ತುಮಕೂರು :

        ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದ್ದು, ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರವಾಗಿ ದುರಸ್ಥಿಪಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಬಗ್ಗೆ ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಕೆ.ಆರ್.ಐ.ಡಿ ಎಲ್ ಸಂಸ್ಥೆಯಿಂದ 54 ಘಟಕಗಳು ಒಳಗೊಂಡಿರುತ್ತದೆ. ತುರುವೇಕೆರೆ ತಾಲೂಕಿನ 24, ಕೊರಟಗೆರೆ-4, ತಿಪಟೂರು ತಾಲೂಕಿನ 4 ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗಾಗಿ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆರ್‍ಓ ಪ್ಲಾಂಟ್‍ಗಳನ್ನು ಪಂಚಾಯತಿ ಅನುದಾನದಡಿ ದುರಸ್ಥಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರು ಮಾತನಾಡಿ, ತುಮಕೂರು ತಾಲೂಕಿನ ಬನ್ನಿ ಕುಪ್ಪೆ ಹಾಗೂ ಕಣಕುಪ್ಪೆ ಗ್ರಾಮದಲ್ಲಿ ಚಿರತೆ ದಾಳಿ ಪ್ರಕರಣದ ಬಗ್ಗೆ ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಮುನಿರಾಜು ಮಾತನಾಡಿ, ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಬಂದಿರುವ ವಿಶೇಷ ಹುಲಿ ಸಂರಕ್ಷಣಾ ದಳದ 30 ಜನ ಸಿಬ್ಬಂದಿಯನ್ನು 4 ತಂಡಗಳಾಗಿ ರಚಿಸಿ ದೊಡ್ಡಮಳಲವಾಡಿ, ಹೆಬ್ಬೂರು ಬ್ಲಾಕ್, ಸಿ.ಎಸ್.ಪುರ ಬ್ಲಾಕ್ ಮತ್ತು ಮಣಿಕುಪ್ಪೆ ಬ್ಲಾಕ್‍ಗಳಿಗೆ ನಿಯೋಜಿಸಲಾಗಿದೆ. ಅಲ್ಲದೇ ತುಮಕೂರು, ಗುಬ್ಬಿ ಮತ್ತು ಕುಣಿಗಲ್ ವಲಯಗಳಿಗೆ ಸುಮಾರು 40 ಸಿಬ್ಬಂದಿಗಳನ್ನೊಳಗೊಂಡ 4 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಭೆಗೆ ತಿಳಿಸಿದರು.

      ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮಾತನಾಡಿ, ಚಿರತೆ ಕಾಣಿಸಿಕೊಂಡಿರುವ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ರಾತ್ರಿ ಸಮಯದಲ್ಲಿ ಓಡಾಡದಂತೆ ತಿಳಿಸಬೇಕು. ಚಿರತೆ ದಾಳಿ ಭಯ ಜನರನ್ನು ಕಾಡುತ್ತಿರುತ್ತದೆ. ಯಾವುದೇ ತೊಂದರೆಯಾಗದಂತೆ ಕರಪತ್ರಗಳ ಮೂಲಕ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ಮಧುಗಿರಿ ತಾಲೂಕು ವೆಂಗಳಮ್ಮನಹಳ್ಳಿ ಗ್ರಾಮದಲ್ಲಿ ಲೋಟಸ್ ಫೌಟ್ರಿ ಫಾರಂ ಇದ್ದು, ಇಲ್ಲಿರುವ ಸುಮಾರು 80 ಮಕ್ಕಳು ಶಾಲೆಗೆ ದಾಖಲಾಗದ ಬಗ್ಗೆ ಅಧ್ಯಕ್ಷರು ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಮಧುಗಿರಿ ಡಿಡಿಪಿಐ ಅವರು, ದಾಖಲಾಗದ ಮಕ್ಕಳು ಹೊರ ರಾಜ್ಯದಿಂದ ಬಂದಿದ್ದು, ಇಲ್ಲಿ ಸುಮಾರು 80 ಕುಟುಂಬಗಳು ವಾಸವಾಗಿದ್ದು, 2 ತಿಂಗಳ ನಂತರ ಬೇರೆಡೆ ವಲಸೆ ಹೋಗುತ್ತಾರೆ. ಅಲ್ಲದೇ ಬಂದಿರುವ ಮಕ್ಕಳು ಹೊರರಾಜ್ಯದವರಾಗಿರುವ ಕಾರಣ ಶಾಲೆಗೆ ದಾಖಲು ಮಾಡಲು ಭಾಷೆಯ ಸಮಸ್ಯೆಯಾಗಿದೆ. ಸದರಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

      ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ವಿಶೇಷವಾಗಿ ಟ್ಯೂಷನ್ ಮಾಡಲಾಗುತ್ತದೆ. ಮತ್ತು ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೇ ವಸತಿ ನಿಲಯಗಳಲ್ಲಿಯೂ ಕೂಡ ಸಂಜೆ ವೇಳೆ ತರಗತಿಗಳನ್ನು ನಡೆಸಲಾಗುತ್ತಿದೆ. ಮತ್ತು ಸಂಪನ್ಮೂಲ ಶಿಕ್ಷಕರಿಂದ ವಿಶೇಷವಾಗಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ, ಮಕ್ಕಳಿಗೆ ಪರೀಕ್ಷೆ ಅಭ್ಯಾಸ ಮಾಡಲಾಗುತ್ತಿದೆ ಎಂದು ಡಿಡಿಪಿಐ ಸಭೆಗೆ ಮಾಹಿತಿ ನೀಡಿದರು.

     ಮಾರಣಾಂತಿಕ ಕೊರೊನಾ ವೈರಸ್ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಡಿಹೆಚ್‍ಓ ಗೆ ಪ್ರಶ್ನಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‍ಓ ಅವರು, ಜಿಲ್ಲೆಯ ಕೊರೊನಾ ವೈರಸ್ ಪ್ರಕರಣಗಳು ಯಾವುದು ಕಂಡುಬಂದಿಲ್ಲ. ಚೀನಾ ದೇಶದಲ್ಲಿ ಓದಲು ಹೋಗಿದ್ದ, ವಿದ್ಯಾರ್ಥಿಗಳು ವಾಪಾಸ್ಸಾಗಿದ್ದು, ಅವರನ್ನು ತಪಾಸಣೆಗೊಳಪಡಿಸಿದ್ದು, ನೆಗೆಟಿವ್ ಬಂದಿದೆ. ಯಾವುದೇ ವೈರಸ್ ಪ್ರಕರಣ ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದ್ದು, ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.

     ಕೊರೊನಾ ವೈರಸ್ ಬಗ್ಗೆ ಜಾಗೃತಿ:- ಕೊರೊನಾ ವೈರಸ್ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ತರಬೇತಿ ನೀಡಿ, ಮನೆ-ಮನೆಗೆ ಭೇಟಿ ನೀಡಿ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕ್ರಮವಹಿಸಬೇಕು. ಮತ್ತು ಶಾಲಾ ಮಕ್ಕಳಿಗೆ ಕೈ-ಕಾಲುಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವಂತೆ ತಿಳಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

      ತೋಟಗಾರಿಕೆ ಇಲಾಖೆಯಡಿ ಹವಾಮಾನ ಆಧಾರಿತ ಇನ್ಸೂರೆನ್ಸ್ ಯೋಜನೆಯಲ್ಲಿ ಒಟ್ಟು 16550 ಪ್ರಕರಣಗಳ ಪೈಕಿ 8176 ಪ್ರಕರಣಗಳಿಗೆ ಒಟ್ಟು 1813.94 ಲಕ್ಷ ರೂ.ಗಳು ರೈತರ ಖಾತೆಗಳಿಗೆ ಪಾವತಿಯಾಗಿದ್ದು, ಬಾಕಿಯಿರುವ 7760 ಪ್ರಕರಣಗಳಿಗೆ 1984.04 ಲಕ್ಷ ರೂ.ಗಳು ರೈತರಿಗೆ ಪಾವತಿಯಾಗಬೇಕು. ಸದರಿ ಪ್ರಕರಣಗಳಿಗೆ ಬೆಳೆ ಸಮೀಕ್ಷೆಗೂ ಹಾಗೂ ನೋಂದಣಿ ಸಮಯದಲ್ಲಿ ರೈತರು ನೀಡಿರುವ ಸ್ವಯಂ ದೃಢೀಕರಣ ಪತ್ರದಲ್ಲಿ ನಮೂದಿಸಿರುವ ಬೆಳೆಗೂ ಹೊಂದಾಣಿಕೆ ಆಗದ ಕಾರಣ ರೈತರಿಗೆ ಹಣ ಪಾವತಿಯಾಗಿರುವುದಿಲ್ಲ ಎಂದರಲ್ಲದೇ, ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ನಂತರ ಇನ್ಸೂರೆನ್ಸ್ ಕಂಪನಿಯಿಂದ ಹಣ ರೈತರಿಗೆ ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಅವರು ಸಭೆಗೆ ಮಾಹಿತಿ ನೀಡಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ|| ನವ್ಯಬಾಬು, ಅಕ್ಕಮಹಾದೇವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

(Visited 10 times, 1 visits today)