ತುಮಕೂರು:

       ಚುನಾವಣೆ ಮುಂಚೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಟ್ಟಿದ್ದ ಮಾತಿನಂತೆ 10 ಮಂದಿಯನ್ನು ಮೊದಲನೇ ಹಂತದಲ್ಲಿ ಸಚಿವರನ್ನಾಗಿ ಮಾಡಿದ್ದಾರೆ, ಉಳಿದವರನ್ನು ಮುಂದಿನ ದಿನಗಳಲ್ಲಿ ಸಚಿವರನ್ನಾಗಿ ಮಾಡುತ್ತಾರೆ ಎಂದು ನೂತನ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

       ಪ್ರಮಾಣವಚನ ಸ್ವೀಕರಿಸಿದ ನಂತರ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆರ್ಶೀವಾದ ಪಡೆದ ಅವರು, ಪ್ರತಿ ಸಂದರ್ಭದಲ್ಲಿಯೂ ಶ್ರೀಗಳ ಆರ್ಶೀವಾದ ಪಡೆಯುತ್ತಿದ್ದೇನೆ, ಚುನಾವಣೆ ಮುಂಚೆಯೂ ಮಠಕ್ಕೆ ಆಗಮಿಸಿ, ಶ್ರೀಗಳ ಆರ್ಶೀವಾದವನ್ನು ಪಡೆದಿದ್ದೇ, ಈಗ ಸಚಿವನಾಗಿ ಬಂದು ಶ್ರೀಗಳ ಆರ್ಶೀವಾದವನ್ನು ಪಡೆದಿದ್ದೇನೆ ಎಂದು ಹೇಳಿದರು.

       ಬಿಜೆಪಿ ಸರ್ಕಾರ ರಚನೆಯಾಗಲು ಸಹಕರಿಸಿದವರಿಗೆ ಸಿಎಂ ನೀಡಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ, 17 ಮಂದಿಯಲ್ಲಿ 10 ಮಂದಿಗೆ ಈಗ ಸಚಿವ ಸ್ಥಾನ ಸಿಕ್ಕಿದ್ದು, ಉಳಿದವರಿಗೆ ಮೇ-ಜೂನ್‍ಗೆ ಸಚಿವ ಸ್ಥಾನ ದೊರಕಲಿದೆ, ಸಚಿವ ಸ್ಥಾನ ತಡವಾಗಲು ಹಲವಾರು ಕಾರಣಗಳಿದ್ದು, ನಮ್ಮ ರಾಜಕೀಯ ಭವಿಷ್ಯ ಹಾಳಾಯಿತು ಎಂದು ಟೀಕಿಸುತ್ತಿದ್ದವರಿಗೆ ಇಂದು ಉತ್ತರ ಸಿಕ್ಕಿದೆ ಎಂದು ಹೇಳಿದರು.

      ಪಕ್ಷದಲ್ಲಿ ಮೂಲ-ವಲಸೆ ಎನ್ನುವುದು ಇಲ್ಲ, 116 ಮಂದಿಯೂ ಒಟ್ಟಾಗಿದ್ದೇವೆ, ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಸಹಜವಾಗಿದ್ದು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡುತ್ತಾರೆ, ಪಕ್ಷದಲ್ಲಿ ಯಾವುದೇ ಪೈಪೋಟಿ, ಗೊಂದಲವಿಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಬೇಕಿದ್ದು, ರೇಣುಕಾಚಾರ್ಯ, ಉಮೇಶ್ ಕತ್ತಿ ಕೇಳಿದರಲ್ಲಿ ತಪ್ಪಿಲ್ಲ ಎಂದರು.

      ಉಪಚುನಾವಣೆಯಲ್ಲಿ ಸೋತವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದು, ಅವರು ಸಹ ಸಚಿವರಾಗುತ್ತಾರೆ, ಮುಖ್ಯಮಂತ್ರಿ ಅವರು ಎಲ್ಲರೊಂದಿಗೆ ಮಾತನಾಡಿದ್ದಾರೆ, ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿರುವ ಹದಿನೇಳು ಮಂದಿಯೂ ಒಗ್ಗಟ್ಟಾಗಿದ್ದೇವೆ, ಬಿಎಸ್‍ವೈ ಚುನಾವಣೆ ಮುಂಚೆ ನೀಡಿದ್ದ ಭರವಸೆ ಈಡೇರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

      ಸಿಎಂ ಬಳಿ ಇರುವ ಖಾತೆಗಳನ್ನು ಹಂಚುತ್ತಾರೆ, ವೈಯಕ್ತಿಕವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವಸ್ಥಾನವನ್ನು ಕೇಳುಬೇಕು ಎಂದುಕೊಂಡಿದ್ದೇನೆ, ಹತ್ತು ಮಂದಿಯೂ ಇಂತಹದ್ದೇ ಖಾತೆ ಬೇಕೆಂದು ಒತ್ತಡ ಹಾಕಿಲ್ಲ, ಯಾವುದೇ ಖಾತೆಯನ್ನು ನೀಡಿದರು ಕೆಲಸ ಮಾಡುವುದಾಗಿ ಅವರು ಹೇಳಿದರು.
ಈ ವೇಳೆ ನಂಜುಂಡೇಶ್, ಉಗ್ರನರಸಿಂಹಯ್ಯ, ಪಾಲನೇತ್ರಯ್ಯ, ಸಿದ್ಧಲಿಂಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 15 times, 1 visits today)