ತುಮಕೂರು


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸಿ ಇಂದು ಅಧಿಕೃತವಾಗಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರಿಗೆ, ಸಚಿವ ಸಂಪುಟದ ಸಚಿವರುಗಳಿಗೆ ಹಾಗೂ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರು, ನಿಗಮ-ಮಂಡಳಿ, ಪ್ರಾಧಿಕಾರ ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಅಧಿಕಾರಿ, ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎನ್ ನರಸಿಂಹರಾಜು ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿಗಳು ನೀಡಿದ ವಾಗ್ದಾನದಂತೆ ನಿಗದಿತ ಅವಧಿಯೊಳಗೆ 7ನೇ ವೇತನ ಆಯೋಗವನ್ನು ರಚಿಸಿ ಸರ್ಕಾರದ ಆದೇಶ ಹೊರಡಿಸಿರುತ್ತದೆ. ಆದೇಶವು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಆಯೋಗದ ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಆದೇಶದಲ್ಲಿ, ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ವೇತನ ರಚನೆಯನ್ನು ಪರಿಶೀಲಿಸುವುದು, ತುಟ್ಟಿಭತ್ಯೆ ಸೂತ್ರವನ್ನು ನಿರ್ಧರಿಸುವುದು, ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಭತ್ಯೆಗಳ ಪ್ರಮಾಣವನ್ನು ಪರಿಶೀಲಿಸುವುದು, ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಲು ಸೂಚಿಸಿದೆ. ಈ ಹಿಂದಿನ ವೇತನ ಆಯೋಗ ರಚನೆ ಸಂದರ್ಭದಲ್ಲಿ ವೇತನ ಶ್ರೇಣಿ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣೆಗಳಿಗೆ ಒತ್ತು ನೀಡಿ ಆದೇಶಿಸಲಾಗುತ್ತಿತ್ತು.
ಪ್ರಸ್ತುತ ಆದೇಶದಲ್ಲಿ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ವಿಜಯಭಾಸ್ಕರ್ ರವರ ನೇತೃತ್ವದ ಸಮಿತಿ ಇರುವುದರಿಂದ ಈ ಬಗ್ಗೆ ಪ್ರಸ್ತಾಪಿಸಿರುವುದಿಲ್ಲ. 2023ನೇ ಮಾರ್ಚ್ ಅಂತ್ಯದೊಳಗೆ 7ನೇ ವೇತನ ಆಯೋಗದ ಪರಿಷ್ಕøತ ವೇತನ ಶ್ರೇಣಿ ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ನಿರೀಕ್ಷೆಯನ್ನು ಸಂಘವು ಹೊಂದಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸತತ ಪ್ರಯತ್ನದ ಫಲವಾಗಿ ಅವಧಿ ಪೂರ್ವದಲ್ಲಿಯೇ 7ನೇ ವೇತನ ಆಯೋಗದ ರಚನೆಯ ಐತಿಹಾಸಿಕ ಆದೇಶ ಪಡೆಯುವಲ್ಲಿ ಸಂಘವು ಯಶಸ್ವಿಯಾಗಿರುತ್ತದೆ. ರಾಜ್ಯದ 6.00 ಲಕ್ಷ ಸರ್ಕಾರಿ ಅಧಿಕಾರಿ/ನೌಕರರರು, 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯ, ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ 4.00 ಲಕ್ಷ ನಿವೃತ್ತ ನೌಕರರು 7ನೇ ವೇತನ ಆಯೋಗದ ಲಾಭ ಪಡೆಯಲಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎನ್ ನರಸಿಂಹರಾಜು ತಿಳಿಸಿದ್ದಾರೆ.

(Visited 1 times, 1 visits today)