ತುಮಕೂರು:

      ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಂಡಿಸಿರುವ ಮಧ್ಯಂತರ ಬಜೆಟ್ ಯುವಕರ, ನಿರುದ್ಯೋಗಿಗಳ ಹಾಗೂ ರೈತರ ವಿರೋಧಿ ಬಜೆಟ್ ಆಗಿದೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಇಂತಿಯಾಜ್ ಅಹಮದ್ ಆರೋಪಿಸಿದ್ದಾರೆ.

      ಕೇಂದ್ರದ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಮುಂಬರುವ ಲೋಕಸಭಾ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಮಾಡಲಾಗಿದೆ. ಈ ಬಜೆಟ್‍ನಲ್ಲಿ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸುವ ಯಾವುದೇ ಯೋಜನೆ ಜಾರಿಗೆ ತಂದಿಲ್ಲ, ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಳ್ಳುವ ಲಕ್ಷಣಗಳು ಹೆಚ್ಚಾಗಲಿವೆ ಎಂದಿದ್ದಾರೆ.

       ದೇಶದ ಬೆನ್ನೆಲುಬಾಗಿರುವ ರೈತರ ಸಾಲಮನ್ನಾ ಹುಸಿಗೊಳಿಸಿರುವ ಈ ಬಜೆಟ್‍ನಲ್ಲಿ 5 ಎಕರೆಗಿಂತ ಕಡಿಮೆ ಭೂಮಿ ಇರುವ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ. ಅವರ ಖಾತೆಗೆ ಜಮೆ ಮಾಡುವ ಮೂಲಕ ರೈತರ ಮೂಗಿಗೆ ತುಪ್ಪ ಸವರಲು ಹೊರಟಿದೆ ಎಂದು ಆಪಾದಿಸಿದ್ದಾರೆ.

      ಕೇವಲ 5 ಎಕರೆ ಒಳಗಿರುವ ರೈತರಿಗೆ ಮಾತ್ರ ವಾರ್ಷಿಕ 6 ಸಾವಿರ ರೂ. ಘೋಷಣೆ ಮಾಡಿದ್ದು, ಉಳಿದಂತೆ 5 ಎಕರೆಗಿಂತ ಹೆಚ್ಚಿರುವ ರೈತರಿಗೆ ಕಷ್ಟಗಳಿಲ್ಲವೆ ಎಂದು ಪ್ರಶ್ನಿಸಿರುವ ಅವರು ಇಂದು ಭೂಮಿ ಹೆಚ್ಚಿರುವ ರೈತರೇ ಸಾಲಬಾಧೆಯಿಂದ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ ಈ ಬಗ್ಗೆ ಕೇಂದ್ರ ಯಾವ ಕ್ರಮವನ್ನೂ ತೆಗೆದುಕೊಳ್ಳದೇ ಬರೀ ಸಣ್ಣ ರೈತರಿಗೆ ಮಾತ್ರ ಮೂಗಿಗೆ ತುಪ್ಪ ಸವರಿದೆ ಎಂದು ಹೇಳಿದ್ದಾರೆ.

      ಕರ್ನಾಟಕಕ್ಕೆ ಯಾವುದೇ ಜನಪ್ರಿಯ ಯೋಜನೆಗಳನ್ನು ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ಡಾ.ಇಂತಿಯಾಜ್ ಅಹಮದ್ ಬಜೆಟ್‍ನಲ್ಲಿ ನದಿ ಜೋಡಣೆ ಅಥವಾ ಕೆರೆಗಳ ಜೋಡಣೆ ಮಾಡದೇ ಇರುವುದು ದುರಂತ, ನದಿ, ಕೆರೆಗಳ ಜೋಡಣೆಯಿಂದ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.

      ಈ ಮಧ್ಯಂತರ ಬಜೆಟ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರ ಒಲವು ಗಳಿಸಲು ಪ್ರಯತ್ನಿಸಿದ್ದು, ಎಲ್ಲಾ ರೀತಿಯಿಂದಲೂ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

      2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ ‘ರೈತ ವಿರೋಧಿ’ ಮತ್ತು ‘ಯುವಜನ ವಿರೋಧಿ’ ಆಗಿದೆ. ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ ಬಲವಾದ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ. ಎರಡೂ ವರ್ಗಕ್ಕೂ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ

(Visited 24 times, 1 visits today)