ತುಮಕೂರು


ವೀರ ವಿನಿತೆ ಒನಕೆ ಓಬವ್ವರಂತೆ ಮಹಿಳೆಯರು ಸಮಯ ಪ್ರಜ್ಞೆ, ಧೈರ್ಯ, ಶೌರ್ಯವನ್ನು ಮೈಗೂಡಿಸಿ ಕೊಂಡರೆ, ಓರ್ವ ಮಹಿಳೆ ಮಧ್ಯರಾತ್ರಿಯಲ್ಲಿ ಸುರಕ್ಷಿತವಾಗಿ ಓಡಾಡಿದರೆ ಅದೇ ನಿಜವಾದ ಸ್ವಾತಂತ್ರ ಎಂಬ ಗಾಂಧೀಜಿಯ ಕನಸನ್ನು ನನಸು ಮಾಡಬಹುದಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದ ಕಲಾ ಮತ್ತು ಸಾಂಸ್ಕøತಿಕ ವೇದಿಕೆ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಮಹಿಳೆ ರಾಜಕೀಯ, ಸಾಮಾಜಿಕ,ಶೈಕ್ಷಣಿಕ, ಅರ್ಥಿಕ ಹೀಗೆ ಯಾವುದೇ ರಂಗದಲ್ಲಿಯೂ ಮುಂದೆ ಬರಬೇಕೆಂದರೂ ಆಕೆ ಸಮಯ ಪ್ರಜ್ಞೆ ಮತ್ತು ಸ್ಥೈರ್ಯವನ್ನು ಮೈಗೂಡಿಸಿಕೊಳ್ಳಲೇಬೇಕು ಎಂದರು.
ಸರಕಾರ 2021ರಲ್ಲಿಯೇ ಹೈದರಾಲಿ ಸೈನ್ಯದಿಂದ ಚಿತ್ರದುರ್ಗದ ಕೊಟೆಯನ್ನು ರಕ್ಷಿಸಿ ಒನಕೆ ಓಬವ್ವನ ಹುಟ್ಟು ಹಬ್ಬವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಮಂಜೂರಾತಿ ನೀಡಿದ್ದರೂ, ಕೋವಿಡ್‍ನಿಂದಾಗಿ ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕನಕದಾಸ ಜಯಂತಿ ಮತ್ತು ಒನಕೆ ಓಬವ್ವ ಜಯಂತಿ ಎರಡು ಒಟ್ಟಿಗೆ ಬಂದ ಪರಿಣಾಮ ಸರಕಾರಿ ಕಾರ್ಯಕ್ರಮ ನವೆಂಬರ್ 11 ರಂದೆ ನಡೆದಿತ್ತು. ಆದರೆ ಛಲವಾದಿ ಸಮುದಾಯಗಳು ಸಂಘಟನೆಯ ಜೊತೆಗೆಮಕ್ಕಳಲ್ಲಿ ಸ್ಪೂರ್ತಿ ತುಂಬುವ ಉದ್ದೇಶದಿಂದ ಇಂದು ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತೋಷದ ವಿಚಾರ. ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಜೊತೆಗೆ,ಕುರುಕ್ಷೇತ್ರ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.ಕುರುಕ್ಷೇತ್ರ ನಾಟ್ಕದ ಬದಲು ಒನಕೆ ಓಬವ್ವ ಚರಿತ್ರೆಯನ್ನೇ ನಾಟಕವಾಗಿ ಪ್ರದರ್ಶಿಸಿದ್ದರೆ,ಕಾರ್ಯಕ್ರಮ ಮತ್ತಷ್ಟು
ಅರ್ಥಪೂರ್ಣ ವಾಗುತಿತ್ತು ಎಂಬ ಆಶಯ ವ್ಯಕ್ತಪಡಿಸಿದರು.
