ತುಮಕೂರು :

      ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಮಹಾನಗರ ಪಾಲಿಕೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಭರಿಸದೆ ನಾಲ್ಕಾರು ವರ್ಷಗಳಿಂದ ಠಿಕಾಣಿ ಹೂಡಿದ್ದ ವ್ಯಾಪಾರಿಗಳಿಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಶಾಕ್ ನೀಡಿದ್ದಾರೆ.

      ಮಳಿಗೆಗಳಿಗೆ ದಿಢೀರನೆ ಭೇಟಿ ನೀಡಿ ಬಾಕಿ ಉಳಿಸಿಕೊಂಡಿದ್ದ ಸುಮಾರು 1 ಕೋಟಿ ಮೊತ್ತದ ಬಾಡಿಗೆಯನ್ನು ವಸೂಲಿ ಮಾಡಿದ್ದಾರೆ. ಸಕಾಲಕ್ಕೆ ಬಾಡಿಗೆ ಕಟ್ಟಲು ಹಿಂದೇಟು ಹಾಕಿದ 8 ಮಳಿಗೆಗಳ ಬಾಗಿಲನ್ನು ಬಂದ್ ಮಾಡಿಸಿದ್ದಾರೆ.

      ಕೆಲವು ಮಳಿಗೆಗಳ ಬಾಡಿಗೆ ಮೊತ್ತವನ್ನು ಚೆಕ್ ಮೂಲಕ ಪಡೆದಿರುವ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು `ಮಾರ್ಚ್ 10ರ ಒಳಗೆ ಬಾಡಿಗೆಯು ಪಾಲಿಕೆಯ ಖಾತೆಗೆ ಸಂದಾಯ ಆಗಬೇಕು’ ಎಂದು ವ್ಯಾಪಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕೆಲವರ ಬಳಿ ನಗದಿನ ರೂಪದಲ್ಲಿ ಬಾಡಿಗೆ ವಸೂಲಿ ಮಾಡಿದ್ದಾರೆ.ಪಾಲಿಕೆಯ ಮಳಿಗೆಗಳನ್ನು ಟೆಂಡರ್ ಮೂಲಕ ಪಡೆದಿರುವ 20ಕ್ಕೂ ಹೆಚ್ಚು ವ್ಯಾಪಾರಿಗಳು ನಾಲ್ಕೈದು ವರ್ಷಗಳಿಂದ ಬಾಡಿಗೆ ಪಾವತಿಸಿರಲಿಲ್ಲ. ಇದರಲ್ಲಿ ಕನಿಷ್ಠ 20,000 ಗರಿಷ್ಠ 10 ಲಕ್ಷದ ವರೆಗೂ ಬಾಡಿಗೆ ಬಾಕಿ ಉಳಿಸಿಕೊಂಡ ವ್ಯಾಪಾರಿಗಳೂ ಇದ್ದರು.

      `ನಾಲ್ಕು ತಿಂಗಳಿನಿಂದ ಹಿಡಿದು ನಾಲ್ಕು ವರ್ಷಗಳ ವರೆಗೂ ಬಾಡಿಕೆ ಕಟ್ಟದವರೂ ಇದ್ದರು. ಸಕಾಲಕ್ಕೆ ಬಾಡಿಗೆ ಕಟ್ಟಲು ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಂತಹ ಪ್ರಭಾವಿಗಳೇ ವ್ಯಾಪಾರಿಗಳ ಬೆಂಬಲಕ್ಕೆ ಬರಲಿ. ನಾವು ಲೆಕ್ಕಿಸುವುದಿಲ್ಲ. ಬಾಕಿಯನ್ನು ವಸೂಲಿ ಮಾಡುತ್ತೇವೆ’ ಎಂದು ಟಿ.ಭೂಬಾಲನ್ ಅವರು ತಿಳಿಸಿದರು.

(Visited 17 times, 1 visits today)