ತುಮಕೂರು :

      ನಗರದ 15ನೇ ವಾರ್ಡಿನಲ್ಲಿರುವ ಹಳೆ ಎನ್‍ಇಪಿಎಸ್ ಹಿಂಭಾಗದ ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಪಾಲಿಕೆ ಮೇಯರ್ ಫರೀಧಾ ಬೇಗಂ, ಉಪಮೇಯರ್ ಶಶಿಕಲಾ , ಆಯುಕ್ತ ಟಿ.ಭೂಬಾಲನ್ ಸೇರಿದಂತೆ ಸ್ಥಳೀಯರು ಸ್ವಚ್ಛಯಾ ಕಾರ್ಯದಲ್ಲಿ ಭಾಗವಹಿಸಿದ್ದರು.

      ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಫರೀಧಾ ಬೇಗಂ ವಾರ್ಡಿನ ಸದಸ್ಯರು ಸೇರಿದಂತೆ ಆಯುಕ್ತರೊಂದಿಗೆ ಸೋಮವಾರ ಚರ್ಚೆ ಮಾಡಿದ ರೀತಿಯಲ್ಲಿ ಸಾವರ್ಕರ್ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಧೂಳು ಹೆಚ್ಚಾಗುತ್ತಿದ್ದು, ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ಪ್ರಾಯೋಗಿಕವಾಗಿ ಉದ್ಯಾನವನ ಸ್ವಚ್ಛಗೊಳಿಸಲು ತೀರ್ಮಾನ ಮಾಡಿದಂತೆ ಕಾರ್ಯ ಮಾಡಲಾಗುತ್ತಿದೆ. ಇಂದು ಪ್ರಾರಂಭವಾದ ಕಾರ್ಯ ಎಂದಿಗೂ ನಿಲ್ಲದಂತೆ ಮುಂದುವರೆಸಬೇಕು ಎಂದು ತಿಳಿಸಿದರು.

      ಎರಡು ತಿಂಗಳೊಳಗೆ ಉದ್ಯಾನವನವನ್ನು ಯಥಾಸ್ಥಿತಿಗೆ ತಂದು ಇಲ್ಲಿ ಮೊದಲಿನಂತೆ ವಾಕಿಂಗ್ ಮಾಡಲು, ಮಕ್ಕಳು ಆಟವಾಡಲು ಅನುಕೂಲವಾಗುವಂತೆ ಮಾಡಲಾಗುತ್ತದೆ. ಇದಕ್ಕೆ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ. ಇಂದು ಪ್ರಾರಂಭಿಕವಾಗಿ 15ನೆ ವಾರ್ಡಿನಲ್ಲಿ ಕೆಲಸ ಪ್ರಾರಂಭ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡುಗಳಲ್ಲಿನ ಪಾರ್ಕುಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.

      ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮಾತನಾಡಿ, ತೋಟಗಾರಿಕಾ ಇಲಾಖೆಯ ಮುಂಭಾಗದ ಉದ್ಯಾನವನ ವೀಕ್ಷಣೆ ಮಾಡಲಾಗಿತ್ತು. ಅದನ್ನು ಸ್ವಚ್ಛತೆ ಮಾಡಲು ತೀರ್ಮಾನಿಸಲಾಗಿತ್ತು. ಆ ಪ್ರಕಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಮಹಾಪೌರರ ಸಲಹೆಗಳ ಮೇರೆಗೆ ಕ್ರಮಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಪಾರ್ಕುಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

      15ನೆ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಸಾವರ್ಕರ್ ಹೆಸರಿನ ಉದ್ಯಾನವನ ತುಂಬಾ ಹಾಳಾಗಿತ್ತು. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಪ್ರಾರಂಭ ಮಾಡಿದ್ದೇವೆ. ಜನರ ಆಪೇಕ್ಷೆ ಮೇರೆಗೆ ನಾಗರಿಕ ಹಿತರಕ್ಷಣಾ ಸಮಿತಿಯನ್ನು ನಿರ್ಮಿಸಿ ಪಾರ್ಕ್ ಅಭಿವೃದ್ಧಿ ಕಾರ್ಯವನ್ನು ಮುಂದುವರೆಸುತ್ತೇವೆ. ಅಕ್ಷರ ಐ ಫೌಂಡೇಶನ್‍ನ ಡಾ.ಶ್ರೀನಿವಾಸ್ ಅವರು ಸ್ವಯಂ ಆಗಿ ಪಾರ್ಕ್ ನಿರ್ವಹಣೆ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಪಾಲಿಕೆ ಸಹಕಾರ ಇರುತ್ತದೆ ಜೊತೆಗೆ ನಾಗರಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

      ನಗರದಲ್ಲಿ ಸುಂದರವಾಗಿದ್ದ ಉದ್ಯಾನವನವು ನಿರ್ವಹಣೆಯ ಕೊರೆತಯಿಂದ ಹಾಳಾಗಿತ್ತು. ಅದಕ್ಕೆ ನೀರು ಹಾಕುತ್ತಾ ಕೈಲಾದಷ್ಟು ಕೆಲಸ ಮಾಡುತ್ತಿದ್ದೇವು. ಇದೀಗ ಪಾಲಿಕೆಯ ವತಿಯಿಂದ ಪಾರ್ಕ್ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಅಕ್ಷರಾ ಐ ಫೌಂಡೇಶನ್‍ನ ವೈದ್ಯ ಶ್ರೀನಿವಾಸ್ ತಿಳಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದು, ಮುಂದಿನ ದಿನಗಳಲ್ಲಿ ಮನೆಯಿಂದಲೇ ಹಸಿ ಕಸದಿಂದ ಗೊಬ್ಬರ ತಯಾರಿಸುವುದರ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಆಯುಕ್ತರು ಹಾಗೂ ಮೇಯರ್‍ರೊಂದಿಗೆ ಚರ್ಚಿಸಿದರು.

(Visited 26 times, 1 visits today)