಲೆಮಾರಿ ಕುಟುಂಬಸ್ಥರಿಗೆ 19 ನಿವೇಶನಗಳು ಸಿದ್ಧವಾಗುತ್ತಿವೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಉನ್ನತ ಅಧಿಕಾರಿಗಳ ತಂಡ ಅಲೆಮಾರಿ ಜನಾಂಗದ 19 ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸೌಕರ್ಯ ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದ್ದು, ನಿವೇಶನದ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಸುಮಾರು 1.ಕಿ.ಮೀ ರಸ್ತೆ ನಿರ್ಮಾಣವಾಗಿದ್ದು ಜನರು ಓಡಾಡಲು ಇದ್ದ ಸಮಸ್ಯೆ ಆದಷ್ಟು ಬಗೆಹರಿದಿದೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದ್ದಾರೆ, ಸ್ಥಳಕ್ಕೆ ಆಹಾರ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕರೆಸಿ ಸ್ಥಳದಲ್ಲಿಯೇ ಅವರಿಗೆ ಅವಶ್ಯಕತೆ ಇರುವ ಸವಲತ್ತುಗಳನ್ನು ಒದಗಿಸಿ ಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಅಲೆಮಾರಿ 19 ಕುಟುಂಬಗಳಿಗೆ ಮನೆ ನಿರ್ಮಿಸುವಂತೆ ಈಗಾಗಲೇ ಅಧ್ಯಕ್ಷರು ಹಾಗೂ ಪಿಡಿಒ ರವರ ಗಮನಕ್ಕೆ ತಂದಿದ್ದಾರೆ.

(Visited 7 times, 1 visits today)