ಹಿರಿಯ ಹರಿಕಥಾ ವಿದ್ವಾನ ಡಾ.ಲಕ್ಷ್ಮಣದಾಸ್ ಮಾತನಾಡಿ,ಚಿತ್ರದುರ್ಗದ ಕೋಟೆ ಕಾವಲಿಗೆ ಇದ್ದ ಮುದ್ದಹನುಮಪ್ಪ ಅವರ ಪತ್ನಿ ಓಬವ್ವ ಸಮಯ ಪ್ರಜ್ಞೆಯ ಫಲವಾಗಿ ಹೈದರಾಲಿಯ ಸೈನಿಕರು ಕೋಟೆಯನ್ನು ನುಸುಳಿದಾಗ, ಕೈಗೆ ಸಿಕ್ಕ ಒನಕೆ ಹಿಡಿದು ಶತೃ ಸೈನಿಕರ ರುಂಡ ಚಂಡಾಡಿದ್ದರಿಂದ ಒನಕೆ ಓಬವ್ವ ಆಗಿ ಇತಿಹಾಸದಲ್ಲಿ ಪರಿಚಿತಳಾಗಿದ್ದಾಳೆ.ಆಕೆಯ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಇತಿಹಾಸ ಪ್ರಾದ್ಯಾಪಕಿ ಡಾ.ಕಾವಲಮ್ಮ ಮಾತನಾಡಿ, ಛಲವಾದಿಗಳಿಗೆ ವೃತ್ತಿ ಎಂಬುದಿಲ್ಲ.ಅವರು ಸಾಂಸ್ಕøತಿಕ ವಲಯದ ಪ್ರತಿನಿಧಿಗಳು, ಸಂಗೀತವೇ ಇವರ ಪ್ರಧಾನ ವೃತ್ತಿ.ಪಂಚವಾದ್ಯಗಳೆಂದು ಕರೆಯಲ್ಪಡುವ ನಗಾರಿ, ಕಹಳೆ, ಡೊಳ್ಳು, ಗಂಟೆ, ಜಾಗಟೆಯಲ್ಲಿ ನಗಾರಿ ಮತ್ತು ಕಹಳೆ ನುಡಿಸುವ ಕುಲಕ್ಕೆ ಛಲವಾದಿಗಳು ಸೇರಿರುವುದು ಹೆಮ್ಮೆಯ ವಿಚಾರ. ಇಂತಹ ಛಲವಾದಿ ಸಮುದಾಯದ ಕುರಿತು ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದರು.
ಛಲವಾದಿ ಕಲಾ ಮತ್ತು ಸಾಂಸ್ಕøತಿಕ ವೇದಿಕೆವತಿಯಿಂದ 2022 ನೇ ಸಾಲಿನ ಒನಕೆ ಓಬವ್ವ ಪ್ರಶಸ್ತಿಯನ್ನು ತುಮಕೂರು ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಪ್ರಭಾವತಿ,ಶಿವಶೈಕ್ಷಣಿಕ ಸೇವಾಶ್ರಮದ ಶ್ರೀಮತಿ ಲಕ್ಷ್ಮಮ್ಮ, ಲಾಲಿತ್ಯ ಸಂಗೀತ ಶಾಲೆಯ ಶ್ರೀಮತಿ ಲಲಿತಾಂಬ ಅವರಿಗೆ ನೀಡಿ ಗೌರವಿಸಲಾಯಿತು. ಅಲ್ಲದೆ ಹರಿಕಥಾ ವಿದ್ವಾನ್ ಜಿ.ಸೋಮಶೇಖರದಾಸ್ ಮತ್ತು ಜಾನಪದ ಕಲಾವಿದರಾದ ಕೆ.ನಾಗರಾಜು ಅವರುಗಳಿಗೆ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸ್ಪೂರ್ತಿ ಡೆವಲಪರ್ಸ್‍ನ ಎಸ್.ಪಿ.ಚಿದಾನಂದ್,ಡಾ.ಪಿ.ಚಂದ್ರಪ್ಪ, ನಿವೃತ್ತ ಇಂಜಿನಿಯರ್ ಆದಿನಾರಾಯಣ್, ಛಲವಾದಿ ಕಲಾ ಮತ್ತು ಸಾಂಸ್ಕøತಿಕ ವೇದಿಕೆಯ ಎಸ್.ರಾಜಣ್ಣ,ಎನ್.ಜಗನ್ನಾಥ್, ಹೆಚ್.ಎಸ್.ಪರಮೇಶ್, ಹೆಚ್.ಬಿ.ಪುಟ್ಟ ಬೋರಯ್ಯ, ಕೆ.ಶಿವಕುಮಾರ್, ಡಿ.ಎನ್.ಭೈರೇಶ್,
ಕೆ.ಕುಮಾರ್ ಉಪಸ್ಥಿತರಿದ್ದರು.

(Visited 9 times, 1 visits today)