ತುಮಕೂರು


ವಿಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು ಹಾಗೂ ಗೆದ್ದುಬರುತ್ತಾರೆ ಕೂಡ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ನಾವು ಈ ಹಿಂದೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದೆವು, ತುಮಕೂರು ಜಿಲ್ಲೆಗೆ ಬಂದರೆ ಸಂತೋಷ ಎಂದ ಅವರು ಮಾಜಿ ಶಾಸಕ ಎಚ್.ನಿಂಗಪ್ಪ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ, ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟದ್ದು, ಆ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.
ರಾಜ್ಯ ಸರ್ಕಾರದಿಂದ ಪುನರ್ ಸ್ಥಾಪಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಅಡಿಯಲ್ಲಿ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ಹೆಚ್ಚು ಮಂದಿ ರೈತರು ಸದಸ್ಯತ್ವ ನೊಂದಾಯಿಸಬೇಕೆಂದು ಮನವಿ ಮಾಡಿಕೊಂಡರು.
ಯಶಸ್ವಿನಿ ಯೋಜನೆಯಡಿ ನೊಂದಾಯಿತ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮಾ ಸೌಲಭ್ಯವಿದೆ. ಪ್ರತಿಯೊಬ್ಬರು ಈ ಸೌಲಭ್ಯ ಪಡೆಯ ಬೇಕೆಂದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ ವಾರ್ಷಿಕ ವಂತಿಕೆ ಪಾವತಿಗೆ ವಿನಾಯಿತಿ ಇದೆ ಹೆಚ್ಚಿನ ಮಾಹಿತಿಗಾಗಿ ಡಿಸಿಸಿ ಬ್ಯಾಂಕ್ ಶಾಖೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಸಂಪರ್ಕಿ ಸಬಹುದಾಗಿದೆ ಎಂದರು.
ಈ ಹಿಂದೆ ಯಶಸ್ವಿನಿ ಯೋಜನೆ ಪುನರ್ ಸ್ಥಾಪನೆಗೆ ಒತ್ತಾಯಿಸಿದ್ದೆವು, ಮುಖ್ಯಮಂತ್ರಿಗಳು ಸಹಕಾರ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ತಂದಿರುವುದು ಅಭಿನಂದನೀಯ ಎಂದರು.
ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳ 11 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಈ ಬಾರಿ ಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ, ಆಕಾಂಕ್ಷಿಗಳು ಹೆಚ್ಚಿದ್ದರು ಪರವಾಗಿಲ್ಲ. ಎಲೆಕ್ಷನ್ ಎಂದ ಮೇಲೆ ನೂಕುನುಗ್ಗಲು ಇದ್ದೇಯಿದೆ ಎಂದರು.
ಈ ಭಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಧುಗಿರಿಯನ್ನು ನೂರಕ್ಕೆ ನೂರು ಪಾಲು ಜಿಲ್ಲೇಯನ್ನಾಗಿಸುವೆ ಎಂದು ಆಶ್ವಾಸನೆಯನ್ನು ನೀಡಿದರು.
ಶಾಲೆಗಳನ್ನು ಕೇಸರಿ ಕಾರಣ ಮಾಡಲು ಹೊರಟಿರುವ ಕ್ರಮ ಸರಿಯಲ್ಲ, ಸ್ವಾಮಿ ವಿವೇಕಾನಂದರು ಹೊರದೇಶದಲ್ಲೆಲ್ಲಾ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಅಂತಹವರಿಗೆ ಅವಮಾನ ಮಾಡುವುದು ಸರಿಯಲ್ಲವೆಂದರು.
ಮಧುಗಿರಿ ಕ್ಷೇತ್ರದ ಜನ 2023ನೇ ಸಾಲಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಮಧುಗಿರಿ ಜಿಲ್ಲೆಯನ್ನಾಗಿ ಮಾಡಿಸಲು ಸರ್ಕಾರಕ್ಕೆ ಒತ್ತಡ ತರುತ್ತೇನೆ, 54 ಕೆರೆಗಳಿಗೂ ನೀರು ತುಂಬಿಸುತ್ತೇನೆ, ರೈಲ್ವೆ ಕಾಮಗಾರಿಗಳನ್ನು ಸಂಪೂರ್ಣ ಮಾಡಿಸಲು ಶ್ರಮವಹಿಸುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ಇಟ್ಟು ಕೆಲಸ ಮಾಡುತ್ತೇನೆ ಎಂದರು.
ಡಾ. ಜಿ.ಪರಮೇಶ್ವರ್ ಹಾಗೂ ನನ್ನ ನಡುವೆ ಯಾವುದೆ ಭಿನ್ನಾಭಿಪ್ರಾಯವಿಲ್ಲ. ಯಾವ ಮುಸುಕಿನ ಗುದ್ದಾಟವೂ ಇಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಠಿ ಎಂದ ರಾಜಣ್ಣನವರು, ಅವರು, ಕಾಂಗ್ರೆಸ್ ಪಕ್ಷದ ನಾಯಕರು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅವರೆ ಮುಖ್ಯಮಂತ್ರಿಯಾಗುವ ಸನ್ನಿವೇಶವೂ ಇದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ನಿರ್ದೇಶಕರಾದ ಪಿ.ಆರ್.ನಾರಾಯಣಗೌಡ, ಸಿಂಗದಹಳ್ಳಿ ರಾಜಕುಮಾರ್, ಲಕ್ಷ್ಮೀನಾರಾಯಣ, ಸಹಕಾರ ಇಲಾಖೆಯ ಅಧಿಕಾರಿಗಳಾದ ಶ್ರೀಧರ್, ಸಣ್ಣಪ್ಪಯ್ಯ, ವೆಂಕಟೇಶ್, ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)